ಪಣಿಯಾಡಿ ಪ್ರಶಸ್ತಿಗೆ 'ದಧೂಟಿ ಬನ' ಕಾದಂಬರಿ ಆಯ್ಕೆ

ಪಣಿಯಾಡಿ ಪ್ರಶಸ್ತಿಗೆ ಅಯ್ಕೆಯಾದ ಸಾಹಿತಿ ಸುಲೋಚನಾ ಪಿ.ಕೆ.
ಪಣಿಯಾಡಿ ಪ್ರಶಸ್ತಿಗೆ ಅಯ್ಕೆಯಾದ ಸಾಹಿತಿ ಸುಲೋಚನಾ ಪಿ.ಕೆ.
Published on

* ಪುತ್ತೂರಿನ ಸಾಹಿತಿ ಸುಲೋಚನಾ ಪಿ.ಕೆ. ಅವರ ಕೃತಿ

ಉಡುಪಿ: ಉಡುಪಿ ತುಳುಕೂಟದ ವತಿಯಿಂದ ನೀಡಲಾಗುವ 'ಎಸ್​.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ'ಗೆ ಪುತ್ತೂರಿನ ಸಾಹಿತಿ ಸುಲೋಚನಾ ಪಿ.ಕೆ. ಅವರ ದಧೂಟಿ ಬನ' ಕಾದಂಬರಿ ಆಯ್ಕೆಯಾಗಿದೆ. 
ತುಳು ಭಾಷೆ ಚಳವಳಿಯ ಪ್ರವರ್ತಕರಾಗಿದ್ದ ದಿ. ಎಸ್​.ಯು. ಪಣಿಯಾಡಿ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಇನ್ನೂ ಮುದ್ರಣಗೊಳ್ಳದ ತುಳು ಕಾದಂಬರಿಕಾರರಿಗೆ ಉಡುಪಿ ತುಳುಕೂಟವು 31 ವರ್ಷದಿಂದ ಈ ಪುರಸ್ಕಾರ ನೀಡುತ್ತಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಫಲಕ ಒಳಗೊಂಡಿದೆ.
ಸಾಹಿತಿ ಸುಲೋಚನಾ ಅವರು ಪುತ್ತೂರು ತಾಲೂಕು ಉಪತಹಸೀಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ 'ಸತ್ಯದರ್ಶನ' ಕೃತಿಗೆ ಜಿ.ಪಿ. ರಾಜರತ್ನಂ ದತ್ತಿ ಪ್ರಶಸ್ತಿ ಲಭಿಸಿದೆ. 'ಅಮ್ಮನ ಮಾತ್​ ಭಸ್ಮ ಕಟ್ಟಿದ ತಗಡ್ನ ತಾಯತಾತ್​' ಕೃತಿಗೆ ಅರೆಭಾಷೆ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಕೊಡುವ ಮೊದಲು, ಸೊನ್ನೆ ಕವನಸಂಕಲನ, ಶ್ರೀ ಸಾಯಿ ಶತನಮನ ಭಜನಾಮೃತ, ಮೂಗಿಯ ಮನದೊಳು ಕಾದಂಬರಿ, ಸಖಿ ವಚನ ಕೃತಿಗಳು ಪ್ರಕಟಗೊಂಡಿವೆ.
ಪಣಿಯಾಡಿ ಕಾದಂಬರಿ ಸ್ಪರ್ಧೆಯ ತೀರ್ಪುಗಾರರಾಗಿ ಸಾಹಿತಿಗಳಾದ ಡಾ. ವಿ.ಕೆ. ಯಾದವ್​, ವಾಸಂತಿ ಅಂಬಲಪಾಡಿ, ಪುಷ್ಪಪ್ರಸಾದ್​ ಸಹಕರಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್​ನಲ್ಲಿ ಉಡುಪಿಯಲ್ಲಿ ನಡೆಯಲಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್​ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ ಗಂಗಾಧರ್​ ಕಿದಿಯೂರು, ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಂಚಾಲಕ ಪ್ರಕಾಶ್​ಸುವರ್ಣ ಕಟಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net