ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮಹಿಳಾ ಸಬಲೀಕರಣ ಘಟಕದ ವತಿಯಿಂದ ಕಾಲೇಜಿನಲ್ಲಿ ವಿಜ್ಞಾನ ವಿಸ್ಮಯ ಸಮುದಾಯ ರೇಡಿಯೋ ಕಾರ್ಯಕ್ರಮ ಸೀಸನ್-1 ಇತ್ತೀಚೆಗೆ ನಡೆಯಿತು.
ಮಾಹೆಯ ರೇಡಿಯೋ ಸಂಯೋಜಕಿ ಡಾ.ರಶ್ಮಿ ಅಮ್ಮೆಂಬಳ ಮಾತನಾಡಿ, ಸಮುದಾಯ ರೇಡಿಯೋ ಕಾರ್ಯಕ್ರಮವು ಜ್ಞಾನ ಮತ್ತು ಸಂಸ್ಕೃತಿಯನ್ನು ಸಂಪರ್ಕಿಸುವ ಸೇತುವೆಯಾಗಿದೆ. ಇಂತಹ ಕಾರ್ಯಕ್ರಮಗಳು ಸ್ಥಳೀಯ ಧ್ವನಿಗಳಿಗೆ ಶಕ್ತಿ ನೀಡುತ್ತದೆ ಹಾಗೂ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳು ಕ್ರೀಯಾಶೀಲ ಸಂವಹನ ವೇದಿಕೆಯನ್ನು ಅನ್ವೇಷಿಸಿ ನವೀನ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಸಂಸ್ಥೆಯ ಶೈಕ್ಷಣಿಕ ಡೀನ್ ಡಾ.ನಾಗರಾಜ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯು ಸಮುದಾಯ ರೇಡಿಯೋ ಆಧಾರಿತ ಅಧ್ಯಯನ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸಂವಹನ ಕೌಶಲ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ವೃದ್ಧಿಸುತ್ತದೆ ಎಂದರು.
ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ಮೇಘಾ ರಾಣಿ, ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ಸಚಿನ್ ಪ್ರಭು, ವಿವಿಧ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.