ಮಕ್ಕಳಲ್ಲಿ ಕೃಷಿ ಬೆಳೆಯುವ, ವ್ಯಾಪಾರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮ ವಿಶೇಷವಾಗಿ ಆಕರ್ಷಣೆಗೆ ಪಾತ್ರವಾಯಿತು. ಮಕ್ಕಳಲ್ಲಿ ಕೃಷಿ ಬಗ್ಗೆ ಜಾಗೃತಿ, ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಈ ಶಾಲೆ ತೋಟದಲ್ಲಿ ಕೃಷಿ ಚಟುವಟಿಕೆಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗಿದೆ. ಅದರ ಭಾಗವಾಗಿ ಈ ಬಾರಿಯ ವಿದ್ಯಾರ್ಥಿಗಳು ತಾವೇ ಬೆಳೆದ ವಿವಿಧ ಬಗೆಯ ತರಕಾರಿಗಳನ್ನು ತಾವೇ ಮಾರಾಟ ಮಾಡಿ ಗಮನ ಸೆಳೆದರು. ಬೆಂಡೆಕಾಯಿ, ಬದನೆಕಾಯಿ, ಕಾಯಿ ಮೆಣಸು, ಸೌತೆಕಾಯಿ, ಬಸಳೆ, ತೊಂಡೆಕಾಯಿ, ಕುಂಬಳಕಾಯಿ, ಹಲಸಿನಕಾಯಿ, ಸೋರೆಕಾಯಿ ಮುಂತಾದ ತರಕಾರಿಗಳನ್ನು ವಿದ್ಯಾರ್ಥಿಗಳೇ ಕಟಾವು ಮಾಡಿ ಮಾರಾಟಕ್ಕೆ ಸಿದ್ಧಪಡಿಸಿದರು.