ಶಾಲೆಗಳು ಸಮಾಜಕ್ಕೆ ಶಕ್ತಿ ಕೊಡುವ ಕೇಂದ್ರ

 ಸಿದ್ದಾಪುರ ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳ ಮಕ್ಕಳಿಗೆ ಪುರೋಹಿತ ಸೂರಜ್ ಆಚಾರ್ಯ ಅವರು ಅಕ್ಷರಾಭ್ಯಾಸ ಮಾಡಿಸಿದರು.
ಸಿದ್ದಾಪುರ ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳ ಮಕ್ಕಳಿಗೆ ಪುರೋಹಿತ ಸೂರಜ್ ಆಚಾರ್ಯ ಅವರು ಅಕ್ಷರಾಭ್ಯಾಸ ಮಾಡಿಸಿದರು.
Published on
ಬೈಂದೂರು: ಶಾಲೆಗಳು ಕೇವಲ ಕಲ್ಲು ಮಣ್ಣಿನಿಂದ ಕಟ್ಟಿದ ಕಟ್ಟಡವಲ್ಲ. ಇದೊಂದು ಯಜ್ಞಭೂಮಿಯಾಗಿದ್ದು, ಸಮಾಜಕ್ಕೆ ಶಕ್ತಿ ಕೊಡುವ ಕೇಂದ್ರವಾಗಿದೆ. ಇಲ್ಲಿ ಧನಾತ್ಮಕ ಚಿಂತನೆಗಳು ದೊಡ್ಡ ಶಕ್ತಿಯಾಗಬೇಕು. ಇಂತಹ ಸಂಸ್ಥೆಗಳಲ್ಲಿ ಮಕ್ಕಳಿಗೆ ನಮ್ಮ ನೆಲದ ಸಂಸ್ಕೃತಿ, ಭಾವನಾತ್ಮಕ ವ್ಯಕ್ತಿತ್ವ ವಿಕಸನದ ಜತೆಗೆ ಸಂಸ್ಕಾರಯುಕ್ತ ಶಿಕ್ಷಣ ಸಿಗುವಂತಾಗಬೇಕು ಎಂದು ಪುರೋಹಿತ ಸೂರಜ್ ಆಚಾರ್ಯ ಹೇಳಿದರು.
ಸಿದ್ದಾಪುರ ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳು, ಜ್ಞಾನಸರಸ್ವತಿ ಸಿಬಿಎಸ್‌ಇ ಶಾಲೆ, ಸರಸ್ವತಿ ವಿದ್ಯಾಲಯದ ನರ್ಸರಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಸೋಮವಾರ ನಡೆದ ಅಕ್ಷರಾಭ್ಯಾಸ ಕಾರ್ಯದ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ಸಮಾಜದ ಎಲ್ಲ ವೃತ್ತಿಗಳೂ ಮಹತ್ವಪೂರ್ಣ. ಆದರೂ ಶಿಕ್ಷಕರು ಮಾನವ ಸಂಪತ್ತನ್ನು ಶ್ರೀಮಂತಗೊಳಿಸುವ ಧೀಮಂತರು. ಹಸಿ ಮಣ್ಣಿನಂತಿರುವ ಮಕ್ಕಳನ್ನು ಸುಂದರ ಮೂರ್ತಿಯಾಗಿಸುವ, ಜೀವಕಳೆ ಕೊಡುವ ಶಿಲ್ಪಕಾರರು. ಶಿಕ್ಷಕರೆಂದರೆ ಎಳೆಯ ಮಕ್ಕಳಿಗೆ ಶಿಷ್ಟಾಚಾರ, ವಿವೇಕ, ವಿನಯ ಕಲಿಸುವವರು, ವಿದ್ವತ್ತನ್ನು ನೀಡುವವರು. ವಿನಮ್ರತೆ, ವಿಧೇಯತೆ, ಪ್ರಾಮಾಣಿಕತೆ, ದೇಶಪ್ರೇಮದ ಎರಕ ಹೊಯ್ಯುವವರು. ಹಾಗಾಗಿ ದೇಶದ ಉಜ್ವಲ ಭವಿಷ್ಯ ಶಿಕ್ಷಕರ ಕರ್ತವ್ಯನಿಷ್ಠೆ ಮೇಲೆ ನಿರ್ಭರವಾಗಿದೆ. ಅದನ್ನು ಸದಾ ಪಾಲಿಸಬೇಕು ಎಂದರು.
ಪಾಲಕರ ಮೂಲಕ ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ವಿಧಿವತ್ತಾಗಿ ಅಕ್ಷರಾಭ್ಯಾಸ ಮಾಡಿಸಲಾಯಿತು. ಪ್ರಾಂಶುಪಾಲ ಅಮರೇಶ್ ಕುಮಾರ್ ಹೆಗ್ಡೆ, ಉಪ ಪ್ರಾಂಶುಪಾಲ ಹರ್ಷ ಶೆಟ್ಟಿ ಆಜ್ರಿ ಮತ್ತು ಸರಸ್ವತಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ವೇತಾ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net