ಹೆಮ್ಮಾಡಿ ಸೇವಂತಿಗೆಗೆ ಸಂಕ್ರಾಂತಿ ಕಾಲ

ಹೆಮ್ಮಾಡಿ ಭಾಗದಲ್ಲಿ ಬೆಳೆದು ನಿಂತಿರುವ ಸೇವಂತಿಗೆ ಹೂ
ಹೆಮ್ಮಾಡಿ ಭಾಗದಲ್ಲಿ ಬೆಳೆದು ನಿಂತಿರುವ ಸೇವಂತಿಗೆ ಹೂ
Published on
ರಾಘವೇಂದ್ರ ಪೈ ಕುಂದಾಪುರ
ಈ ಬಾರಿ ಚಳಿ ಹಾಗೂ ಇಬ್ಬನಿ ಉತ್ತಮವಾಗಿರುವುದು ಹೆಮ್ಮಾಡಿ ಸೇವಂತಿಗೆ ಬೆಳೆಗಾರರಿಗೆ ವರದಾನವಾಗಿದ್ದು, ಎಲ್ಲ ಗದ್ದೆಗಳಲ್ಲಿಯೂ ಉತ್ತಮ ಫಸಲು ಬಂದಿದೆ. ಉತ್ತಮ ಹವಾಮಾನದಿಂದ ನಿರೀಕ್ಷಿಸಿದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೇವಂತಿಗೆ ಹೂಗಳು ಅರಳಿದ್ದು, ಬೆಳೆಗಾರರಿಗೆ ಖುಷಿ ತಂದಿದೆ. ಸೇವಂತಿಗೆಗೆ ಬಹುದೊಟ್ಟ ಮಾರುಕಟ್ಟೆ ಕಲ್ಪಿಸುವ ಪ್ರಸಿದ್ಧ ಮಾರಣಕಟ್ಟೆಯ ಜಾತ್ರೆಯಲ್ಲಿ ಉತ್ತಮ ದರ ಸಿಕ್ಕರೆ, ಬೆಳೆಗಾರರಿಗೆ ಸಂಕ್ರಾಂತಿ ಮತ್ತಷ್ಟು ಸಿಹಿ ತರಲಿದೆ.
ಹೆಮ್ಮಾಡಿ, ಕಟ್‌ಬೆಲ್ತೂರು, ಕೆಂಚನೂರು ಗ್ರಾಮಗಳ ಕಟ್ಟು, ಜಾಲಾಡಿ-ಹೊಸ್ಕಳಿ, ಸಂತೋಷನಗರ ಹರೇಗೋಡು, ಕೆಂಚನೂರು ಭಾಗದಲ್ಲಿ 50 ರಿಂದ 60ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ 50ಕ್ಕೂ ಮಿಕ್ಕಿ ಬೆಳೆಗಾರರು ಸೇವಂತಿಗೆ ಬೆಳೆದಿದ್ದಾರೆ. ಈ ಬಾರಿ ನವೆಂಬರ್, ಡಿಸೆಂಬರ್‌ವರೆಗೂ ಮಳೆ ಬಂದ ಕಾರಣ ನೀರಿನ ಕೊರತೆಯಾಗಿಲ್ಲ. ಎಲ್ಲ ಬೆಳೆಗಾರರಿಗೂ ನಿರೀಕ್ಷಿಸಿದಷ್ಟು ಇಳುವರಿ ಬಂದಿದೆ. ಮಾರಣಕಟ್ಟೆ ಹಬ್ಬಕ್ಕೆ ಜಾಸ್ತಿ ಹೂವಿನ ಬೇಡಿಕೆ ಇರುವುದರಿಂದ ಒಂದೇ ಸಮಯದಲ್ಲಿ ಕೊಯ್ದು ಕಟ್ಟಿ ಮಾರಬೇಕಾಗಿರುತ್ತದೆ. ಆದರೆ ಈ ಬಾರಿ ಹೂವು ಜಾಸ್ತಿಯಿದ್ದು ಕೊಯ್ಯಲು ಜನರೇ ಸಿಗುತ್ತಿಲ್ಲ.
ಒಂದು ಸಾವಿರ ಹೂ ಕೊಯ್ದರೆ 50 ರೂ. ನೀಡುತ್ತಿದ್ದು, ದಿನಕ್ಕೆ ಒಬ್ಬೊಬ್ಬರು ತಲಾ 15 ಸಾವಿರಕ್ಕೂ ಹೆಚ್ಚು ಹೂ ಕೊಯ್ಯುತ್ತಾರೆ. ಕೆಲವೇ ಕೆಲವು ಮಂದಿ ಮಾತ್ರ ಇದ್ದು, ಅವರಿಗೆ ಬೇಡಿಕೆಯೂ ಜಾಸ್ತಿಯಿದೆ. ಇದರಿಂದ ಅರಳಿದ ಹೂ ಕೊಯ್ಯಲು ಜನ ಸಿಗದೆ ಹಾಳಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಸೇವಂತಿಗೆ ಬೆಳೆಗಾರರು.

ಮಾರಣಕಟ್ಟೆ ಜಾತ್ರೆಗೆ 50 ಲಕ್ಷಕ್ಕೂ ಹೆಚ್ಚು ಬೇಡಿಕೆ

ಜ.14, 15ರಂದು ನಡೆಯುವ ಮಾರಣಕಟ್ಟೆ ಜಾತ್ರೆ ಈ ಭಾಗದ ದೊಡ್ಡ ಹಬ್ಬಗಳಲ್ಲಿ ಒಂದು. ಹೆಮ್ಮಾಡಿ ಸೇವಂತಿಗೆ ಹೂವಿಗೆ ಅತಿ ದೊಡ್ಡ ಮಾರುಕಟ್ಟೆಯೇ ಈ ಹಬ್ಬ. ಜಾತ್ರೆಯಂದು 50 ಲಕ್ಷಕ್ಕೂ ಹೆಚ್ಚು ಹೂವಿನ ಬೇಡಿಕೆಯಿರುತ್ತದೆ. ಹಿಂದೆಲ್ಲ ಒಬ್ಬೊಬ್ಬ ಬೆಳೆಗಾರರು ಕನಿಷ್ಠ 3 ರಿಂದ 4 ಲಕ್ಷ ಹೂ ಕೊಯ್ದು ಹಬ್ಬಕ್ಕೆ ಕೊಡುತ್ತಿದ್ದರು. ಈ ಬಾರಿಯೂ 1 ರಿಂದ 2 ಲಕ್ಷ ಹೂವು ಕೊಡುವಷ್ಟು ಬೆಳೆದಿದ್ದಾರೆ. ಈಗ ಒಂದು ಸಾವಿರ ಹೂವಿಗೆ 200 ರೂ. ಇದ್ದು ಹಬ್ಬದ ದಿನ 300 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆ ಇರುತ್ತದೆ. ಆಗ ಬೆಳೆಗಾರರಿಗೆ ಉತ್ತಮ ಲಾಭ ಸಿಗುತ್ತದೆ ಎನ್ನುತ್ತಾರೆ ಸೇವಂತಿಗೆ ಬೆಳೆಗಾರ ಪ್ರಶಾಂತ್ ಭಂಡಾರಿ ಹೆಮ್ಮಾಡಿ.

ಮೊದಲ ಬೆಳೆ ಬ್ರಹ್ಮಲಿಂಗೇಶ್ವರನಿಗೆ ಅರ್ಪಣೆ

ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಪ್ರಿಯವಾದ ಸೇವಂತಿಗೆ ಭೌಗೋಳಿಕತೆ, ಹವಾಮಾನ ಹಾಗೂ ತಳಿ ಪ್ರಬೇಧದಿಂದ ವಿಶಿಷ್ಟವಾಗಿ ಗುರುತಿಸಿಕೊಂಡ ಹೆಮ್ಮಾಡಿ ಸೇವಂತಿಗೆಗೆ ಮಾರಣಕಟ್ಟೆಯ ಮಕರ ಸಂಕ್ರಾಂತಿ ಜಾತ್ರೆಯಲ್ಲಿ ವಿಶೇಷ ಪ್ರಾಶಸ್ತ್ಯವಿದೆ. ಮೊದಲು ಬೆಳೆದ ಹೂನ್ನು ಬೆಳೆಗಾರರು ಬ್ರಹ್ಮಲಿಂಗೇಶ್ವರನಿಗೆ ಸಮರ್ಪಿಸುತ್ತಾರೆ. ಆ ಬಳಿಕ ಕುಂದಾಪುರ, ಬೈಂದೂರು ಭಾಗದಲ್ಲಿ ಮಾರ್ಚ್‌ವರೆಗೆ ಬಹುತೇಕ ಎಲ್ಲ ಜಾತ್ರೆ, ಕೆಂಡೋತ್ಸವಗಳಿಗೆ ಹೆಮ್ಮಾಡಿ ಸೇವಂತಿಗೆಗೆ ಬೇಡಿಕೆ ಇರುತ್ತದೆ.

ಈ ಬಾರಿ ಹೂ ಸಿಕ್ಕಾಪಟ್ಟೆಯಿದೆ. ಊರಿನ ಹೂ ಮಾತ್ರವಲ್ಲದೆ, ಘಾಟಿ ಹೂಗಳನ್ನೂ ಕೆಲವರು ಬೆಳೆದಿದ್ದಾರೆ. ಹವಾಮಾನ ಉತ್ತಮವಾಗಿದ್ದರಿಂದ ಉತ್ತಮ ಬೆಳೆ ಬಂದಿದೆ. ಆದರೆ ಕೊಯ್ಯಲು ಜನರಿಲ್ಲದೆ ಸಮಸ್ಯೆಯಾಗುತ್ತಿದೆ. ಈ ಬಾರಿಯೂ ಹೂಗೆ ನುಸಿ ಕಾಟವಿದೆ. ಇಳುವರಿ ಜಾಸ್ತಿ ಇರುವುದರಿಂದ ಬೆಲೆ ಸ್ವಲ್ಪ ಕಡಿಮೆಯಾಗಬಹುದು. ಆದರೂ ಕೆಲವೊಮ್ಮೆ ಹಬ್ಬಕ್ಕೆ ಜನ ಜಾಸ್ತಿ ಬಂದರೆ ಬೇಡಿಕೆ ಜಾಸ್ತಿ ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net