ಕಣ್ಮುಚ್ಚಿ ಕುಳಿತ ಧ್ಯಾನದಿಂದ ಲಭಿಸದು ಮೋಕ್ಷ

ಉಡುಪಿಯ ರಾಜಾಂಗಣದಲ್ಲಿ ಸಂತ ಸಂದೇಶ ನೀಡಿದ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್​ಗೆ ಸುಗುಣೇಂದ್ರ ಶ್ರೀಗಳು 'ಶ್ರೀಕೃಷ್ಣ ಗೀತಾನುಗ್ರಹ' ಪ್ರಶಸ್ತಿ ನೀಡಿದರು. ಸುಶ್ರೀಂದ್ರ ಶ್ರೀ, ಪ್ರಸನ್ನ ಆಚಾರ್ಯ ಇತರರಿದ್ದರು.
ಉಡುಪಿಯ ರಾಜಾಂಗಣದಲ್ಲಿ ಸಂತ ಸಂದೇಶ ನೀಡಿದ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್​ಗೆ ಸುಗುಣೇಂದ್ರ ಶ್ರೀಗಳು 'ಶ್ರೀಕೃಷ್ಣ ಗೀತಾನುಗ್ರಹ' ಪ್ರಶಸ್ತಿ ನೀಡಿದರು. ಸುಶ್ರೀಂದ್ರ ಶ್ರೀ, ಪ್ರಸನ್ನ ಆಚಾರ್ಯ ಇತರರಿದ್ದರು.
Published on

ಗೀತೋತ್ಸವದಲ್ಲಿ ಸಂತ ಸಂದೇಶ-ಸನ್ಮಾನ

ಉಡುಪಿ: ಸುಮ್ಮನೆ ಕುಳಿತು ಮನಸ್ಸು ಖಾಲಿ ಮಾಡಿಸುವ ಇಂದಿನ 'ಮೆಡಿಟೇಶನ್​' ಕೋರ್ಸ್​ ನಿಜವಾದ ಧ್ಯಾನವಲ್ಲ. ಅದರಿಂದ ಎಲ್ಲ ಜಂಜಾಟಗಳಿಂದ ಒಮ್ಮೆ ಹೊರ ಬರಬಹುದು. ಕಣ್ಮುಚ್ಚಿ ಕುಳಿತುಕೊಂಡರೆ ಅದು ಧ್ಯಾನವಲ್ಲ, ಅದರಿಂದ ಮೋಕ್ಷ ಲಭಿಸದು ಎಂದು ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದಿಂದ ಮುಂದುವರಿದ ಮಾಸಿಕ 'ಬೃಹತ್​ ಗೀತೋತ್ಸವ'ದಲ್ಲಿ ಶನಿವಾರ (ನ.29) ಆಯೋಜಿಸಿದ್ದ ಸಂತ- ಸಂದೇಶ-ಸಂತ -ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಹಿರಿಯರಿಂದ ಚಿಂತನೆ ಅಗತ್ಯ

ಪಾತ್ರೆ ತೊಳೆದಿಟ್ಟರೆ ಅಡುಗೆ ಮಾಡಿದಂತಲ್ಲ. ಅದರಲ್ಲಿ ಅಡುಗೆ ಮಾಡಿದರೆ ಮಾತ್ರ ಊಟ ಮಾಡಬಹುದು. ಹೀಗಾಗಿ ಮೆಡಿಟೇಶನ್​ ಅಂದರೆ ಪಾತ್ರೆ ತೊಳೆದಿಟ್ಟಂತೆ. ಶಾಸ್ತ್ರೀಯ ಪ್ರಕಾರದಲ್ಲಿ ಗುರು ಹಿರಿಯರಿಂದ ಕೇಳಿ ತಿಳಿದುಕೊಳ್ಳಬೇಕು. ದೇವರ ಬಗ್ಗೆ, ಜಗತ್ತು, ಆತ್ಮ ಹಾಗೂ ಸಂಸಾರದ ಬಗ್ಗೆ ತತ್ವ ಚಿಂತನೆಯ ಬಳಿಕ ಧ್ಯಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದರು.

ಗೀತೆಯಿಂದ ಮನುಷ್ಯ ಜೀವನದ ಕಲ್ಯಾಣ

ಸಂತ ಸಂದೇಶ ನೀಡಿದ ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕವಳೆ ಮಠದ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್​ ಮಾತನಾಡಿ, ಶ್ರೀಕೃಷ್ಣನ ಮೂಲಕ ಅರ್ಜುನನಿಗೆ ಬೋಧಿಸಲ್ಪಟ್ಟ ಗೀತೆಯ ಸಂದೇಶ ಕೇವಲ ಹಿಂದು ಧರ್ಮಕ್ಕೆ ಸೀಮಿತವಲ್ಲ. ಯಾವುದೇ ವಯಸ್ಸು, ಲಿಂಗ, ಜಾತಿ, ಧರ್ಮದ ಗಡಿಯೂ ಅದಕ್ಕಿಲ್ಲ. ಯಾರೆಲ್ಲ ಗೀತೆಯನ್ನು ಓದುತ್ತಾರೋ, ಬರೆಯುತ್ತಾರೋ ಅಥವಾ ಗೀತೆಯ ಸಾರವನ್ನು ಅಳವಡಿಸಿಕೊಳ್ಳುತ್ತಾರೆಯೋ ಅವರಿಗೆಲ್ಲ ಶ್ರೀಕೃಷ್ಣನ ಕೃಪೆ ಲಭಿಸುತ್ತದೆ. ಅವರ ಕುಟುಂಬಕ್ಕೂ ಒಳಿತಾಗುತ್ತದೆ. ಕೃಷ್ಣಂ ವಂದೇ ಜಗದ್ಗುರು ಎನ್ನುವುದು ವಿಶ್ವಮಾನ್ಯ. ವಿಷ್ಣುವಿನ ದಶಾವತಾರದಲ್ಲಿ ಶ್ರೀರಾಮಚಂದ್ರ ಮತ್ತು ಶ್ರೀಕೃಷ್ಣ ಮಾತ್ರ ಸಂಪೂರ್ಣವಾದ ಅವತಾರವಾಗಿದೆ. ಗೀತೆಯ ಅನುಸರಣೆಯಿಂದ ಮನುಷ್ಯ ಜೀವನದ ಕಲ್ಯಾಣ ಸಾಧ್ಯ ಎಂದರು.

'ಶ್ರೀಕೃಷ್ಣ ಗೀತಾನುಗ್ರಹ' ಪ್ರಶಸ್ತಿ ಪ್ರದಾನ

ಪರ್ಯಾಯ ಪುತ್ತಿಗೆ ಮಠದಿಂದ ಸುಗುಣೇಂದ್ರ ಶ್ರೀಗಳು ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್​, ಹಾಗೂ ಚಂದ್ರಶೇಖರ ಹೆಬ್ಬಾರ್​, ರಾಮಚಂದ್ರ ಭಟ್​ ಚೆನ್ನೈ ಅವರಿಗೆ 'ಶ್ರೀಕೃಷ್ಣ ಗೀತಾನುಗ್ರಹ' ಪ್ರಶಸ್ತಿ ನೀಡಿ ಗೌರವಿಸಿದರು. ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ಪುತ್ತಿಗೆ ಮಠದ ವಿದ್ವಾಂಸ ಸಮರ್ಥ ಜೋಶಿ ವೇದಘೋಷ ಪಠಿಸಿದರು. ಮಠದ ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್​ ತಂತ್ರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​, ರವೀಂದ್ರ ಆಚಾರ್ಯ ಸಹಕರಿಸಿದರು.
"

ಉಡುಪಿಯಲ್ಲಿ ನಡೆದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾಗಿಯಾಗಿಸುವ ಸಂಕಲ್ಪದ ಮೂಲಕ ಭಗವದ್ಗೀತೆಯು ವಿಶ್ವಮಾನ್ಯ ಗ್ರಂಥ ಎನ್ನುವುದನ್ನು ಉಡುಪಿಯ ಮಠದ ಮೂಲಕ ಜಗತ್ತಿಗೆ ತೋರ್ಪಡಿಸುವ ಕಾರ್ಯ ಮಾಡಿದ್ದೇವೆ. ದೇಶದ ಪ್ರಧಾನಿಯೇ ಗೀತಾ ಪಾರಾಯಣದಲ್ಲಿ ಪಾಲ್ಗೊಂಡಿರುವುದು ಅತ್ಯಂತ ಸಂತಸ ತಂದಿದೆ. ಅವರ ಆಗಮನದಿಂದ ಸಮಗ್ರ ಭಾರತವೇ ಭಗವದ್ಗೀತೆಯನ್ನು ಗೌರವಿಸುತ್ತದೆ. ಅಂತಹ ಚಿತ್ರಣ ನಮಗೆ ಸ್ಪಷ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net