ಸೈಫುದ್ದೀನ್​ ಹತ್ಯೆ ಪ್ರಕರಣ; ಬಂಧಿತರ ವಿರುದ್ಧ ಕೋಕಾ ಕಾಯಿದೆ

ಉಡುಪಿ ಜಿಲ್ಲೆ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​.
ಉಡುಪಿ ಜಿಲ್ಲೆ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​.
Published on

* ಉಡುಪಿ ಎಸ್ಪಿ ಹರಿರಾಂ ಶಂಕರ್​ ಮಾಹಿತಿ

* ವಿದೇಶದಲ್ಲಿ ತಲೆಮರೆಸಿಕೊಂಡ ಪ್ರಮುಖ ಆರೋಪಿ

ಉಡುಪಿ: ಮಲ್ಪೆಯ ಕೊಡವೂರು ನಾಗಬನದ ಸಮೀಪ ಸೆ.27ರಂದು ಎಚ್​ಎ ಮಂಜಿಲ್​ ಮನೆಯಲ್ಲಿ ನಡೆದಿದ್ದ ಉಡುಪಿಯ ಎಕೆಎಂಎಸ್​ ಖಾಸಗಿ ಬಸ್​ನ ಮಾಲೀಕ ಸೈಫುದ್ದೀನ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ಜೈಲು ಸೇರಿರುವ ಐವರು ಆರೋಪಿಗಳು ಹಾಗೂ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಯ ವಿರುದ್ಧ ಕೋಕಾ ಕಾಯಿದೆ (ಸೆಕ್ಷನ್​-3) ಅಳವಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​ ಮಾಹಿತಿ ನೀಡಿದ್ದಾರೆ.
76 ಬಡಗಬೆಟ್ಟು ಗ್ರಾಮದ ಮಿಷನ್​ ಕಾಂಪೌಂಡ್​ ಸಮೀಪದ ಅಪಾರ್ಟ್​ಮೆಂಟೊಂದರ ನಿವಾಸಿ ಮಹಮ್ಮದ್​ ಫೈಸಲ್​ ಖಾನ್​ (27), ಕರಂಬಳ್ಳಿ ಜನತಾ ಕಾಲನಿ ನಿವಾಸಿ ಮಹಮ್ಮದ್​ ಶರೀಫ್ (37), ಮಂಗಳೂರಿನ ಕಾಟಿಪಳ್ಳ ಗ್ರಾಮದ ಲಂಡನ್​ ಪಾರ್ಕ್​ ಹಿಂಭಾಗದ ನಿವಾಸಿ ಅಬ್ದುಲ್​ ಶುಕರ್​ (47) ಎಂಬವರನ್ನು ಹತ್ಯೆ ನಡೆದ ಮಾರನೇ ದಿನವೇ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಕೊಲೆಗೆ ಒಳಸಂಚು ರೂಪಿಸಿದ್ದ ಹಾಗೂ ಸೈಫುದ್ದೀನ್​ ಹತ್ಯೆಯಲ್ಲಿ ಭಾಗಿಯಾದ್ದ ರಿಧಾ ಶಬನಾ (ಬಂಧಿತ ಮಹಮ್ಮದ್​ ಫೈಸಲ್​ ಖಾನ್​ನ ಪತ್ನಿ) ಎಂಬಾಕೆಯನ್ನು ಅ.4ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಲ್ಲದೆ, ವ್ಯಕ್ತಿಯನ್ನು ಕೊಚ್ಚಿ ಹತ್ಯೆ ಮಾಡಲು ಆರೋಪಿಗಳಿಗೆ ಮಾರಕಾಸ್ತ್ರ ನೀಡಿದ್ದ ಆರೋಪಿ ಮಾಲಿ ಮಹಮ್ಮದ್​ ಸಿಯಾನ್​ (31) ಎಂಬಾತನನ್ನು ಡಿ.15ರಂದು ಬಂಧಿಸಿ, ಜೈಲಿಗೆ ರವಾನಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದರು.
ಘೋರ ಅಪರಾಧ ಪ್ರಕರಣಗಳಲ್ಲಿ ಹಾಗೂ ಎರಡಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾದವರಿಗೆಲ್ಲ ಕೋಕಾ ಕಾಯಿದೆಯು ಎಚ್ಚರಿಕೆಯ ಕರೆಗಂಟೆಯಾಗಿದೆ. ಈ ಕಾಯಿದೆ ಪ್ರಕಾರ ಆರೋಪಿಗಳಿಗೆ ಜಾಮೀನು ಸಿಗದು. ಅಲ್ಲದೆ, ಅವರ ಎಲ್ಲ ಆಸ್ತಿ ಮುಟ್ಟುಗೋಲು ಹಾಕಲು ಪೊಲೀಸರಿಗೆ ಅವಕಾಶವಿರುತ್ತದೆ ಎಂದು ಎಸ್ಪಿ ಹರಿರಾಂ ಶಂಕರ್​ ಮಾಹಿತಿ ನೀಡಿದ್ದಾರೆ.
"

ಸೈಫುದ್ದೀನ್​ ಹತ್ಯೆ ಪ್ರಕರಣದ ತನಿಖೆ ವೇಳೆ ಬಂಧಿತ ಆರೋಪಿಗಳ ವಿರುದ್ಧ 2ಕ್ಕಿಂತ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಹಾಗೂ ಘೋರ ಅಪರಾಧ ಪ್ರಕರಣಗಳಲ್ಲೂ ಭಾಗಿಯಾಗಿರುವುದು ತಿಳಿದಿದೆ. ಬಂಧಿತ ಐವರು ಹಾಗೂ ತಲೆಮರೆಸಿಕೊಂಡ ಆರೋಪಿಗಳ ವಿರುದ್ಧ ಕೋಕಾ ಕಾಯಿದೆ ದಾಖಲಿಸಲಾಗಿದ್ದು, ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಪ್ರಸ್ತುತ ಪ್ರಕರಣದ 90 ದಿನಗಳ ತನಿಖಾ ಅವಧಿಯನ್ನು 180 ದಿನಕ್ಕೆ ಹೆಚ್ಚಿಸಲಾಗಿದ್ದು, ಉಡುಪಿಯ ಡಿವೈಎಸ್ಪಿ ಮುಂದಿನ ತನಿಖೆ ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net