ಪತ್ರಿಕೆ ಮುನ್ನೆಡಸುವುದು ಸವಾಲಿನ ಕಾರ್ಯ

ಉಡುಪಿ ರಾಜಾಂಗಣದಲ್ಲಿ ಆಯೋಜಿಸಿದ್ದ ಸುಗುಣಮಾಲಾ ಪತ್ರಿಕೆಯ ವಾರ್ಷಿಕೋತ್ಸವವನ್ನು ಸುಗುಂಣೇಂದ್ರ ಶ್ರೀ ಹಾಗೂ ಸುಶ್ರೀಂದ್ರ ಶ್ರೀ ಉದ್ಘಾಟಿಸಿದರು. ಪ್ರಸನ್ನ ಆಚಾರ್ಯ, ಡಾ. ರಾಘವೇಂದ್ರ ರಾವ್​, ಶ್ರೀವತ್ಸ ಕೆಂಬಾಲೂರು, ಡಾ. ಎ.ವಿ. ಪಂಚಮುಖಿ, ಭುವನಾಭಿರಾಮ್​, ಬಿಂದುಮಾಧವಾಚಾರ್ಯ ನಾಗಸಂಪಿಗೆ ಇತರರಿದ್ದರು.
ಉಡುಪಿ ರಾಜಾಂಗಣದಲ್ಲಿ ಆಯೋಜಿಸಿದ್ದ ಸುಗುಣಮಾಲಾ ಪತ್ರಿಕೆಯ ವಾರ್ಷಿಕೋತ್ಸವವನ್ನು ಸುಗುಂಣೇಂದ್ರ ಶ್ರೀ ಹಾಗೂ ಸುಶ್ರೀಂದ್ರ ಶ್ರೀ ಉದ್ಘಾಟಿಸಿದರು. ಪ್ರಸನ್ನ ಆಚಾರ್ಯ, ಡಾ. ರಾಘವೇಂದ್ರ ರಾವ್​, ಶ್ರೀವತ್ಸ ಕೆಂಬಾಲೂರು, ಡಾ. ಎ.ವಿ. ಪಂಚಮುಖಿ, ಭುವನಾಭಿರಾಮ್​, ಬಿಂದುಮಾಧವಾಚಾರ್ಯ ನಾಗಸಂಪಿಗೆ ಇತರರಿದ್ದರು.
Published on

* ಸುಗುಣೇಂದ್ರ ತೀರ್ಥ ಶ್ರೀಪಾದರ ಅನಿಸಿಕೆ 

* ಪುತ್ತಿಗೆ ಮಠದ ಸುಗುಣಮಾಲಾ' ವಾರ್ಷಿಕೋತ್ಸವ 

ಉಡುಪಿ: ಸುದೀರ್ಘ ಕಾಲಕ್ಕೆ ಪ್ರೆಸ್​ ಮತ್ತು ಪತ್ರಿಕೆ ಮುನ್ನಡೆಸುವುದು ಸುಲಭದ ಕಾರ್ಯವಲ್ಲ. ನಿತ್ಯವೂ ತಲೆಬಿಸಿ ಹೆಚ್ಚಿಸುವ ಅದರ ಕಷ್ಟವನ್ನು ಬಲ್ಲವರೇ ಬಲ್ಲರು. ಅದು ಎಂದಿಗೂ ಲಾಭದಾಯಕವಲ್ಲ. ಪತ್ರಿಕೆ ತಯಾರಿ ಒಂದು ಸಮಸ್ಯೆಯಾದರೆ, ಓದುಗರಿಗೆ ತಲುಪಿಸುವುದೂ ಇನ್ನೊಂದು ಸವಾಲು. ಅವೆಲ್ಲದರ ನಡುವೆಯೂ ಪತ್ರಿಕೆಗಳು ಸುಗುಣವಾದ ಸುದ್ದಿಗಳಿಗೇ ಆದ್ಯತೆ ನೀಡುವಂತಾಗಬೇಕು. ದೋಷವನ್ನೇ ಹೆಚ್ಚು ಬಿಂಬಿಸಿದರೆ, ಅತ್ಯಾಚಾರ, ಕೊಲೆಯಂತಹ ಸುದ್ದಿ ಅಥವಾ ಓದುಗರಿಗೆ ಟೆನ್ಶನ್​ (ಒತ್ತಡ) ಆಗುವ ಸುದ್ದಿಯನ್ನು ದೊಡ್ಡದಾಗಿ ಪ್ರಕಟಿಸಬಾರದು ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ವತಿಯಿಂದ ಭಾನುವಾರ (ಜ.11) ಆಯೋಜಿಸಿದ್ದ ಪುತ್ತಿಗೆ ಮಠದ 'ಸುಗುಣಮಾಲಾ' ಪತ್ರಿಕೆಯ 40ನೇ ವಾರ್ಷಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಪತ್ರಿಕೆಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿವಿಧ ಸಾಧಕರಿಗೆ ಸನ್ಮಾನ

ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ರಾಘವೇಂದ್ರ ರಾವ್​, ಸಹಕುಲಾಧಿಪತಿ ಡಾ. ಶ್ರೀನಿವಾಸ್​ ರಾವ್​, ಉದಯವಾಣಿ ಸ್ಥಾನಿಕ ಸಂಪಾದಕ ಅರವಿಂದ್​ ನಾವುಡ, ಹೊಸದಿಗಂತ ಸ್ಥಾನಿಕ ಸಂಪಾದಕ ಪ್ರಕಾಶ್​ ಇಳಂತಿಲ, ಮೈಸೂರಿನ ಸುಧರ್ಮ ಸಂಸ್ಕೃತ ಮಾಸ ಪತ್ರಿಕೆಯ ಸಂಪಾದಕಿ ಡಾ.ಜಯಲಕ್ಷ್ಮೀ ಸಂಪತ್​ಕುಮಾರ್​, ಸೋಸಲೆ ವ್ಯಾಸರಾಜ ಮಠದ ತತ್ವಚಂದ್ರಿಕಾದ ಶ್ರೀವತ್ಸ ಕೆಂಬಾಲೂರು, ಮಂತ್ರಾಲಯ ಮಠದ ಗುರುಸಾರ್ವಭೌಮ ಮಾಸ ಪತ್ರಿಕೆಯ ಸಂಪಾದಕ ಡಾ. ಎ.ವಿ. ಪಂಚಮುಖಿ, ಯುಗಪುರುಷದ ಭುವನಾಭಿರಾಮ್​, ಬಾಗಲಕೋಟೆಯ ಬಿಂದುಮಾಧವಾಚಾರ್ಯ ನಾಗಸಂಪಿಗೆ, ಬಾಗಲಕೋಟೆಯ ವೈದ್ಯ ಡಾ. ಗಿರೀಶ್​ ಆರ್​. ಮಾಸೂರಕರ್​, ರೋಹಿತ್​ ಚಕ್ರತೀರ್ಥ, ರಾಜೇಶ್​ ರಾಧಾಕೃಷ್ಣ, ಮಟ್ಪಾಡಿ ನರಸಿಂಹ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು. 

ಪುಸ್ತಕಗಳ ಬಿಡುಗಡೆ

ಪರ್ಯಾಯ ಶ್ರೀಪಾದರ ಲೇಖನ ಸಂಗ್ರಹ ಸುವಾಣಿ, ಶ್ರೀ ಸುಜ್ಞಾನೇಂದ್ರ ತೀರ್ಥರ ಶ್ರೀಕೃಷ್ಣ ಪೂಜಾ ಪರ್ಯಾಯ ಮಹೋತ್ಸವ, ಮಟಪಾಡಿ ನರಸಿಂಗ ಸಾಮಗ ಅವರ ಚಮತ್ಕಾರ ಚಿಂತಾಮಣಿ, ಎಂ. ಪ್ರಸನ್ನ ಆಚಾರ್ಯರ ಸುಂದರ ಸೂಕ್ತಿ, ದಿ. ಪಂಡರೀನಾಥ ಆಚಾರ್ಯ ಗಲಗಲಿ ಅವರ ಮಹಾಭಾರತದ ಮಹಿಳೆಯರು, ನಂದಳಿಕೆ ವಿಠ್ಠಲ್​ ಭಟ್​ ಅವರ ತಂತ್ರಸಾರೋಕ್ತ ದೇವತಾ ಪ್ರತಿಷ್ಠಾ ವಿಧಿ ಸಂಗ್ರಹ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. 
ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಮಠದ ದಿವಾನ ನಾಗರಾಜ್​ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್​ ತಂತ್ರಿ, ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ್​ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​ ಸಹಕರಿಸಿದರು. ಮಠದ ವಿದ್ವಾನ್​ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.  

ಬನ್ನಂಜೆ ಗೋವಿಂದಾಚಾರ್ಯರ ನಿರ್ದೇಶನ

ಸುಗುಣಮಾಲಾ ಪತ್ರಿಕೆಯನ್ನು 1986ರ ಜ.16ರಂದು ಆರಂಭಿಸುವಾಗ ಇಷ್ಟೊಂದು ಸುದೀರ್ಘ ಅವಧಿಗೆ ಮುನ್ನಡೆಯಲಿದೆ ಎಂದು ತಿಳಿದಿರಲಿಲ್ಲ. ಗುರುಕುಲದಲ್ಲಿ ನಮ್ಮ ವಿದ್ಯಾಭ್ಯಾಸ ಮುಗಿದ ಬಳಿಕ ನಾವೇನು ಮಾಡಬೇಕೆಂದು ಗುರುಗಳಾದ ವಿದ್ಯಾಮಾನ್ಯರಲ್ಲಿ ಪ್ರಶ್ನೆ ಮಾಡಿದಾಗ ಲೇಖನ ಬರೆಯಲು ಹೇಳುತ್ತಿದ್ದರು. ನಾವೆಲ್ಲರೂ ಚೆನ್ನಾಗಿ ಬರೆಯುವುದನ್ನು ಕಂಡು ಪತ್ರಿಕೆ ಆರಂಭಿಸುವಂತೆ ಆದೇಶಿಸಿದರು. ಆಗ ಹುಟ್ಟಿದ್ದು 'ಸುಗುಣಮಾಲಾ'ಎಂಬ ಸಂಸ್ಕೃತದ ದಿನಪತ್ರಿಕೆ. ಬಳಿಕ ಸಾಪ್ತಾಹಿಕವಾಗಿ ಒಂದಿಷ್ಟು ಪ್ರಯೋಗ ನಡೆಸಿದ ಬಳಿಕ ಬನ್ನಂಜೆ ಗೋವಿಂದಾಚಾರ್ಯರ ನಿರ್ದೇಶನದಲ್ಲಿ, ರಾಜಗೋಪಾಲ ಆಚಾರ್ಯರ ಸಂಪಾದಕತ್ವದಲ್ಲಿ ಮಾಸಿಕೆ ಪತ್ರಿಕೆಯಾಗಿ ಮುನ್ನಡೆಸಿದೆವು. ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಸುಗುಣಮಾಲಾ ಲಭಿಸುತ್ತಿದ್ದು, 30 ವರ್ಷದಿಂದ ಆಂಗ್ಲ ಆವೃತ್ತಿಯೂ ಪ್ರಕಟಗೊಳ್ಳುತ್ತಿದೆ ಎಂದು ಸುಗುಣೇಂದ್ರ ಶ್ರೀ ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net