

ಉಡುಪಿ: ವಿಜಯದಶಮಿಯ ನಿಮಿತ್ತ ಉಡುಪಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳು ಭಾನುವಾರ (ಅ.25) ಬೆಳಗ್ಗೆ ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು.
ಗೋವಿಂದ ಕಲ್ಯಾಣ ಮಂಟಪ ಸಮೀಪದ ಮುಖ್ಯರಸ್ತೆಯಲ್ಲಿ ಸೇರಿದ ಕಾರ್ಯಕರ್ತರು, ಸಂಘದ ಧ್ಯೇಯಗೀತೆಯಾದ 'ನಮಸ್ತೆ ಸದಾ ವತ್ಸಲೇ ಮಾತೃಭೂಮಿ' ಗೀತೆಯೊಂದಿಗೆ ಪಥ ಸಂಚಲನ ಆರಂಭಿಸಿದರು.
ಜೋಡುಕಟ್ಟೆಯಿಂದ ಆರಂಭಿಸಿ ಕೆಎಂ ಮಾರ್ಗ, ತ್ರಿವೇಣಿ ಸರ್ಕಲ್ ಮೂಲಕ ರಥಬೀದಿಗೆ ಸಾಗಿ ಶ್ರೀಕೃಷ್ಣ ಮಠದ ಮುಂಭಾಗದಿಂದ ತೆಂಕಪೇಟೆ ಮಾರ್ಗವಾಗಿ ಸಾಗಿತು. ಉಡುಪಿಯ ಪೂರ್ಣಪ್ರಜ್ಞ ಕಾಲೇಜ್ ಮೈದಾನದಲ್ಲಿ ಪಥಸಂಚಲನ ಸಮಾಪನಗೊಂಡಿತು.
500ಕ್ಕೂ ಹೆಚ್ಚು ಸ್ವಯಂ ಸೇವಕರು ಪೂರ್ಣ ಗಣವೇಷ ಧರಿಸಿ ಪಥಸಂಚಲನದಲ್ಲಿ ಪಾಲ್ಗೊಂಡರು. ಶಾಸಕ ಯಶ್ಪಾಲ್ ಸುವರ್ಣ, ಬಿಜೆಪಿ ಜಿಲ್ಲಾ ಮತ್ತು ವಿವಿಧ ಸ್ತರದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಭಗವಾ ಧ್ವಜದೊಂದಿಗೆ ಸಾಂಪ್ರದಾಯಿಕ ಬ್ಯಾಂಡ್ ವಾದನದೊಂದಿಗೆ ಗಣವೇಷಧಾರಿಗಳು ಹೆಜ್ಜೆಹಾಕಿದರು. ಪಥ ಸಂಚಲನ ಸಾಗುವ ಮಾರ್ಗದಲ್ಲಿ ಸಾರ್ವಜನಿಕರು ಅಲ್ಲಲ್ಲಿ ಭಗವಾ ಧ್ವಜಕ್ಕೆ ಪುಷ್ಪವೃಷ್ಟಿ ಗೈದರು. ಪಥಸಂಚಲನ ಮಾರ್ಗಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.