ಕಡಬ ಆರೋಗ್ಯ ಕೇಂದ್ರಕ್ಕೆ 5 ಕೋಟಿ ರೂ. ಪ್ರಸ್ತಾವನೆ

 ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಡಯಾಲಿಸಿಸ್ ಕೇಂದ್ರದ ಸಮಸ್ಯೆ ಪರಿಶೀಲಿಸಿದರು. ಪ್ರಮುಖರಾದ ಡಾ.ಮಂಜುನಾಥ್, ಸುನೀಲ್, ಪದ್ಮಶ್ರೀ ಪುತ್ರನ್, ಅಶ್ವಧಿ ಮರಿಯ ಜಾರ್ಜ್ ಇತರರಿದ್ದರು.
ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಡಯಾಲಿಸಿಸ್ ಕೇಂದ್ರದ ಸಮಸ್ಯೆ ಪರಿಶೀಲಿಸಿದರು. ಪ್ರಮುಖರಾದ ಡಾ.ಮಂಜುನಾಥ್, ಸುನೀಲ್, ಪದ್ಮಶ್ರೀ ಪುತ್ರನ್, ಅಶ್ವಧಿ ಮರಿಯ ಜಾರ್ಜ್ ಇತರರಿದ್ದರು.
Published on
ಕಡಬ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 5 ಕೋಟಿ ರೂ. ಅನುದಾನಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಡಯಾಲಿಸಿಸ್ ಕೇಂದ್ರದ ಸಮಸ್ಯೆ ಪರಿಶೀಲಿಸಿ ಮಾತನಾಡಿ, ನಮ್ಮ ಜಿಲ್ಲೆಯ ಯು.ಟಿ.ಖಾದರ್ ಆರೋಗ್ಯ ಸಚಿವರಾಗಿರುವುದರಿಂದ ಅವರ ಮೂಲಕ ಸರ್ಕಾರದಿಂದ 5 ಕೋಟಿ ರೂ. ವಿಶೇಷ ಅನುದಾನ ತಂದು ಸಮುದಾಯ ಕೇಂದ್ರವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಆಸ್ಪತ್ರೆಯಲ್ಲಿ ಡಯಾಲಿಸ್ ಮಾಡಲು ಕೊಠಡಿ ಕೊರತೆ ಇದ್ದು ಪ್ರಸ್ತುತ ಮೀಟಿಂಗ್ ಹಾಲ್‌ನಲ್ಲಿ ಡಯಾಲಿಸಿಸ್ ಮಾಡುತ್ತಿರುವುದರಿಂದ ಅಲ್ಲಿ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ. ಪರ್ಯಾಯವಾಗಿ ಇಲ್ಲಿನ ಹಳೇ ಕಟ್ಟಡ ತೆರವುಗೊಳಿಸಿ 2 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ.
ಇನ್ಫೋಸಿಸ್ ಅಥವಾ ಎಂಆರ್‌ಪಿಎಲ್‌ನ ಸಿಎಸ್‌ಆರ್ ನಿಧಿಯಿಂದ ವಿಶೇಷ ಅನುದಾನ ತಂದು ನೂತನ ಕಟ್ಟಡ ನಿರ್ಮಾಣ ಮಾಡಿ ಡಯಾಲಿಸಿಸ್ ಕೇಂದ್ರ ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಹಳೇ ಕಟ್ಟಡ ತೆರವಿಗೆ ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆ ಶೀಘ್ರ ಮುಗಿಸಿ ಒಂದು ವರ್ಷದೊಳಗೆ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಶಾಸಕಿ ಭರವಸೆ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್, ಕಚೇರಿ ಸೂಪರಿಟೆಂಡೆಂಟ್ ಸುನೀಲ್, ದಂತ ವೈದ್ಯೆ ಪದ್ಮಶ್ರೀ ಪುತ್ರನ್, ಆಯುಷ್ ವೈದ್ಯೆ ಅಶ್ವಧಿ ಮರಿಯಾ ಜಾರ್ಜ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪರಮೇಶ್ವರ ಪಿ., ಪೂವಯ್ಯ, ಬಿಜೆಪಿ ಮುಖಂಡರಾದ ರಾಕೇಶ್ ರೈ ಕೆಡೆಂಜಿ, ಚಂದ್ರಶೇಖರ, ಅಶೋಕ್ ಕುಮಾರ್ ಪಿ., ಶಿವಪ್ರಸಾದ್ ರೈ, ಸತೀಶ್ ಕರ್ಮೆಣ, ಮೋಹನ ಗೌಡ, ಕೇಶವ, ಕಡಬ ಪಪಂ ಸದಸ್ಯೆ ಅಕ್ಷತಾ ಇದ್ದರು.

ಕಡಬ ತಾಲೂಕಾಗಿ ಪರಿವರ್ತನೆಯಾದರೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಲ್ಲ ಎನ್ನುವ ಕೊರಗು ಇದೆ. ಶಾಸಕಿಯಾದಾಗಿನಿಂದ ಈ ಬಗ್ಗೆ ಸಾಕಷ್ಟು ಬಾರಿ ಸರ್ಕಾರದ ಗಮನ ಸೆಳೆದಿದ್ದೇನೆ, ಮನವಿ ಸಲ್ಲಿಸಿದ್ದೇನೆ. ಇನ್ನೂ ಪ್ರಯತ್ನ ನಿಲ್ಲಿಸುವುದಿಲ್ಲ.

— ಭಾಗೀರಥಿ ಮುರುಳ್ಯ, ಶಾಸಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net