ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ನಿರ್ಮಾಣಗೊಂಡ ಸುಕನ್ಯಾ ನಿಲಯ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ., ಕ್ಲಬ್ ಅಧ್ಯಕ್ಷ ವಚನ್ ಶೆಟ್ಟಿ, ಸಹಾಯಕ ಗವರ್ನರ್ ಎ.ಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
Published on:
Copied
Follow Us
ಸಂದೀಪ್ ಸಾಲ್ಯಾನ್
ಆಕಸ್ಮಿಕ ಬೆಂಕಿ ಅನಾಹುತಕ್ಕೆ ತುತ್ತಾಗಿ ಮನೆ ಕಳಕೊಂಡಿದ್ದ ಬಡ ಮಹಿಳೆಗೆ ರೋಟರಿ ಕ್ಲಬ್ ಬಂಟ್ವಾಳ ಟೌನ್ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದೆ. 8 ಲಕ್ಷ ರೂ. ವೆಚ್ಚದಲ್ಲಿ ಹೊಸ ಮನೆ ನಿರ್ಮಿಸಿದ್ದು, ಮಂಗಳವಾರ ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ. ಅಧಿಕೃತ ಭೇಟಿ ವೇಳೆ ಕುಟುಂಬಕ್ಕೆ ಮನೆ ಹಸ್ತಾಂತರಿಸಲಾಯಿತು.
ಸುಕನ್ಯಾ ಅವರ ಕುಟುಂಬದ ದಯಾನೀಯ ಸ್ಥಿತಿ ಕಂಡು ಸ್ಥಳೀಯ ದೇವಸ್ಥಾನದ ಅರ್ಚಕ ಗುರುರಾಜ್ ಭಟ್ ರೋಟರಿ ಕ್ಲಬ್ ಬಂಟ್ವಾಳದ ಕಾರ್ಯದರ್ಶಿ ನಾಗೇಶ್ ಗಮನಕ್ಕೆ ತಂದಿದ್ದರು. ಅವರು ಕ್ಲಬ್ ಅಧ್ಯಕ್ಷ ವಚನ್ ಶೆಟ್ಟಿ ಅವರಿಗೆ ತಿಳಿಸಿದ್ದು, ಕ್ಲಬ್ ಸದಸ್ಯರು ಸಮ್ಮತಿ ನೀಡಿದ ಹಿನ್ನೆಲೆ ಮನೆ ನಿರ್ಮಾಣದ ಕೆಲಸ ಆರಂಭಗೊಂಡಿತ್ತು. ಕ್ಲಬ್ ಸದಸ್ಯ, ಸಿವಿಲ್ ಗುತ್ತಿಗೆದಾರ ಲೋಕೇಶ್ ಸುವರ್ಣ ಏ.1ರಂದು ಮನೆ ನಿರ್ಮಾಣದ ಕಾಮಗಾರಿ ಆರಂಭಿಸಿದ್ದು, ಮೇ 15ರಂದು ಮನೆ ಎಲ್ಲ ಕೆಲಸ ಪೂರ್ಣಗೊಂಡಿದೆ. ಕೇವಲ 45 ದಿನಗಳ ಅವಧಿಯಲ್ಲಿ ಸುಸಜ್ಜಿತ ಮನೆ ರೋಟರಿ ಸಂಸ್ಥೆ ಮೂಲಕ ನಿರ್ಮಾಣವಾಗಿದ್ದು ಕುಟುಂಬ ನಿಟ್ಟುಸಿರು ಬಿಡುವಂತಾಗಿದೆ.
ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ., ವಲಯ ಸೇನಾನಿ ಸುರೇಶ್ ಸಾಲ್ಯಾನ್, ಸಹಾಯಕ ಗವರ್ನರ್ ಎ.ಜಯಕುಮಾರ್ ಶೆಟ್ಟಿ, ಕ್ಲಬ್ ಅಧ್ಯಕ್ಷ ವಚನ್ ಶೆಟ್ಟಿ, ಕಾರ್ಯದರ್ಶಿ ನಾಗೇಶ್ ಎಂ.ನಿಕಟಪೂರ್ವಾಧ್ಯಕ್ಷ ಕಿಶೋರ್ ಕುಮಾರ್, ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
ಬೆಂಕಿ ಆಕಸ್ಮಿಕದಲ್ಲಿ ಮನೆ ಭಸ್ಮ!
ಪಂಜಿಕಲ್ಲು ಗ್ರಾಪಂ ವ್ಯಾಪ್ತಿಯ ಮೂಡುನಡುಗೋಡು ಗ್ರಾಮದ ನವಗ್ರಾಮದಲ್ಲಿ ಸುಕನ್ಯಾ ಎಂಬ ಮಹಿಳೆ ಮಗಳೊಂದಿಗೆ ಸರ್ಕಾರದ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಬೀಡಿ ಕಟ್ಟುವ ಕಾಯಕ ಮಾಡಿಕೊಂಡು ಕುಟುಂಬ ನಿರ್ವಹಣೆ ಜತೆಗೆ ಮಗಳ ವಿದ್ಯಾಭ್ಯಾಸದ ಜವಾಬ್ದಾರಿ ನಿಭಾಯಿಸುತ್ತಿದ್ದರು. ಈ ನಡುವೆ ಕಳೆದ ಡಿಸೆಂಬರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಮನೆ ಸಂಪೂರ್ಣ ಸುಟ್ಟು ಹೋಗಿದ್ದು, ಇದರಿಂದ ಕಂಗೆಟ್ಟ ಕುಟುಂಬ ದಿಕ್ಕು ತೋಚದೆ 4 ತಿಂಗಳಿನಿಂದ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು.
ಕ್ಲಬ್‌ನ ಶಾಶ್ವತ ಯೋಜನೆಯಾಗಿ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿದ್ದೇವೆ. ಈ ಸೇವಾ ಕಾರ್ಯ ಎಲ್ಲ ಸದಸ್ಯರಿಗೆ ಸಂತೃಪ್ತಿ ನೀಡಿದೆ.
— ವಚನ್ ಶೆಟ್ಟಿ ಅಧ್ಯಕ್ಷ, ರೋಟರಿ ಕ್ಲಬ್ ಬಂಟ್ವಾಳ ಟೌನ್
ರೋಟರಿ ಕ್ಲಬ್ ನಿರ್ಮಿಸಿಕೊಟ್ಟ ಅನೇಕ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಆದರೆ ಇದೊಂದು ವಿಶೇಷ ಸೇವಾ ಕಾರ್ಯವಾಗಿದೆ. ಈ ಬಡಕಟುಂಬಕ್ಕೆ ಮನೆ ಅತ್ಯಂತ ಅವಶ್ಯಕವಾಗಿದ್ದು, ರೋಟರಿ ಕ್ಲಬ್ ಬಂಟ್ವಾಳ ಟೌನ್ ಮಾಡಿಕೊಟ್ಟಿದೆ.
— ರಾಮಕೃಷ್ಣ ಪಿ.ಕೆ., ರೋಟರಿ ಜಿಲ್ಲಾ ಗವರ್ನರ್
ಮಗಳೊಂದಿಗೆ ಬಡತನದ ಜೀವನ ನಡೆಸಿಕೊಂಡು ಬಂದಿದ್ದೇನೆ. ಇದ್ದ ಮನೆಯೂ ಬೆಂಕಿಯಲ್ಲಿ ಸುಟ್ಟು ಸಂಕಷ್ಟದಲ್ಲಿದ್ದಾಗ ರೋಟರಿ ಕ್ಲಬ್ ಬಂಟ್ವಾಳ ಟೌನ್ ಮನೆ ನಿರ್ಮಿಸಿ ಕೊಟ್ಟು ಆಸರೆಯಾಗಿದ್ದಾರೆ. ನನ್ನ ಜೀವನದುದ್ದಕ್ಕೂ ಅವರಿಗೆ ಕೃತಜ್ಞಳಾಗಿರುತ್ತೇನೆ.