ಸಮಾಜ ಕಲ್ಯಾಣ ಇಲಾಖೆಗೆ ಸೂರು

ಬಿ.ಸಿ.ರೋಡ್‌ನ ಅಂಬೇಡ್ಕರ್ ಸಮುದಾಯ ಭವನ.
ಬಿ.ಸಿ.ರೋಡ್‌ನ ಅಂಬೇಡ್ಕರ್ ಸಮುದಾಯ ಭವನ.
Published on
ಬಂಟ್ವಾಳ: ಇದುವರೆಗೆ ಸ್ವಂತ ಸೂರಿಲ್ಲದೆ ಬಾಡಿಗೆ ಕಟ್ಟಡದಲ್ಲಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಕೊರಗ ಸಮುದಾಯದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಕೊನೆಗೂ ಬಂಟ್ವಾಳ ತಾ.ಪಂ. ಕಚೇರಿ ಪಕ್ಕದಲ್ಲಿರುವ ತಾಲೂಕು ಡಾ.ಬಿ.ಆರ್.ಅಂಬೇಡ್ಕರ್ ಭವನದ ಮೊದಲನೇ ಅಂತಸ್ತಿಗೆ ಶಿಫ್ಟ್ ಆಗಿದೆ. ಇದರೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಕೊರಗ ಸಮುದಾಯದ ಬಹುಕಾಲದ ಬೇಡಿಕೆಯೊಂದು ಈಡೇರಿದೆ.
ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಣೆ: ಬಹಳ ವರ್ಷಗಳಿಂದ ಬಂಟ್ವಾಳ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್ 2) ಹಾಗೂ ಸಿಬ್ಬಂದಿ ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದ್ದರು. ತಾಲೂಕಿನ ಬಹುತೇಕ ಎಲ್ಲ ಇಲಾಖೆಗಳು ತಮ್ಮ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಮುಖ ಇಲಾಖೆಯಲ್ಲೊಂದಾಗಿರುವ ಸಮಾಜ ಕಲ್ಯಾಣ ಇಲಾಖೆಗೆ ಮಾತ್ರ ಸ್ವಂತ ಸೂರಿಲ್ಲದೆ 2018ರಿಂದ ಬಿ.ಸಿ.ರೋಡಿನ ಹೆದ್ದಾರಿಗೆ ತಾಗಿಕೊಂಡಿರುವ ಖಾಸಗಿ ಕಟ್ಟಡದಲ್ಲೇ ಇಲಾಖಾ ಕಚೇರಿ ಕಾರ್ಯಾಚರಿಸುತ್ತಿತ್ತು. ಆದರೆ ಇದನ್ನು ಹುಡುಕುವುದೇ ಜನಸಾಮಾನ್ಯರಿಗೆ ಸವಾಲಾಗಿತ್ತು.
ಈ ಹಿಂದೆ ತಾಲೂಕಿನ ಹೃದಯಭಾಗವಾದ ಬಿ.ಸಿ.ರೋಡಿನಲ್ಲಿದ್ದ ಹಳೆಯ ತಾಲೂಕು ಪಂಚಾಯಿತಿ ಕಟ್ಟಡದಲ್ಲಿ ಸಮಾಜ ಕಲ್ಯಾಣ ಸಹಿತ ಕೆಲ ಇಲಾಖಾ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಇಲ್ಲೊಂದು ಪಿಪಿ ಮಾದರಿಯ ಖಾಸಗಿ ಬಸ್ ನಿಲ್ದಾಣ ನಿರ್ಮಾಣವಾಗುವ ಯೋಜನೆ ರೂಪುಗೊಂಡ ಹಿನ್ನೆಲೆಯಲ್ಲಿ ಗಟ್ಟಿಮುಟ್ಟಾಗಿದ್ದ ಈ ಹಳೇ ತಾ.ಪಂ. ಕಟ್ಟಡವನ್ನೇ ತೆರವುಗೊಳಿಸಲಾಯಿತು.
ಆಗ ತಾ.ಪಂ. ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಸಮಾಜ ಕಲ್ಯಾಣ ಇಲಾಖೆ ಹೊರತುಪಡಿಸಿ ಇತರ ಇಲಾಖೆಗಳು ತಮ್ಮ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದರೆ, ಸ್ವಂತ ಸೂರು ಸಿಗದಿರುವ ಕಾರಣದಿಂದ ಸಮಾಜ ಕಲ್ಯಾಣ ಇಲಾಖೆ ಅನಿವಾರ್ಯವಾಗಿ ಬಿ.ಸಿ.ರೋಡಿನ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು.
ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆ ಅಧಿಕೃತವಾಗಿ ಸ್ಥಳಾಂತರವಾಗಿರುವ ಹಿನ್ನ್ನೆಲೆಯಲ್ಲಿ ಸಾರ್ವಜನಿಕರು ಕಚೇರಿ ಕೆಲಸ, ಕಾರ್ಯಗಳಿಗೆ ಬಿ.ಸಿ.ರೋಡ್‌ನಲ್ಲಿರುವ ತಾಲೂಕು ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಅಗಮಿಸುವಂತೆ ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಇಲಾಖೆಯ ಸಹಾಯಕ ನಿರ್ದೇಶಕಿ(ಗ್ರೇಡ್-2) ವಿನಯ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಹಲವು ಸಮಯಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಬಗ್ಗೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಕುಂದುಕೊರತೆ ಸಭೆಗಳಲ್ಲಿ ಹಲವು ಬಾರಿ ಪ್ರಸ್ತಾಪ

ತಾಲೂಕು ಡಾ.ಬಿ.ಆರ್.ಅಂಬೇಡ್ಕರ್ ಭವನ ಸಮಾಜ ಕಲ್ಯಾಣ ಇಲಾಖೆಯಿಂದಲೇ ನಿರ್ವಹಿಸಲ್ಪಡುತ್ತಿದೆ. ದಲಿತ ಸಮುದಾಯ ಸೇರಿದಂತೆ ಇತರೆ ಜನಸಾಮಾನ್ಯರ ಅನುಕೂಲಕ್ಕಾಗಿ ತಾಲೂಕುಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಸಮಾಜ ಕಲ್ಯಾಣ ಇಲಾಖೆಯನ್ನು ಸ್ಥಳಾಂತರಿಸುವಂತೆ ಸಂಬಂಧಿಸಿದ ಅಧಿಕಾರಿಗಳ ಮುಂದೆ ದಲಿತ ಮುಖಂಡರು ಬೇಡಿಕೆ ಮಂಡಿಸುತ್ತಲೇ ಬರುತ್ತಿದ್ದರು. ಎಸ್ಸಿ-ಎಸ್ಟಿ ಕುಂದುಕೊರತೆ ಸಭೆ ಸಹಿತ ಹಲವು ಸಭೆಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆದಿದ್ದವು.

ಬಾಗಿಲು ಹಾಕಿದ್ದರಿಂದ ಗೊಂದಲ

ಬುಧವಾರದಿಂದ ತಾಲೂಕು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾರ್ಯಾಚರಿಸುತ್ತಿದೆಯಾದರೂ, ಇದರ ಮುಂಬಾಗಿಲನ್ನು ಮುಚ್ಚಿರುವುದರಿಂದ ಅಗತ್ಯದ ಕೆಲಸಕ್ಕಾಗಿ ಕಚೇರಿಗೆ ಬಂದ ಸಾರ್ವಜನಿಕರು ಮುಂಬಾಗಿಲಿಗೆ ಬೀಗ ಹಾಕಿದರಿಂದ ಮತ್ತು ನಾಮಫಲಕವು ಇಲ್ಲದಿದ್ದರಿಂದ ಗೊಂದಲಕ್ಕೊಳಗಾದರು. ಹುಡುಕಾಡಿ ಕೊನೆಗೂ ಹಿಂಬಾಗಿಲಿನ ದಾರಿ ಮೂಲಕ ಒಳಗೆ ಹೋಗಬೇಕಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net