ಕಾಸರಗೋಡು: ಕೆಲಸ ಕೊಡಿಸುವ ಭರವಸೆ ನೀಡಿ ಯುವಕನನ್ನು ಕರೆದೊಯ್ದು ಹಲ್ಲೆಗೈದ ಬಳಿಕ ಮೊಬೈಲ್ ಫೋನ್ ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಠಾಣೆ ಪೊಲೀಸರು ಮೂರು ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಚೆಂಗಳ ಇಂದಿರಾನಗರದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಪಶ್ಚಿಮ ಬಂಗಾಳ ನಿವಾಸಿ ರಾಮನ್ ಬರ್ಮನ್(33) ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ. ಇಂದಿರಾನಗರದಲ್ಲಿದ್ದ ಕಾರ್ಮಿಕ ರಾಮನ್ ಬರ್ಮನ್‌ಗೆ ಮೂವರ ತಂಡ ಕೆಲಸವಿರುವುದಾಗಿ ತಿಳಿಸಿ ಕರೆದೊಯ್ದಿದ್ದರು.
ಚಿತ್ತಾರಿಕಲ್ ಹೆದ್ದಾರಿಯ ಫ್ಲೈ ಓವರ್ ಕೊನೆಗೊಳ್ಳುವ ಭಾಗಕ್ಕೆ ತಲುಪಿದಾಗ 16 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಕಸಿದು ಹಲ್ಲೆಗೈದಿದ್ದು ಕೊಲೆಗೈಯುವುದಾಗಿ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.