ಬಜ್ಪೆ ಪಟ್ಟಣ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಲೋಕೇಶ್ ಪೂಜಾರಿ, ಉಪಾಧ್ಯಕ್ಷೆ ಶರ್ಮಿಳಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರಿತೇಶ್ ಶೆಟ್ಟಿ, ಕಂದಾಯ ನಿರೀಕ್ಷಕ ರವಿ ಕೊಂಡಾಣ ಮತ್ತಿತರರಿದ್ದರು.
ಗುರುಪುರ: ಮರವೂರು ರೈಲ್ವೆ ಸೇತುವೆ ಬಳಿ ಕೋಸ್ಟ್ ಗಾರ್ಡ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ 20 ಅಡಿ ಅಗಲದ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಬಳಿಗೆ ಬಜ್ಪೆ ಪಟ್ಟಣ ಪಂಚಾಯಿತಿಯ ನಿಯೋಗ ಕೊಂಡೊಯ್ಯಲು ಬಜ್ಪೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಪಪಂ ಅಧ್ಯಕ್ಷ ಲೋಕೇಶ್ ಪೂಜಾರಿ ಅಧ್ಯಕ್ಷತೆಯಲ್ಲಿ ಸೋಮವಾರ ಸಾಮಾನ್ಯ ಸಭೆಯಲ್ಲಿ ಕೌನ್ಸಿಲರ್ ಸಿರಾಜ್ ಬಜ್ಪೆ ಮಾತನಾಡಿ, ಮರವೂರು ಕೋಸ್ಟ್‌ಗಾರ್ಡ್ ಭಾಗದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರಸ್ತೆ ಇಲ್ಲದೆ ಅನೇಕ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ. ಕೋಸ್ಟ್ ಗಾರ್ಡ್ ಸರ್ಕಾರಿ ಜಾಗದಲ್ಲಿದ್ದು, ಅಲ್ಲೇ ಇರುವ ಸರ್ಕಾರಿ ಜಾಗದಲ್ಲಿ 20 ಅಡಿ ಅಗಲದ ರಸ್ತೆ ನಿರ್ಮಾಣ ಕಷ್ಟವೇನೂ ಆಗದು. ಕೋಸ್ಟ್ ಗಾರ್ಡ್‌ಗೆ ಆದೇಶ ಹೊರಡಿಸುವ ನಿಟ್ಟಿನಲ್ಲಿ ಬಜ್ಪೆ ಪಪಂ ಸದಸ್ಯರ ನಿಯೋಗವೊಂದು ಜಿಲ್ಲಾಧಿಕಾರಿಯವರ ಬಳಿಗೆ ಹೋಗಬೇಕು ಎಂದರು. ಇದಕ್ಕೆ ಬಹುತೇಕ ಎಲ್ಲ ಸದಸ್ಯರು ಬೆಂಬಲ ಸೂಚಿಸಿದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಯಿತು. ಪಪಂ ಬೇಡಿಕೆಗಳಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಂದಿಸಿಲ್ಲ. ಸಂಸದ, ಶಾಸಕ ಹಾಗೂ ಜಿಲ್ಲಾಧಿಕಾರಿಯವರಿಗೆ ಇಲ್ಲಿನ ಸಮಸ್ಯೆಯ ಗಂಭೀರತೆ ಬಗ್ಗೆ ಮನವರಿಕೆ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಬಜ್ಪೆ ಪಪಂ ಸುಪರ್ದಿಯಲ್ಲಿರುವ ತಾತ್ಕಾಲಿಕ 22 ಅಂಗಡಿಗಳಲ್ಲಿ 2 ಅಂಗಡಿಗಳು ಹಲವು ಸಮಯದಿಂದ ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ. ಸದಸ್ಯರ ಒಪ್ಪಿಗೆ ಮೇರೆಗೆ ಆ 2 ಅಂಗಡಿಗಳ ಹರಾಜಿಗೆ ಅಧ್ಯಕ್ಷರು ಸೂಚಿಸಿದರು. ಪ್ಲಾಸ್ಟಿಕ್ ನಿಷೇಧ ವಿಷಯದಲ್ಲಿ ಗೊಂದಲ ಮುಂದುವರಿದಿದ್ದರೂ ತನ್ನ ಗಮನಕ್ಕೆ ತಾರದೆ ಇಲ್ಲಿನ ಕೆಲವು ಅಂಗಡಿ ಮಾಲೀಕರಿಂದ ದಂಡ ವಸೂಲಿ ಮಾಡಲಾಗಿದೆ ಎಂಬುದಕ್ಕೆ ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪಪಂ ಉಪಾಧ್ಯಕ್ಷೆ ಶರ್ಮಿಳಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರಿತೇಶ್ ಶೆಟ್ಟಿ, ಕಂದಾಯ ನಿರೀಕ್ಷಕ ರವಿ ಕೊಂಡಾಣ, ಇಂಜಿನಿಯರ್ ನಳಿನ್ ಕುಮಾರ್, ಕೌನ್ಸಿಲರ್‌ಗಳು ಇದ್ದರು. ಮುಖ್ಯಾಧಿಕಾರಿ ರತ್ನಪ್ರಸಾದ್ ಸಭೆಯ ಕಲಾಪ ನಿರ್ವಹಿಸಿದರು.
ಎಂಎಸ್‌ಇಜಡ್‌ನಿಂದ 6 ಕೋಟಿ ರೂ. ಬಾಕಿ
2021ರಿಂದ ಪಂಚಾಯಿತಿಗೆ ಎಂಎಸ್‌ಇಜಡ್‌ನಿಂದ 6 ಕೋಟಿ ರೂ. ಭೂ ತೆರಿಗೆ ಬಾಕಿಯಾಗಿದೆ. ಈ ಮೊತ್ತ ಪಾವತಿಸುವಂತೆ ಪಟ್ಟಣ ಪಂಚಾಯಿತಿಯಿಂದ ಎಂಎಸ್‌ಇಜಡ್‌ಗೆ 3 ಬಾರಿ ನೋಟಿಸ್ ಜಾರಿ ಮಾಡಲಾಗಿದೆ. ಇದುವರೆಗೆ ಉತ್ತರ ಬಂದಿಲ್ಲ ಎಂದು ಅಧ್ಯಕ್ಷ ಲೋಕೇಶ್ ಪೂಜಾರಿ ಹೇಳಿದರು.