ಕಾಸರಗೋಡು: ಕುಂಬಳೆ ಕೃಷ್ಣನಗರ ನಿವಾಸಿ, ನಿವೃತ್ತ ಶಿಕ್ಷಕ ಟಿ.ಜೆ.ಥಾಮಸ್ ಹಾಗೂ ಹೋಲಿ ಫ್ಯಾಮಿಲಿ ಶಾಲಾ ಮುಖ್ಯಶಿಕ್ಷಕಿ ಸೋಫಿಯಮ್ಮ ಅವರ ಮನೆ ಬಾಗಿಲು ಒಡೆದು ನುಗ್ಗಿದ ಕಳ್ಳರು ಒಂದೂಕಾಲು ಪವನ್ ಚಿನ್ನಾಭರಣ ಕಳವುಗೈದಿದ್ದಾರೆ. ದಂಪತಿ ಓಣಂ ರಜೆ ಹಿನ್ನೆಲೆಯಲ್ಲಿ ತಳಿಪರಂಬದ ಆಲಕ್ಕೋಡ್‌ನಲ್ಲಿರುವ ತಮ್ಮ ಮನೆಗೆ ಆ.22ರಂದು ತೆರಳಿದ್ದು, ಸೋಮವಾರ ಬೆಳಗ್ಗೆ ಮನೆಗೆ ವಾಪಸಾದಾಗ ಬಾಗಿಲು ಒಡೆದ ಸ್ಥಿತಿಯಲ್ಲಿದ್ದು, ಮನೆಯೊಳಗೆ ಸಾಮಗ್ರಿ ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿತ್ತು. ಕಪಾಟಿನಲ್ಲಿರಿಸಿದ್ದ ಮುಕ್ಕಾಲು ಪವನ್ ಮತ್ತು ಅರ್ಧ ಪವನ್ ತೂಕದ ಎರಡು ಆಭರಣಗಳು ಕಳವಾಗಿದ್ದವು. ಟಿ.ಜೆ.ಥಾಮಸ್ ನೀಡಿದ ದೂರಿನಂತೆ ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.