ಶಿಕ್ಷಣ ಜೊತೆ ಸಮಾಜಮುಖಿ ಚಿಂತನೆ ಅಗತ್ಯ: ಡಾ. ಮಹಾಬಲೇಶ್ವರ ರಾವ್‌

ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್‌ ಸನಿವಾಸ ಶಿಬಿರ ಉದ್ಘಾಟಿಸಿದರು.
ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್‌ ಸನಿವಾಸ ಶಿಬಿರ ಉದ್ಘಾಟಿಸಿದರು.
Published on
ಉಡುಪಿ: ಕೇವಲ ಪದವಿ ಪಡೆಯುವುದರಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ಸಾಕಷ್ಟು ಕೌಶಲ್ಯಗಳ ತರಬೇತಿಯನ್ನು ಪಡೆದಿರಬೇಕು. ಶೈಕ್ಷಣಿಕ ಪಠ್ಯದೊಂದಿಗೆ ವರ್ತಮಾನದ ವಿದ್ಯಾಮಾನಗಳ ಅರಿವು ವಿದ್ಯಾರ್ಥಿಗಳಿಗಿರಬೇಕು. ಶಿಕ್ಷಣದ ಜೊತೆಗೆ ಸಮಾಜಮುಖಿ ಚಿಂತನೆ ಅಗತ್ಯ ಎಂದು ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್‌ ಹೇಳಿದರು.

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಅಂತಿಮ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮೂರು ದಿನಗಳ ಸನಿವಾಸ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸ್ವಾರ್ಥಪರ ಸ್ಪರ್ಧೇ ತೀವ್ರವಾಗುತ್ತಿದ್ದು, ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಬೆಳೆದರೆ ಭಾರತದ ಭವಿಷ್ಯವೂ ಚೆನ್ನಾಗಿರುತ್ತದೆ. ಹೀಗಾಗಿ ವೃತ್ತಿ ಕೌಶಲ್ಯದೊಂದಿಗೆ ದುಡಿದರೆ ಉನ್ನತ ಸ್ಥಾನಗಳು ದೊರೆಯುತ್ತವೆ ಎಂದರು. ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ ನಾಯ್ಕ್ ಮಾತನಾಡಿ, ಜ್ಞಾನ, ಕೌಶಲ್ಯ ಮೌಲ್ಯಗಳು ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಥಿಗಳು ರೂಢಿಸಿಕೊಳ್ಳಲೇ ಬೇಕಾದ ಸಂಗತಿಗಳಾಗಿವೆ ಎಂದರು.
ನಿವೃತ್ತ ಬ್ಯಾಂಕ್ ಅಧಿಕಾರಿ ದೇವಾನಂದ ಉಪಾಧ್ಯಾಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಹಾಯಕ ಗವರ್ನರ್ ಹೇಮಂತ್ ಯು. ಕಾಂತ್ ಕಲಾರಂಗ ಅಭ್ಯಾಗತರಾಗಿ ಭಾಗವಹಿಸಿದ್ದರು. ಶಿಬಿರದ ನಿರ್ದೇಶಕ ಹುಬ್ಬಳ್ಳಿಯ ಮೈ ಲೈಫ್‍ನ ಸಂಸ್ಥಾಪಕ ಪ್ರವೀಣ್ ವಿ. ಗುಡಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net