ಅಸಹಾಯಕ ತಾಯಿ-ಮಗುವಿನ ರಕ್ಷಣೆ

ಉಡುಪಿಯಲ್ಲಿ ಅಸಹಾಯಕ ಸ್ಥಿಯಲ್ಲಿದ್ದ ಗದಗ ಮೂಲದ ತಾಯಿ-ಮಗುವನ್ನು ರಕ್ಷಣೆ ಮಾಡಲಾಯಿತು. ನಿತ್ಯಾನಂದ ಒಳಕಾಡು, ರಕ್ಷಿತಾ, ವನಿತಾ, ಪ್ರಕಾಶ್​, ವಿದ್ಯಾಶ್ರೀ ಇತರರಿದ್ದರು.
ಉಡುಪಿಯಲ್ಲಿ ಅಸಹಾಯಕ ಸ್ಥಿಯಲ್ಲಿದ್ದ ಗದಗ ಮೂಲದ ತಾಯಿ-ಮಗುವನ್ನು ರಕ್ಷಣೆ ಮಾಡಲಾಯಿತು. ನಿತ್ಯಾನಂದ ಒಳಕಾಡು, ರಕ್ಷಿತಾ, ವನಿತಾ, ಪ್ರಕಾಶ್​, ವಿದ್ಯಾಶ್ರೀ ಇತರರಿದ್ದರು.
Published on

* ಜೀವನಕ್ಕಾಗಿ ಉಡುಪಿಗೆ ಬಂದಿದ್ದ ಗದಗ ಮಹಿಳೆ

ಉಡುಪಿ: ಪತಿ ಮೃತಪಟ್ಟಿದ್ದರಿಂದ ದಿಕ್ಕುತೋಚದೆ ಜೀವನ ಸಾಗಿಸಲೆಂದು ತನ್ನ ಐದು ವರ್ಷದ ಹೆಣ್ಣು ಮಗುವಿನೊಂದಿಗೆ ಉಡುಪಿಗೆ ವಲಸೆ ಬಂದಿದ್ದ ಅಸಹಾಯಕ ತಾಯಿಯನ್ನು ರಕ್ಷಿಸಿದ ಮಾನವೀಯ ಕಾರ್ಯ ಉಡುಪಿಯಲ್ಲಿ ನಡೆದಿದೆ.
ಗದಗ ಮೂಲದ ನೀಲವ್ವ (35) ಎಂಬಾಕೆ ತನ್ನ ಪುಟ್ಟ ಮಗಳೊಂದಿಗೆ ಉಡುಪಿಯ ಬನ್ನಂಜೆಯಲ್ಲಿರುವ ಡಾ. ವಿ.ಎಸ್​. ಆಚಾರ್ಯ ಜಿಲ್ಲಾ ಸರ್ಕಾರಿ ಬಸ್​ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕುಳಿತಿದ್ದಳು. ಸಾರ್ವಜನಿಕರಿಂದ ಲಭಿಸಿದ ಖಚಿತ ಮಾಹಿತಿಯೊಂದಿಗೆ ಗಸ್ತು ಕರ್ತವ್ಯದಲ್ಲಿದ್ದ ಅಕ್ಕ ಪಡೆ, ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ನೆರವಿನಿಂದ ತಾಯಿ-ಮಗುವನ್ನು ರಕ್ಷಿಸಲಾಗಿದೆ.
ಪುಟ್ಟ ಬಾಲಕಿಯನ್ನು ದೊಡ್ಡಣಗುಡ್ಡೆಯ ಮಕ್ಕಳ ಕಲ್ಯಾಣ ಸಮಿತಿ ಕಚೇರಿಗೆ ಕರೆತರಲಾಗಿದ್ದು, ಸಮಿತಿಯ ಆದೇಶಾನುಸಾರ ಲಕ್ಷ್ಮೀ ನಗರದಲ್ಲಿರುವ ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರದಲ್ಲಿ ಮಗುವಿಗೆ ಪುನರ್ವಸತಿ ಕಲ್ಪಿಸಲಾಗಿದೆ.

ನಿಲ್ದಾಣದಲ್ಲಿ ದಿನವೂ ವಸತಿ

ಜೀವನ ನಿರ್ವಹಣೆಗೆ ಕೆಲಸ ಸಿಕ್ಕರೂ ವಸತಿಗೆ ಸ್ಥಳ ಇಲ್ಲದೆ ಬಸ್​ ನಿಲ್ದಾಣದಲ್ಲಿ ಮಗುವಿನೊಂದಿಗೆ ರಾತ್ರಿ ಕಾಲ ಕಳೆಯುತ್ತಿದ್ದ ಪರಿಸ್ಥಿತಿ ಎದುರಿಸುತ್ತಿರುವುದು ವಿಚಾರಣೆಯ ವೇಳೆ ತಿಳಿದುಬಂದಿದೆ. ದಿಕ್ಕು ತೋಚದೆ, ಎದುರಾದ ಸಮಸ್ಯೆ ಬಗ್ಗೆ ಅಪರಿಚಿತ ನಗರದಲ್ಲಿ ಎದುರಿಸಲಾಗದೆ, ಯಾರಲ್ಲೂ ಹೇಳಿಕೊಳ್ಳಲಾಗದೆ ತೊಳಲಾಟ ನಡೆಸಿದ್ದರು. ಮಗುವನ್ನು ತ್ಯಜಿಸುವ ಕಠೋರ ನಿರ್ಧಾರವನ್ನೂ ತಾಯಿ ತೆಗೆದುಕೊಂಡಿದ್ದಳು. ಇಲಾಖೆಯ ಸಮಯಪ್ರಜ್ಞೆಯಿಂದ ಸಂಭವನೀಯ ದುರಂತದಿಂದ ತಾಯಿ-ಮಗು ಇದೀಗ ಸುರಕ್ಷಿತವಾಗಿದ್ದಾರೆ. ಮನವೊಲಿಕೆ, ಸ್ವಾಂತನದ ನುಡಿಗಳಿಂದ ಜೀವನದಲ್ಲಿ ಸೋತ ತಾಯಿಯ ಮೊಗದಲ್ಲಿ ನಗೆ ಬೀರಿದೆ.
ಕಾರ್ಯಾಚರಣೆಯಲ್ಲಿ ಅಕ್ಕ ಪಡೆಯ ರಕ್ಷಿತಾ, ವನಿತಾ, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪ್ರಕಾಶ್​ ಮತ್ತು ವಿದ್ಯಾಶ್ರೀ, 112 ತುರ್ತು ಸಹಾಯವಾಣಿ ಕೇಂದ್ರದ ಸಿಬ್ಬಂದಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net