ರಸ್ತೆ ಬದಿ ಅಪಾಯಕಾರಿ ಮರ ತೆರವು ಮಾಡಿ

tree
tree
Published on
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ರಾಜ್ಯ ಸರ್ಕಾರ ದಲಿತರ ಕಲ್ಯಾಣಕ್ಕಾಗಿ ಗ್ರಾಪಂಗಳಲ್ಲಿ ವಿಶೇಷ ಗ್ರಾಮಸಭೆ ನಡೆಸುತ್ತಿದೆ. ಆದರೆ ಈ ವರ್ಗದ ಶ್ರೇಯೋಭಿವೃದ್ಧಿಗಾಗಿ ಕ್ರಮ ವಹಿಸಬೇಕಾದ ತಾಲೂಕುಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸದೆ ಅಸಡ್ಡೆ ತೋರಿದ್ದಾರೆ. ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸದಿರುವುದು ಸರ್ಕಾರ ಪ್ರೇರಿತ ದೌರ್ಜನ್ಯ ಎಂದು ಗ್ರಾಮಸ್ಥ ಶೇಖರ್ ಲಾಯಿಲ ಅಸಮಾಧಾನ ವ್ಯಕ್ತಪಡಿಸಿದರು.
ಲಾಯಿಲ ಗ್ರಾಮ ಪಂಚಾಯಿತಿಯಲ್ಲಿ ಗ್ರಾಪಂ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆಗಳ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು.
ಅರಣ್ಯ ಇಲಾಖೆ ಯೋಜನೆಯಡಿ ಕೆಲವರಿಗಷ್ಟೇ ಅಡುಗೆ ಅನಿಲ ವಿತರಿಸಲಾಗುತ್ತಿದೆ. ಇದರ ಸಂಖ್ಯೆ ಹೆಚ್ಚಿಸಿ ಅನೇಕ ಮಂದಿಗೆ ಸೌಲಭ್ಯ ಸಿಗುವಂತೆ ಮಾಡಬೇಕು. ಲಾಯಿಲ-ನಿನ್ನಿಕಲ್ಲು ರಸ್ತೆ ಅಂಕಾಜೆಯಲ್ಲಿರುವ ಅಪಾಯಕಾರಿ ಮರ ತೆರವುಗೊಳಿಸಬೇಕು ಎಂದು ಅರಣ್ಯಾಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದರು. ಪುತ್ರಬೈಲಿನಲ್ಲಿ ಸಮುದಾಯ ಭವನ ಬೀಳುವ ಹಂತಕ್ಕೆ ತಲುಪಿದ್ದು, ಇಲಾಖೆಗಳ ಗಮನಕ್ಕೆ ಬಂದಿದ್ದರೂ ದುರಸ್ತಿಗೊಳಿಸದೆ ನಿರ್ಲಕ್ಷೃ ವಹಿಸಿದ್ದಾರೆಂದು ಸುರೇಶ್ ಬೈರ ದೂರಿದರು.

ರಸ್ತೆ ನಿರ್ಮಾಣಕ್ಕೆ ಅವಕಾಶ

ಶಿಥಿಲಾವಸ್ಥೆಯಲ್ಲಿರುವ ಪಡ್ಲಾಡಿ ಅಂಬೇಡ್ಕರ್ ಭವನವನ್ನು ಈವರೆಗೂ ದುರಸ್ತಿ ಮಾಡಿಲ್ಲ. ಬಜಕ್ರೆಸಾಲು ಎಂಬಲ್ಲಿ ಬೆಟ್ಟದ ಮೇಲೆ ವಾಸವಿರುವ ಕುಟುಂಬಗಳಿಗೆ ರಸ್ತೆ ನಿರ್ಮಾಣಕ್ಕೆ ಭೂಮಾಲೀಕರೊಬ್ಬರು ತಡೆಯೊಡ್ಡುತ್ತಿದ್ದು, ರಸ್ತೆ ನಿರ್ಮಾಣಕ್ಕೆ ಗ್ರಾಪಂ ಅವಕಾಶ ಮಾಡಿಕೊಡಬೇಕು. ನಡುಗುಡ್ಡೆಯಲ್ಲಿ ಅಡಿಕೆ ಪಾಲ ಬಳಸಿ ಶಾಲಾ ಮಕ್ಕಳು ತೋಡು ದಾಟಬೇಕಿದೆ. ಸಮಾಜ ಕಲ್ಯಾಣ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು ಎಂದು ಶೇಖರ್ ಲಾಯಿಲ ಹೇಳಿದರು.
ಲಾಯಿಲ ಸ್ಮಶಾನದಿಂದ ಲಾಯಿಲಬೈಲು ಸಂಪರ್ಕ ರಸ್ತೆ ಅಭಿವೃದ್ಧಿಗೆ 1.50 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಶೇಖರ್ ಲಾಯಿಲ ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯರಾದ ಲಿಂಗಪ್ಪ ನಾಯ್ಕ ಬಾಳ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಧೀರಜ್, ಬೆಳ್ತಂಗಡಿ ವಲಯ ಉಪ ಅರಣ್ಯಾಧಿಕಾರಿ ಕಿರಣ್ ಪಾಟೀಲ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಾರನಾಥ್ ನಾಯ್ಕ, ಗ್ರಾಮಾಡಳಿತಾಧಿಕಾರಿ ರನಿತಾ, ಗ್ರಾಪಂ ಲೆಕ್ಕ ಸಹಾಯಕಿ ಸುಪ್ರೀತಾ ಶೆಟ್ಟಿ ಉಪಸ್ಥಿತರಿದ್ದರು.

ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಆಗ್ರಹ

ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಯೊಂದು 5 ಎಕರೆ ಸರ್ಕಾರಿ ಜಮೀನನ್ನು ಶಿಕ್ಷಣ ಸಂಸ್ಥೆಗೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಗ್ರಾಮದಲ್ಲಿ ಎಸ್ಸಿ/ಎಸ್ಟಿ ಕುಟುಂಬಗಳಿಗೆ ನಿವೇಶನಕ್ಕೆ ನೀಡಲು ಜಾಗವಿಲ್ಲ ಎನ್ನುವುದು ಯಾವ ನ್ಯಾಯ? ಎಂದು ಶೇಖರ್ ಲಾಯಿಲ ಪ್ರಶ್ನಿಸಿದರು. ಸದರಿ ಸ್ಥಳಕ್ಕೆ ಬಂದಿರುವ ಆಕ್ಷೇಪ, ನ್ಯೂನತೆ ಕ್ರೋಡೀಕರಿ ವರದಿ ಸಲ್ಲಿಸಿರುವುದಾಗಿ ಗ್ರಾಮ ಆಡಳಿತಾಧಿಕಾರಿ ರನಿತಾ ತಿಳಿಸಿದರು.

ಗೃಹಜ್ಯೋತಿ ಯೋಜನೆ ಅನುಷ್ಠಾನಕ್ಕೆ ಆಗ್ರಹ

ಗೃಹಜ್ಯೋತಿ ನೋಂದಣಿಗೆ ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸೇರಿದಂತೆ ಇನ್ನಿತರ ತಾಂತ್ರಿಕ ಸಮಸ್ಯೆಯಿಂದ ತೊಂದರೆಗಳಾಗುತ್ತಿದ್ದು, ಈಗಾಗಲೇ ಮೆಸ್ಕಾಂ ಇಲಾಖೆಯಲ್ಲಿ ಜನರು ಕ್ಯೂ ನಿಲ್ಲುತ್ತಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮಸ್ಥರ ಅನುಕೂಲಕ್ಕಾಗಿ ಮೆಸ್ಕಾಂ ಇಲಾಖೆ ಸಹಕಾರದಲ್ಲಿ ಪಂಚಾಯಿತಿ ನೇತೃತ್ವದಲ್ಲಿ ವಾರ್ಡ್‌ಮಟ್ಟದಲ್ಲಿ ಗೃಹಜ್ಯೋತಿ ಯೋಜನೆ ಅನುಷ್ಠಾನ ಮಾಡಬೇಕು ಎಂದು ಶೇಖರ್ ಲಾಯಿಲ ಆಗ್ರಹಿಸಿದರು. ಗ್ರಾಪಂ ವ್ಯಾಪ್ತಿಯ ವಾರ್ಡ್‌ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net