ಬಂಟ್ವಾಳ: ತಾಲೂಕಿನ ನಾವೂರು ಗ್ರಾಪಂ ವ್ಯಾಪ್ತಿಯ ಬಡಗುಂಡಿಯಲ್ಲಿ ಹೆದ್ದಾರಿ ಬದಿ ಹಾಗೂ ನೀರು ಹರಿಯುವ ತೋಡಿನಲ್ಲಿ ವಧೆಗೈದ ಗೋವಿನ ಅವಶೇಷ, ತ್ಯಾಜ್ಯದ ರಾಶಿ ಪತ್ತೆಯಾಗಿದ್ದು ಸ್ಥಳೀಯರು ಆಶ್ರೋಶ ವ್ಯಕ್ತಪಡಿಸಿದ್ದಾರೆ.
ವಧೆಗೈದ ಕರುವಿನ ಮುಖ, ಗೋವುಗಳ ಮೂಳೆ ಹಾಗೂ ಶರೀರದ ವಿವಿಧ ಅಂಗಗಳು ಹಾಗೂ ಕೋಳಿ ಕಾಲುಗಳ ಸಹಿತ ಲೋಡಿನಷ್ಟು ತ್ಯಾಜ್ಯವನ್ನು ಕಿಡಿಗೇಡಿಗಳು ಮೋರಿ ಕೆಳಗೆ ಹರಿಯುವ ನೀರಿಗೆ ಹಾಗೂ ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ. ಮಧ್ಯರಾತ್ರಿ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಬುಧವಾರ ಬೆಳಗ್ಗೆ ತ್ಯಾಜ್ಯದ ದುರ್ವಾಸನೆ ಬರುತ್ತಿತ್ತು. ಸ್ಥಳೀಯರು ಸ್ಥಳಕ್ಕೆ ತೆರಳಿದಾಗ ಗೋಮಾಂಸದ ತ್ಯಾಜ್ಯ ಪತ್ತೆಯಾಗಿದೆ.
ಅಕ್ರಮವಾಗಿ ನಡೆಸಲಾಗುತ್ತಿರುವ ಕಸಾಯಿಖಾನೆಯಲ್ಲಿ ಗೋವುಗಳನ್ನು ವಧೆಗೈದು ಅವುಗಳ ತ್ಯಾಜ್ಯ ತಂದು ಇಲ್ಲಿ ಎಸೆಯಲಾಗಿದೆ. ಬಂಟ್ವಾಳದ ವಿವಿಧೆಡೆ ಅಕ್ರಮ ಕಸಾಯಿಖಾನೆಗಳು ಕಾರ್ಯಾಚರಿಸುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದೇ ಇಂಥ ಕೃತ್ಯಗಳಿಗೆ ಕಾರಣವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವೂರು ಗ್ರಾಪಂ ಮಾಜಿ ಸದಸ್ಯ ಸದಾನಂದ ನಾವೂರು ಪೊಲೀಸರಿಗೆ ಹಾಗೂ ಗ್ರಾಪಂ ಪಿಡಿಒಗೆ ಘಟನೆ ಬಗ್ಗೆ ಮಾಹಿತಿ ನೀಡಿ ವೈಜ್ಞಾನಿಕ ಪರೀಕ್ಷೆ ಮೂಲಕ ಯಾವ ಪ್ರಾಣಿಯ ಅವಶೇಷಗಳು ಎಂಬುದನ್ನು ಖಚಿತಪಡಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಪಿಡಿಒ, ಪೊಲೀಸರು ಭೇಟಿ
ಬಂಟ್ವಾಳ ಗ್ರಾಮಾಂತರ ಪೊಲೀಸರು, ನಾವೂರು ಪಿಡಿಒ ಹಾಗೂ ಪಶುವೈದ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪಿಡಿಒ ದೂರಿನನ್ವಯ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೋರಿ ಅಕ್ಕಪಕ್ಕ ಸಿಸಿ ಕ್ಯಾಮರಾ ಇಲ್ಲದಿರುವುದನ್ನು ಖಚಿತಪಡಿಸಿಕೊಂಡೇ ದುಷ್ಕರ್ಮಿಗಳು ತ್ಯಾಜ್ಯ ಎಸೆದಿದ್ದಾರೆ ಎನ್ನಲಾಗಿದೆ.