ಧಾರ್ಮಿಕ ಜಾಗೃತಿ, ಸಂಸ್ಕಾರಯುತ ಪರಿವರ್ತನೆ

 ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಜನಾ ಕಮ್ಮಟದ ಪೂರ್ವಭಾವಿ ಸಭೆ ನಡೆಯಿತು. ಭಜನಾ ಕಮ್ಮಟದ ಕಾರ್ಯದರ್ಶಿ ಎ.ವೀರು ಶೆಟ್ಟಿ, ಕಮ್ಮಟದ ಸಂಚಾಲಕ ಜಿ.ಸುಬ್ರಹ್ಮಣ್ಯ ಪ್ರಸಾದ್ ಮೊದಲಾದವರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಜನಾ ಕಮ್ಮಟದ ಪೂರ್ವಭಾವಿ ಸಭೆ ನಡೆಯಿತು. ಭಜನಾ ಕಮ್ಮಟದ ಕಾರ್ಯದರ್ಶಿ ಎ.ವೀರು ಶೆಟ್ಟಿ, ಕಮ್ಮಟದ ಸಂಚಾಲಕ ಜಿ.ಸುಬ್ರಹ್ಮಣ್ಯ ಪ್ರಸಾದ್ ಮೊದಲಾದವರಿದ್ದರು.
Published on

ಧರ್ಮಸ್ಥಳ: ಭಜನಾ ಪರಿಷತ್‌ನ ಚಟುವಟಿಕೆಗಳು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಹಾಗೂ ಸಂಸ್ಕಾರಯುತ ಪರಿವರ್ತನೆಗೆ ಕಾರಣವಾಗಿವೆ. ಈ ವರ್ಷದ ಭಜನಾ ಕಮ್ಮಟದ ಪೂರ್ವತಯಾರಿಗಳು ರಾಜ್ಯದಾದ್ಯಂತ ಉತ್ತಮವಾಗಿ ನಡೆಯುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದು ಭಜನಾ ಕಮ್ಮಟದ ಕಾರ್ಯದರ್ಶಿ ಎ.ವೀರು ಶೆಟ್ಟಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆಯಲ್ಲಿ ಮಂಗಳವಾರ ಮಾತನಾಡಿದರು.
ತಾಲೂಕು ಹಾಗೂ ವಲಯ ಭಜನಾ ಪರಿಷತ್‌ಗಳ ಮೂಲಕ ಬೇಸಿಗೆ ರಜೆಯಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ, ಕಾನೂನು ಮಾಹಿತಿ ಮತ್ತು ಆರೋಗ್ಯ ಶಿಬಿರ, ಭಜನೋತ್ಸವ, ಮನೆ-ಮನೆ ಭಜನೆ, ಸತ್ಸಂಗ, ಶ್ರಮದಾನ, ಸ್ವಚ್ಛತಾ ಕಾರ್ಯಕ್ರಮ, ರಾಷ್ಟ್ರೀಯ ದಿನಾಚರಣೆ ಹಾಗೂ ಹಬ್ಬ-ಹರಿದಿನಗಳ ಆಚರಣೆ ಸೇರಿದಂತೆ ಹಲವು ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಮ್ಮಟದ ಸಂಚಾಲಕ ಜಿ.ಸುಬ್ರಹ್ಮಣ್ಯ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಜನಾ ಕಮ್ಮಟದ ಶಿಬಿರಾರ್ಥಿಗಳ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ತಾಲೂಕುಮಟ್ಟದಲ್ಲಿ ಭಜನಾ ಪರಿಷತ್ ಸಭೆಗಳು ನಡೆಯುತ್ತಿವೆ. ಸೆಪ್ಟೆಂಬರ್ 27ರಂದು ಮಧ್ಯಾಹ್ನ 2.30ರಿಂದ ಶಿಬಿರಾರ್ಥಿಗಳ ನೋಂದಣಿ ಆರಂಭವಾಗಲಿದೆ ಎಂದು ತಿಳಿಸಿದರು.

ಸೀತಾರಾಮ ತೋಳ್ಪಾಡಿತ್ತಾಯ, ಬಿ.ಭುಜಬಲಿ, ಲಕ್ಷ್ಮೀನಾರಾಯಣ ರಾವ್, ಪಾರ್ಶ್ವನಾಥ್ ಜೈನ್, ಮಹಾವೀರ ಅಜ್ರಿ, ಕೇಶವ ಪಿ., ಡಾ.ಶಶಿಕಾಂತ್ ಜೈನ್, ರತ್ನವರ್ಮ ಜೈನ್ ಹಾಗೂ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

ಭಜನಾ ಕಮ್ಮಟದ ವಿವಿಧ ಉಪಸಮಿತಿಗಳ ಪ್ರಮುಖರು, ಊರವರು ಹಾಗೂ ಕನ್ಯಾಕುಮಾರಿ ಯುವತಿ ಮಂಡಲದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಪವಿತ್ರ ಸುನೀಲ್ ಸ್ವಾಗತಿಸಿದರು. ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ.ಅಳಿಯೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಸಿದ್ಧತೆ ಕುರಿತು ಸಮಾಲೋಚನೆ

ಕಮ್ಮಟದ ವಸತಿ ವ್ಯವಸ್ಥೆ, ಉದ್ಘಾಟನಾ ಸಮಾರಂಭ, ನಗರ ಭಜನೆ, ಸಾಧಕ ಭಜನಾ ಮಂಡಳಿಗಳ ಆಯ್ಕೆ, ಸಂಪನ್ಮೂಲ ವ್ಯಕ್ತಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅಕ್ಟೋಬರ್ 4ರಂದು ನಡೆಯಲಿರುವ ಭಜನೋತ್ಸವ ಮತ್ತು ಸಮಾರೋಪ ಸಮಾರಂಭದ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ವಿವಿಧ ಜವಾಬ್ದಾರಿಗಳ ನಿರ್ವಹಣೆಗೆ ಪೂರಕ ಸಮಿತಿಗಳನ್ನು ರಚಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net