ಕುಂದಾಪುರದಲ್ಲಿ ಅಪಾಯಕಾರಿ ತಿರುವುಗಳಿಗೆ ಕಾಯಕಲ್ಪ

 ತಲ್ಲೂರು- ನೇರಳಕಟ್ಟೆ- ಆಜ್ರಿ- ಸಿದ್ದಾಪುರ ಮುಖ್ಯ ರಸ್ತೆಯ ಅಪಾಯಕಾರಿ ತಿರುವು.
ತಲ್ಲೂರು- ನೇರಳಕಟ್ಟೆ- ಆಜ್ರಿ- ಸಿದ್ದಾಪುರ ಮುಖ್ಯ ರಸ್ತೆಯ ಅಪಾಯಕಾರಿ ತಿರುವು.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಶೆಟ್ರಕಟ್ಟೆಯ ಬಸ್-ಟಿಪ್ಪರ್ ದುರ್ಘಟನೆ ಬಳಿಕ ತಲ್ಲೂರು-ನೇರಳಕಟ್ಟೆ- ಆಜ್ರಿ-ಸಿದ್ದಾಪುರ ಮುಖ್ಯ ರಸ್ತೆಯ ಬಗ್ಗೆ ಜನರಿಂದ ಆರೋಪಗಳು ಕೇಳಿ ಬರುತ್ತಿದೆ. ಈ ರಸ್ತೆಯ ಅಗಲೀಕರಣದೊಂದಿಗೆ ಅಲ್ಲಲ್ಲಿ ಅಪಾಯಕಾರಿ ತಿರುವುಗಳಿಗೆ ಕಾಯಕಲ್ಪ ಮಾಡಬೇಕು ಎನ್ನುವ ಕೂಗು ಜನರಿಂದ ಬಲವಾಗಿ ಕೇಳಿ ಬರುತ್ತಿದೆ.
ಶೆಟ್ರಕಟ್ಟೆಯ ಒಂದು ದುರ್ಘಟನೆ ವ್ಯವಸ್ಥೆಯ ಸಾಕಷ್ಟು ಹುಳುಕುಗಳನ್ನು ಬಯಲು ಮಾಡಿದ್ದು, ಅಕ್ರಮ ಟಿಪ್ಪರ್‌ಗಳ ಓಡಾಟ, ವೇಗ, ನಿರ್ಲಕ್ಷೃತನದ ಚಾಲನೆ ಜತೆಗೆ ಅವೈಜ್ಞಾನಿಕ ರಸ್ತೆಗಳು ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಅಪಘಾತದಿಂದ ಆದರೂ ಎಚ್ಚೆತ್ತುಕೊಂಡು ಬಹು ಬೇಡಿಕೆಯ ತಲ್ಲೂರು- ನೇರಳಕಟ್ಟೆ- ಆಜ್ರಿ ಮುಖ್ಯ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲಿ ಎಂದು ಜನ ಒತ್ತಾಯಿಸಿದ್ದಾರೆ.
ತಲ್ಲೂರು- ನೇರಳಕಟ್ಟೆ ಮುಖ್ಯ ರಸ್ತೆಯ ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆಯ ಪೆಟ್ರೋಲ್ ಬಂಕ್‌ಗಿಂತ ತುಸು ಮುಂದೆ ಇರುವ ತಿರುವು ಬಹಳಷ್ಟು ಅಪಾಯಕಾರಿಯಾಗಿದೆ. ಇಲ್ಲಿ ಬಸ್‌ಗೆ ಟಿಪ್ಪರ್ ಡಿಕ್ಕಿಯಾಗಿದ್ದಲ್ಲದೆ, ಅದಕ್ಕಿಂತಲೂ ಹಿಂದೆ ಅನೇಕ ಅಪಘಾತಗಳು ಸಂಭವಿಸಿವೆ. ರಿಕ್ಷಾವೊಂದು ಪಲ್ಟಿಯಾಗಿ ಸಾವು-ನೋವು ಉಂಟಾಗಿತ್ತು. ಇದಲ್ಲದೇ ಹಲವು ಬಾರಿ ಬೈಕ್ ಪಲ್ಟಿಯಾಗಿ ಸವಾರರಿಗೆ ಗಂಭೀರ ಗಾಯಗಳಾಗಿವೆ. ಇಲ್ಲಿ ರಸ್ತೆಗೆ ತಾಗಿಕೊಂಡು 7-8 ಮರಗಳಿದ್ದು, ಅದು ಸಹ ಅಪಘಾತಗಳಿಗೆ ಕಾರಣ ಆಗುತ್ತಿದೆ ಎನ್ನುವುದು ನಿತ್ಯ ಸಂಚರಿಸುವವರ ಆರೋಪ.
ತಲ್ಲೂರಿನ ಹೆದ್ದಾರಿಯಿಂದ ಆರಂಭಗೊಂಡು ನೇರಳಕಟ್ಟೆ, ಆಜ್ರಿ, ಸಿದ್ದಾಪುರದವರೆಗೆ 30 -32 ಕಿ.ಮೀ. ದೂರದ ರಸ್ತೆ ಇದಾಗಿದ್ದು, ಈ ಪೈಕಿ ಬಹುತೇಕ ಕಡೆಗಳಲ್ಲಿ ಕಿರಿದಾಗಿದೆ. ಕೆಲವೆಡೆಯಂತೂ ಬಹಳಷ್ಟು ಕಿರಿದಾಗಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹಲವಾರು ವರ್ಷದಿಂದ ಈ ರಸ್ತೆಯ ಅಗಲೀಕರಣ ಬೇಡಿಕೆಯಿದ್ದು, ಆದರೆ ಮೀನಮೇಷ ಎಣಿಸುತ್ತಿರುವುದು ಮಾತ್ರ ಆಳುವ ವರ್ಗದ ನಿರ್ಲಕ್ಷೃ ಎತ್ತಿ ತೋರಿಸುವಂತಿದೆ.
ಕುಂದಾಪುರ, ತಲ್ಲೂರು, ನೇರಳಕಟ್ಟೆ ಭಾಗದಿಂದ ಕೆರಾಡಿ, ಬೆಳ್ಳಾಲ, ಬಾಂಡ್ಯ, ಕೊಡ್ಲಾಡಿ, ಆಜ್ರಿ, ಚೋನಮನೆ ಶ್ರೀ ಶನೀಶ್ವರ ದೇವಸ್ಥಾನ, ಕಮಲಶಿಲೆ ದೇವಸ್ಥಾನ, ಸಿದ್ದಾಪುರ ಸೇರಿದಂತೆ ಹಲವೆಡೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ನಿತ್ಯ ಹತ್ತಾರು ಬಸ್‌ಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ಸಾವಿರಾರು ಇತರ ವಾಹನಗಳು, ಸಾವಿರಾರು ಮಂದಿ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಈ ರಸ್ತೆ 50 ವರ್ಷಗಳ ಹಿಂದೆಯೇ ಆಗಿದೆ. ಆಗ ಸಂಚರಿಸುವ ವಾಹನಗಳಿಗೂ, ಈಗ ಸಂಚರಿಸುವ ವಾಹನಗಳ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ. ಈಗಿನ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಈ ರಸ್ತೆ ಅಗಲೀಕರಣ ಆಗಬೇಕಾಗಿದೆ ಎನ್ನುವುದು ಸಾರ್ವಜನಿಕರ ಒತ್ತಾಯ.

ಹಲವೆಡೆ ಅಪಘಾತಗಳು ಸಂಭವ

ಶೆಟ್ರಕಟ್ಟೆ ಮಾತ್ರವಲ್ಲದೆ ತಲ್ಲೂರಿನಿಂದ ಆರಂಭಗೊಂಡು ಕುಂತಿ ಅಮ್ಮ ದೇವಸ್ಥಾನ ಬಳಿಯ ತಿರುವು, ಹಟ್ಟಿಯಂಗಡಿ ಪಂಚಾಯಿತಿ ಬಳಿ, ಕರ್ಕಿಯಲ್ಲಿ ಹಟ್ಟಿಯಂಗಡಿ ಶಾಲೆ ಹತ್ತಿರ, ಮಾವಿನಕಟ್ಟೆ ಕೋಳಿ ಾರಂ, ಮಾವಿನಕಟ್ಟೆ ಜಂಕ್ಷನ್, ಭಟ್ರಾಡಿ, ಜಡ್ಡಿನಕೊಡ್ಲು ಕ್ರಾಸ್, ಕೊಡ್ಲಾಡಿ, ಬಾಂಡ್ಯ, ಚೋನಮನೆ ದೇವಸ್ಥಾನದ ಕ್ರಾಸ್ ಬಳಿ ಹೀಗೆ ಈ ರಸ್ತೆಯುದ್ದಕ್ಕೂ ಹಲವಾರು ಕಡೆಗಳಲ್ಲಿ ಅಪಾಯಕಾರಿ ತಿರುವುಗಳಿದ್ದು, ಇಲ್ಲಿ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಲೇ ಇದೆ.

ಶೆಟ್ರಕಟ್ಟೆ ಅಪಘಾತ ನಡೆದ ದಿನವೇ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಈ ಬಗ್ಗೆ ಪೊಲೀಸರಿಂದ ಬ್ಲಾಕ್ ಸ್ಪಾಟ್(ಅಪಘಾತ ವಲಯ) ಅನ್ನುವ ವರದಿ ಬರಲಿದೆ. ಅದರಡಿ ಅನುದಾನಕ್ಕಾಗಿ ಪ್ರಯತ್ನಿಸಲಾಗುವುದು. ಅದರೊಂದಿಗೆ ಮಾವಿನಕಟ್ಟೆ ಜಂಕ್ಷನ್‌ನ ಅಭಿವೃದ್ಧಿ ಮಾಡಲಾಗುವುದು. ಈ ರಸ್ತೆ ಅಗಲೀಕರಣ ಬಗ್ಗೆ ನಾವು ನಿರಂತರ ಪ್ರಯತ್ನದಲ್ಲಿದ್ದೇವೆ. ಸರ್ಕಾರದಿಂದ ಅನುದಾನ ಬಂದರೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

ಬಸ್, ಇತರ ವಾಹನಗಳೆಲ್ಲ ಬಂದರೆ ಎದುರಿನ ವಾಹನಗಳು ರಸ್ತೆಯಿಂದ ಇಳಿಯಬೇಕಾಗಿದೆ. ಕೆಲವೆಡೆ ರಸ್ತೆ ಎತ್ತರವಿರುವುದರಿಂದ ಕೆಳಗೆ ಇಳಿಯುವುದು ಸಹ ಅಪಾಯಕಾರಿಯಾಗಿದೆ. ತುಂಬಾ ಇಕ್ಕಟ್ಟಾದ ರಸ್ತೆಯಾಗಿದೆ. ಹೆಮ್ಮಾಡಿ- ಕೊಲ್ಲೂರು ರಸ್ತೆಯಂತೆಯೇ ಈ ರಸ್ತೆಯಲ್ಲಿಯೂ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಪಾಯಕಾರಿ ತಿರುವು ಸರಿಪಡಿಸುವುದರ ಜತೆಗೆ ಈ ರಸ್ತೆಯ ಅಗಲೀಕರಣ ಬಗ್ಗೆ ಸಂಬಂಧಪಟ್ಟವರು ಗಮನಹರಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net