ಜನನ-ಮರಣದ ನಿಖರ ಮಾಹಿತಿ ದಾಖಲಿಸಿ

ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಅಬೀದ್​ ಗದ್ಯಾಳ್​, ಎಂ.ವಿ. ದೊಡಮನಿ, ಡಾ. ಬಸವರಾಜ್​ ಹುಬ್ಬಳ್ಳಿ, ಸುಬ್ರಹ್ಮಣ್ಯ ಶೆಟ್ಟಿ, ಕ್ಷಮಾ ಪಾಟೀಲ್​, ಮಂಜುನಾಥ್​ ಬಿ. ಇತರರಿದ್ದರು.
ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಅಬೀದ್​ ಗದ್ಯಾಳ್​, ಎಂ.ವಿ. ದೊಡಮನಿ, ಡಾ. ಬಸವರಾಜ್​ ಹುಬ್ಬಳ್ಳಿ, ಸುಬ್ರಹ್ಮಣ್ಯ ಶೆಟ್ಟಿ, ಕ್ಷಮಾ ಪಾಟೀಲ್​, ಮಂಜುನಾಥ್​ ಬಿ. ಇತರರಿದ್ದರು.
Published on: 

* ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ

* ಉಡುಪಿಯಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ

ಉಡುಪಿ: ಜನನ ಮತ್ತು ಮರಣ ನೋಂದಣಿಯು ಭವಿಷ್ಯದ ಕೆಲಸ ಕಾರ್ಯಗಳಿಗೆ ಅಗತ್ಯವಾದ ಪ್ರಮಾಣಪತ್ರವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಸಂಭವಿಸುವ ಪ್ರತಿಯೊಂದು ಜನನ ಮತ್ತು ಮರಣದ ವಿವರಗಳನ್ನು ಯಾವುದೇ ತಪ್ಪುಗಳಿಗೆ ಆಸ್ಪದವಿಲ್ಲದಂತೆ ನಿಖರವಾಗಿ ಮಾಹಿತಿ ದಾಖಲು ಮಾಡಬೇಕು ಎಂದು ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಅ.6) ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

ತಪ್ಪು ನೋಂದಣಿ

ಅನೇಕರ ತಂದೆ&ತಾಯಿಯ ಹೆಸರು, ಲಿಂಗದ ಕೋಷ್ಟಕದಲ್ಲಿ ತಪ್ಪು ನಮೂದಾಗುತ್ತಿದೆ. ಸ್ಥಳ ಮಹಜರು ಮಾಡದೆ ಮರಣ ಪ್ರಮಾಣಪತ್ರ ನೀಡುವುದು, ನೋಂದಣಿ ಘಟಕದ ವ್ಯಾಪ್ತಿ ಮೀರಿ ನೋಂದಣಿ, ಮೂಲ ದಾಖಲೆಗಳ ಪರಿಶೀಲಿಸದೇ ಘಟನೆಗಳ ಹೆಸರು, ದಿನಾಂಕ ಮತ್ತು ವಿಳಾಸ ತಪ್ಪಾಗಿ ನಮೂದಿಸುವುದು ಸೇರಿದಂತೆ ಇನ್ನಿತರ ಸಾಮಾನ್ಯ ತಪ್ಪು ನೋಂದಣಿ ಕಾರ್ಯದಲ್ಲಿ ಆಗುತ್ತಿವೆ. ತಿದ್ದುಪಡಿ ಸಂದರ್ಭದಲ್ಲಿ ತಂದೆ-ತಾಯಿಯ ಜಂಟಿ ಸಹಿ ಮತ್ತು ಅಗತ್ಯ ದಾಖಲೆ ಖಾತರಿಪಡಿಸಿ ನಿಯಮಾನುಸಾರ ಮಾಹಿತಿ ದಾಖಲಿಸಬೇಕು. ಸಾಧ್ಯವಾದಲ್ಲಿ ಕರಡು ಪ್ರತಿಯನ್ನು ಸಂಬಂಧಪಟ್ಟವರಿಗೆ ತೋರಿಸಿ ಅನುಮೋದನೆ ಪಡೆಯುವುದು ಸೂಕ್ತ ಎಂದರು.

ಸಾರ್ವಜನಿಕರಿಂದ ದೂರು

ಮಗು ಮರಣ ಹೊಂದಿದಾಗ ಮರಣದ ಕಾರಣ ಕುರಿತು ನಮೂದಿಸಲು ಪೋರ್ಟಲ್​ನಲ್ಲಿ ಯಾವುದೇ ಆಯ್ಕೆ ಇಲ್ಲದ್ದರಿಂದ ತೊಂದರೆ ಉಂಟಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿವೆ. ಈ ಬಗ್ಗೆ ಪೋರ್ಟಲ್​ನಲ್ಲಿ ಸೃಜಿಸುವಂತೆ ಸರ್ಕಾರದ ಗಮನಕ್ಕೆ ತರಲು ಪತ್ರ ಬರೆಯಬೇಕು. ಜನನ-ಮರಣ ಘಟನೆ ತಮ್ಮ ವ್ಯಾಪ್ತಿಯಲ್ಲಿ ಸಂಭವಿಸಿದ ಬಗ್ಗೆ ಸೂಕ್ತ ದಾಖಲೆ ಪರಿಶೀಲಿಸಿದ ಬಳಿಕವೇ ಲಭ್ಯ ಪ್ರಮಾಣ ಪತ್ರ ನೀಡಬೇಕು. ಒಂದೊಮ್ಮೆ ಅರ್ಜಿದಾರರು ನೀಡಿರುವ ದಾಖಲೆಗಳು ನಕಲಿ ಎಂದು ಕಂಡುಬಂದಲ್ಲಿ ಪೊಲೀಸ್​ ಪರಿಶೀಲನೆಗೊಳಪಡಿಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​, ಡಿಎಚ್​ಒ ಡಾ. ಬಸವರಾಜ್​ ಹುಬ್ಬಳ್ಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್​, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್​ ಬಿ. ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 8,351 ಜನನ, 8,982 ಮರಣ

ಉಡುಪಿ ಜಿಲ್ಲೆಯಲ್ಲಿ ಒಟ್ಟು 574 ಜನನ-ಮರಣ ನೋಂದಣಿ ಘಟಕ ಕಾರ್ಯನಿರ್ವಹಿಸುತ್ತಿದ್ದು, 2026ರ ಜನವರಿಯಿಂದ ಈವರೆಗೆ ಗ್ರಾಮಾಂತರ ಪ್ರದೇಶದಲ್ಲಿ 1,256 ಹಾಗೂ ನಗರ ವ್ಯಾಪ್ತಿಯಲ್ಲಿ 7,095 ಸೇರಿದಂತೆ ಒಟ್ಟು 8,351 ಜನನ ನೋಂದಣಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ 5,399 ಹಾಗೂ ನಗರ ಪ್ರದೇಶದಲ್ಲಿ 3,583 ಸೇರಿದಂತೆ ಒಟ್ಟು 8,982 ಮರಣ ನೋಂದಣಿಯಾಗಿದೆ. 39 ನಿರ್ಜೀವ ಜನನ ನೋಂದಣಿಯಾಗಿದೆ. ಜಿಲ್ಲೆಯಲ್ಲಿ ಹೆಣ್ಣು ಮತ್ತು ಗಂಡಿನ ಅನುಪಾತವು 912ರಷ್ಟಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ.ವಿ. ದೊಡಮನಿ ಮಾಹಿತಿ ನೀಡಿದರು.

ನ್ಯಾಯಾಲಯದಿಂದ ಜನನ&ಮರಣ ತಿದ್ದುಪಡಿ ಪ್ರಕರಣಗಳಿಗೆ ಸಂಬಂಧಿಸಿ ನೋಟಿಸ್​ ಜಾರಿಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಲಭ್ಯ ದಾಖಲೆಗಳೊಂದಿಗೆ ತೆರಳಿ ನಿಲುವು ಸಲ್ಲಿಸಬೇಕು. ಅಧಿಕಾರಿಗಳಿಗೆ ಹಾಜರಾಗಲು ಸಾಧ್ಯವಿಲ್ಲದಿದ್ದಲ್ಲಿ ಪ್ರತಿನಿಧಿ ನಿಯೋಜಿಸಿ ಗೈರು ತಪ್ಪಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಆಗಾಗ ಜನನ-ಮರಣ ನೋಂದಣಿ ಘಟಕಗಳ ತಪಾಸಣೆ ಕೈಗೊಳ್ಳಬೇಕು. ಸಮರ್ಪಕ ತರಬೇತಿ ಹೊಂದಿದ ನೋಂದಣಾಧಿಕಾರಿ, ಉಪನೋಂದಣಾಧಿಕಾರಿ, ಡಾಟಾ ಎಂಟ್ರಿ ಆಪರೇಟರ್​ಗಳನ್ನು ನಿಯೋಜಿಸಬೇಕು.
ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net