ಸ್ಥಳಿಯರಿಗೆ ಹೆಜಮಾಡಿ ಟೋಲ್‌ ರಿಯಾಯಿತಿ ನೀಡಲು ಶಿಫಾರಸ್ಸು: ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸಭೆಯಲ್ಲಿ ಮಾತನಾಡಿದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸಭೆಯಲ್ಲಿ ಮಾತನಾಡಿದರು.
Published on
ಉಡುಪಿ: ಸಾಸ್ತಾನ ಹಾಗೂ - ಶಿರೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ರಾಷ್ಟ್ರೀಯ ಹೆದ್ದಾರಿ ಸುಂಕ ವಸೂಲಾತಿ ಕೇಂದ್ರದಲ್ಲಿ ನೀಡಿರುವ ರಿಯಾಯಿತಿಯಂತೆ ಹೆಜಮಾಡಿ ಭಾಗದ ಟೋಲ್​ ವ್ಯಾಪ್ತಿಯ ಸ್ಥಳಿಯರಿಗೆ ವಿನಾಯಿತಿ ನೀಡುವಂತೆ ಕೋರಿ ಲೋಕೋಪಯೋಗಿ ಇಲಾಖೆಗೆ ಶಿಫಾರಸ್ಸು ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾ. ಹೆ. ಟೋಲ್​ ಸುಂಕ ವಸೂಲಾತಿ ಸಮಸ್ಯೆ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆಜಮಾಡಿ ವ್ಯಾಪ್ತಿಯಲ್ಲಿ ನಿಯಮ ಪಾಲನೆಯಾಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಸಾಸ್ತಾನದಲ್ಲಿ 10 ಕಿ.ಮೀ ವ್ಯಾಪ್ತಿಯಲ್ಲಿ ಸ್ಥಳಿಯರಿಗೆ ವಿನಾಯಿತಿ ನೀಡಲಾಗಿದೆ. ಈ ಮಾದರಿಯನ್ನೇ ಹೆಜಮಾಡಿಯಲ್ಲಿ ಅನುಸರಿಸುವಂತೆ ಸ್ಥಳಿಯರು ಬೇಡಿಕೆ ಸಲ್ಲಿಸುತ್ತಿದ್ದಾರೆ. ಸಾರ್ವಜನಿಕರು ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಿಗೆ ದಿನದಲ್ಲಿ ಹಲವು ಬಾರಿ ಟೋಲ್​ನಲ್ಲಿ ಹಾದುಹೋಗುವಾಗ ಪ್ರತಿಬಾರಿಯೂ ಶುಲ್ಕ ಪಾವತಿ ಮಾಡಲು ಅನಾನುಕೂಲತೆ ಉಂಟಾಗುತ್ತದೆ. ಟೋಲ್​ ಪ್ಲಾಜಾ ಸುತ್ತಮುತ್ತಲಿನ ಸ್ಥಳಿಯ ವಾಹನಗಳಿಗೆ ಹಾಗೂ ನಿಗದಿತ ವ್ಯಾಪ್ತಿಯಲ್ಲಿ ಬರುವ ನೋಂದಾಯಿತ ವಾಹನಗಳಿಗೆ ಸುಂಕ ವಿನಾಯಿತಿ ಅಥವಾ ಮಾಸಿಕ ಪಾಸ್​ ಸೌಲಭ್ಯ ಕಲ್ಪಿಸಿದಲ್ಲಿ ಅನುಕೂಲವಾಗಲಿದೆ ಎಂಬ ಬೇಡಿಕೆ ಇದೆ ಎಂದು ಹೇಳಿದರು.
ಈಗಾಗಲೇ ರಾ.ಹೆ. 66ರ ಕೆಲವು ವ್ಯಾಪ್ತಿಯಲ್ಲಿ ಸರ್ವೀಸ್​ ರಸ್ತೆಗಳನ್ನು ನಿಮಾರ್ಣ ಮಾಡಲು ಅನುಮತಿ ದೊರಕಿದ್ದು, ಇವುಗಳ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸಿ, ಪೂರ್ಣಗೊಳಿಸಬೇಕು. ಸರ್ವೀಸ್​ ರಸ್ತೆ, ರಸ್ತೆ ರಿಪ್ಲೆಕ್ಟರ್​ಗಳ ಅಳವಡಿಕೆ, ದಾರಿದೀಪ ಅಳವಡಿಕೆ, ರಸ್ತೆಯಲ್ಲಿ ಹೊಂಡ-ಗುಂಡಿ ದುರಸ್ಥಿ, ಒಳಚರಂಡಿ ಕಾಮಗಾರಿ, ಜಂಕ್ಷನ್​ಗಳಲ್ಲಿ ಸರಿಯಾದ ಸೂಚನಾ ಫಲಕ ಅಳವಡಿಸುವುದು ಸೇರಿದಂತೆ ಸುರಕ್ಷತಾ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ಅಪಘಾತಗಳಿಗೆ ಕಡಿವಾಣ ಹಾಕಬಹುದು. ಇದಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಮಾಜಿ ಸಚಿವ ವಿನಯಕುಮಾರ್​ ಸೊರಕೆ, ಜಿಲ್ಲಾ ಪೊಲೀಸ್​ ಅಧೀಕ್ಷಕ ಹರಿರಾಮ್​ ಶಂಕರ್​, ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಿರಣ್​ ಎಸ್​. ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್​ ಜಾವೇದ್​ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net