ಜನ್ಮಾಷ್ಟಮಿಗೆ 'ಮತ್ಸ್ಯಪುರುಷ'ನ ವೇಷ

ಉಡುಪಿಯ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರವಿ ಫ್ರೆಂಡ್ಸ್​ ಕಟಪಾಡಿ ತಂಡದ ಮಾರ್ಗದರ್ಶಕ ಕೆ.ಮಹೇಶ್​ ಮಾತನಾಡಿದರು. ರವಿ ಕಟಪಾಡಿ, ಹರ್ಷ, ಶ್ರವಣ್​, ಆಶಿಕ್​ ಉಪಸ್ಥಿತರಿದ್ದರು.
ಉಡುಪಿಯ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರವಿ ಫ್ರೆಂಡ್ಸ್​ ಕಟಪಾಡಿ ತಂಡದ ಮಾರ್ಗದರ್ಶಕ ಕೆ.ಮಹೇಶ್​ ಮಾತನಾಡಿದರು. ರವಿ ಕಟಪಾಡಿ, ಹರ್ಷ, ಶ್ರವಣ್​, ಆಶಿಕ್​ ಉಪಸ್ಥಿತರಿದ್ದರು.
Published on

* ಖ್ಯಾತ ವೇಷಧಾರಿ ರವಿ ಕಟಪಾಡಿ ಮಾಹಿತಿ

* ಪುಟಾಣಿ ಮಕ್ಕಳ ಕ್ಯಾನ್ಸರ್​ ಚಿಕಿತ್ಸೆಗೆ ಧನ ಸಂಗ್ರಹ

ಉಡುಪಿ: ಪುಟಾಣಿ ಮಕ್ಕಳ ಕ್ಯಾನ್ಸರ್​ ಚಿಕಿತ್ಸೆಗಾಗಿ ಈ ವರ್ಷವೂ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ 2 ದಿನ ವಿಶೇಷ ವೇಷ ಧರಿಸಿ ಧನ ಸಂಗ್ರಹಿಸಲಿದ್ದೇನೆ. ರವಿ ಫ್ರೆಂಡ್ಸ್​ ಕಟಪಾಡಿ ವತಿಯಿಂದ ಕಳೆದ 10 ವರ್ಷದಿಂದ ಜನ್ಮಾಷ್ಟಮಿಯಂದು ವೇಷ ಧರಿಸಿ ಒಟ್ಟು 1.85 ಕೋಟಿ ರೂ. ಸಂಗ್ರಹಿಸಿ ವಿತರಿಸಿದ್ದೇವೆ. ಈ ಬಾರಿ 15 ಲಕ್ಷ ರೂ. ಸಂಗ್ರಹಿಸುವ ಗುರಿಯಿದೆ. ಅದಕ್ಕಾಗಿ 'ಮತ್ಸ್ಯಪುರುಷ' (ಮರ್ಮೆನ್​)ನ ವೇಷಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಪ್ರೋತ್ಸಾಹಿಸಬೇಕೆಂದು ಖ್ಯಾತ ವೇಷಧಾರಿ ರವಿ ಕಟಪಾಡಿ ಮನವಿ ಮಾಡಿದರು.
ಉಡುಪಿಯ ಪತ್ರಿಕಾಭವನದಲ್ಲಿ ಶನಿವಾರ (ಆ.29) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ತಂಡವು ಕಳೆದ 10 ವರ್ಷದಲ್ಲಿ ಅನಾರೋಗ್ಯ ಪೀಡಿತ 204 ಮಕ್ಕಳ ಚಿಕಿತ್ಸೆಗೆ ಸಂಗ್ರಹಿಸಿದ ಹಣ ಹಸ್ತಾಂತರಿಸಿದ್ದೇವೆ ಎಂದು ತಿಳಿಸಿದರು.

ಮತ್ತೆ ವೇಷ ಧರಿಸಲ್ಲ

ಈ ಬಾರಿ ನಮ್ಮ ತಂಡದ 15ನೇ ವರ್ಷದ ವೇಷವಾಗಿದೆ. ಕಳೆದ ವರ್ಷ ಅನಾರೋಗ್ಯದಿಂದಾಗಿ ವೇಷ ಧರಿಸಿರಲಿಲ್ಲ. ಆದರೆ, ಬೇರೆ ಕಡೆಗಳಲ್ಲಿ ಕೆಲವರು ವೇಷ ಧರಿಸಿ ನಮ್ಮ ತಂಡದ ಹೆಸರಿನಲ್ಲಿ ಹಣ ದುರುಪಯೋಗ ಮಾಡಿಕೊಂಡಿದ್ದರಿಂದ ನೊಂದು ಮತ್ತೆ ವೇಷ ಧರಿಸಲೇಬಾರದು ಎಂದು ನಿರ್ಧರಿಸಿದ್ದೆ. ಆದರೆ, ಕ್ಯಾನ್ಸರ್​ ಪೀಡಿತ ಪುಟ್ಟ ಮಕ್ಕಳ ಯಾತನೆ ನೆನೆದು ಈ ವರ್ಷ ಕೊನೆಯದಾಗಿ ವೇಷ ಧರಿಸುತ್ತಿದ್ದೇನೆ. ಮತ್ತೆಂದೂ ಹಣ ಸಂಗ್ರಹಿಸಲು ವೇಷ ಮಾಡುವುದಿಲ್ಲ. ಸೆ.3ರಂದು ಬೆಳಗ್ಗೆ 9 ಗಂಟೆಗೆ ಮತ್ಸ್ಯಪುರುಷನ ವೇಷದ ತಯಾರಿ ಆರಂಭಿಸಲಿದ್ದೇನೆ. ಸೆ.4 ಮತ್ತು 5ರಂದು 2 ದಿನ ವೇಷ ಧರಿಸಿ ಸಂಚರಿಸುತ್ತೇನೆ ಎಂದು ತಿಳಿಸಿದರು.

80 ಸದಸ್ಯರು ಭಾಗಿ

ತಂಡದ ಮಾರ್ಗದರ್ಶಕ ಕೆ.ಮಹೇಶ್​ ಮಾತನಾಡಿ, ಕ್ಯಾನ್ಸರ್​ ಪೀಡಿತ ಮಕ್ಕಳ ಚಿಕಿತ್ಸೆಗೆ ಈ ಬಾರಿ 15 ಲಕ್ಷ ಸಂಗ್ರಹಿಸಿ ಒಟ್ಟು 2 ಕೋಟಿ ರೂ. ಪೂರ್ಣಮೊತ್ತ ಮಾಡಬೇಕೆಂಬ ತುಡಿತವಿದೆ. ತಂಡದಲ್ಲಿ ಸುಮಾರು 120 ಸದಸ್ಯರಿದ್ದು, ರಾಜ್ಯ, ದೇಶ-ವಿದೇಶದಲ್ಲೂ ನೆಲೆಸಿದ್ದಾರೆ. ಈ ಬಾರಿ ತಂಡದ ಸುಮಾರು 80 ಸದಸ್ಯರು ವೇಷಧಾರಿಯೊಂದಿಗೆ ಕಟಪಾಡಿ, ಉಡುಪಿ, ಮಲ್ಪೆ ಹಾಗೂ ಬ್ರಹ್ಮಾವರದಲ್ಲಿ ಹಣ ಸಂಗ್ರಹಿಸಲಿದ್ದಾರೆ ಎಂದರು.
ಕ್ಯಾನ್ಸರ್​ ಪೀಡಿತ ಮಕ್ಕಳ ಚಿಕಿತ್ಸೆಗೆ ಧನ ಸಹಾಯ ಮಾಡಲಿಚ್ಛಿಸುವವರು ರವಿ. ಕೆ., ಬ್ಯಾಂಕ್​ ಆಫ್​ ಬರೋಡ, ಪಾಂಗಳ ಶಾಖೆ, ಖಾತೆ ಸಂಖ್ಯೆ- 84350200000018, IFSC code- BARB0VJPANG (Kindly Note 5th Digit is ZERO) ಕೊಡುಗೆ ನೀಡಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಂಡದ ಸದಸ್ಯರಾದ ಹರ್ಷ, ಶ್ರವಣ್​, ಆಶಿಕ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net