ಮನುಷ್ಯನ ಬುದ್ಧಿಮತ್ತೆಗೆ ಎಐ ಸವಾಲು

ಉಡುಪಿಯಲ್ಲಿ ಆಯೋಜಿಸಿದ್ದ ರಂಗಭೂಮಿ ದಿನಾಚರಣೆಯಲ್ಲಿ ಪ್ರೊ. ಕೆ.ಫಣಿರಾಜ್​ ಕೃತಕ ಬುದ್ಧಿಮತ್ತೆ ಕುರಿತು ವಿಚಾರ ಮಂಡಿಸಿದರು. ಉದ್ಯಾವರ ನಾಗೇಶಕುಮಾರ್​, ಸುಬ್ರಹ್ಮಣ್ಯ ಜೋಶಿ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ರಂಗಭೂಮಿ ದಿನಾಚರಣೆಯಲ್ಲಿ ಪ್ರೊ. ಕೆ.ಫಣಿರಾಜ್​ ಕೃತಕ ಬುದ್ಧಿಮತ್ತೆ ಕುರಿತು ವಿಚಾರ ಮಂಡಿಸಿದರು. ಉದ್ಯಾವರ ನಾಗೇಶಕುಮಾರ್​, ಸುಬ್ರಹ್ಮಣ್ಯ ಜೋಶಿ ಇದ್ದರು.
Published on

* ಚಿಂತಕ ಪ್ರೊ. ಕೆ.ಫಣಿರಾಜ್​ ವಿಮರ್ಶೆ

* ವಿಶ್ವ ರಂಗಭೂಮಿ ದಿನಾಚರಣೆ, ವಿಚಾರಗೋಷ್ಠಿ

ಉಡುಪಿ: ಹಿಂದಿನ ರಂಗಭೂಮಿಯ ಆಕೃತಿಗೂ ಇಂದಿನ ರಂಗಭೂಮಿಯ ಆಕೃತಿಗಳಲ್ಲಿ ಅಜಗಜಾಂತರ ಕಾಣುತ್ತಿದ್ದೇವೆ. ವಿದ್ಯುತ್​ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿ ಚಿಮಣಿದೀಪದ ಬೆಳಕಿನಲ್ಲಿ, ತೆರೆದ ಬಯಲಿನಲ್ಲಿ ನಾಟಕ ಪ್ರದರ್ಶನ ಆಗುತ್ತಿತ್ತು. ಇದೀಗ ಕೃತಕ ಧ್ವನಿ, ಬೆಳಕಿನ ವ್ಯವಸ್ಥೆಯಲ್ಲಿ ನಾಟಕ ನಡೆದಿದೆ. 9ನೇ ಶತಮಾನದ ಉತ್ತರ ರಾಮ ಚರಿತೆಯ ಪ್ರದರ್ಶನಕ್ಕೂ 20ನೇ ಶತಮಾನದಲ್ಲಿ ಪ್ರದರ್ಶನಗೊಂಡ ಅದೇ ಪ್ರದರ್ಶನಕ್ಕೂ ತಾಳ&ಮೇಳಗಳ ಹೋಲಿಕೆಯೇ ಇಲ್ಲ ಎಂದು ಚಿಂತಕ ಪ್ರೊ. ಕೆ.ಫಣಿರಾಜ್​ ವಿಮರ್ಶಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕ ಸಭಾಂಗಣದಲ್ಲಿ ರಥಬೀದಿ ಗೆಳೆಯರು (ರಿ.) ಉಡುಪಿ ಸಾಂಸ್ಕೃತಿಕ ವೇದಿಕೆ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ಶನಿವಾರ (ಮಾ.28) ಸಂಜೆ ಆಯೋಜಿಸಿದ್ದ ವಿಚಾರಗೋಷ್ಠಿ ಮತ್ತು ರಂಗಗೀತೆಗಳು ಕಾರ್ಯಕ್ರಮದಲ್ಲಿ 'ರಂಗಭೂಮಿಯಲ್ಲಿ ಕೃತಕ ಬುದ್ಧಿಮತ್ತೆ ಸಾಧ್ಯತೆಗಳು ಮತ್ತು ಸವಾಲುಗಳು' ವಿಷಯ ಕುರಿತು ವಿಚಾರ  ಮಂಡಿಸಿದರು.

ಮನುಷ್ಯ ಶ್ರಮಕ್ಕೆ ಕೊಕ್ಕೆ

ಕೃತಕ ಬುದ್ಧಿಮತ್ತೆ (ಎಐ) ಬಂದ ಬಳಿಕ ರಂಗಭೂಮಿಯೂ ಸವಾಲು ಎದುರಿಸಲಿದೆ. ನಿಸರ್ಗಕ್ಕೆ ಸವಾಲಾಗಿ ಕಲೆಗಳ ಮೂಲಕ ಮಾಡಿಕೊಳ್ಳುತ್ತಿದ್ದ ಸೃಷ್ಟಿಯನ್ನು ಎಐ ಮಾಡಿದರೆ ಅಚ್ಚರಿ ಆಗಬಹುದು. ಯಂತ್ರದ ಮನುಷ್ಯ ಬಂದು ನೈಜ ಮನುಷ್ಯ ಏನು ಮಾಡಬೇಕೋ ಅದನ್ನೆಲ್ಲ ಮೀರಿ ಕೆಲಸ ನಿರ್ವಹಿಸುವುದರಿಂದ 50 ವರ್ಷದ ಬಳಿಕ ರಂಗಭೂಮಿಯಲ್ಲಿ ಮನುಷ್ಯ ನಿರ್ಮಿತ ಕೆಲಸಗಳೆಲ್ಲವೂ ಮಂಗಮಾಯ ಆಗುವ ಆತಂಕ ಇದೆ. ಆದರೂ, ಎಐ ಸೇರಿದಂತೆ ವಿಶೇಷ ತಂತ್ರಜ್ಞಾನ ಅಳವಡಿಸಿಕೊಂಡಿರುವ ಸಿನಿಮಾದ ನಂತರವೂ ಸಹ ರಂಗಭೂಮಿ ಉಳಿದುಕೊಳ್ಳಲಿದೆ ಎಂಬುದು ಸೂರ್ಯ, ಚಂದ್ರರಷ್ಟೇ ಸತ್ಯ ಎಂದರು.
ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್​ ಕುಮಾರ್​ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ಉಪಸ್ಥಿತರಿದ್ದರು. ವಿಚಾರಗೋಷ್ಠಿಯ ಬಳಿಕ ನಾದ ಮಣಿನಾಲ್ಕೂರು ಅವರಿಂದ ರಂಗಗೀತೆ ಕಾರ್ಯಕ್ರಮ ನಡೆಯಿತು. ಸಂತೋಷ್​ ನಾಯಕ್​ ಪಟ್ಲ ಕಾರ್ಯಕ್ರಮ ನಿರೂಪಿಸಿದರು.

ಬಂಡವಾಳಶಾಹಿಗಳಿಗೆ ದೊಡ್ಡ ಸರಕು

ಬಂಡವಾಳಶಾಹಿಗಳು ಹೇಗೆ ತಮ್ಮ ಉತ್ಪನ್ನಗಳನ್ನು ಬಳಸದೇ ಇದ್ದಲ್ಲಿ ಮನುಷ್ಯನ ಜೀವನ ನಡೆಯದು ಎಂದು ಬಿಂಬಿಸಿದ್ದಾರೆ. ಅದೇ ರೀತಿ ಮುಂದಿನ ದಿನಗಳಲ್ಲಿ ಪ್ರತಿ ಕ್ಷೇತ್ರವನ್ನೂ ಎಐ ಆಕ್ರಮಿಸಿ, ಇದಿಲ್ಲದೆ ಮನುಷ್ಯನ ಜೀವನವೇ ಸಾಗದು ಎನ್ನುವುದನ್ನು ಸಾಬೀತು ಮಾಡುವ ಆತಂಕವೂ ಇದೆ. ಎಐನಿಂದ ಮನುಷ್ಯನ ಸ್ವಂತಿಕೆ, ಆಸ್ತಿತ್ವವೇ ನಾಶ ಆಗಬಹುದು. ಮನುಷ್ಯರ ಶ್ರಮ ನಿವಾರಿಸಲು ಯತ್ನಿಸುತ್ತಿರುವ ಬಂಡವಾಳಶಾಹಿಗಳಿಗೆ ಎಐ ದೊಡ್ಡ ಸರಕಾಗಬಹುದು. ಇದು ರಂಗಭೂಮಿ, ಸಾಹಿತ್ಯ ಕ್ಷೇತ್ರಕ್ಕೂ  ಹೊರತಾಗಿಲ್ಲ. ಈಗಾಗಲೇ ರಂಗಭೂಮಿಯಲ್ಲಿ ಪಾತ್ರಧಾರಿಯ ವಾಚಿಕ ಭಾಗ ನಶಿಸಿದೆ. ಮೊದಲೇ ಸಿದ್ಧಪಡಿಸಿದ ಧ್ವನಿಗೆ ಆ ಪಾತ್ರಧಾರಿ ಲಿಪ್​ಸಿಂಕ್​ ಮಾಡುವುದನ್ನು ಇತ್ತೀಚೆಗೆ ಕರಾವಳಿಯಲ್ಲಿ ಪ್ರದರ್ಶನಗೊಳ್ಳುತ್ತಿರುವ ಶಿವಾಜಿ ನಾಟಕದಲ್ಲಿ ಕಾಣಬಹುದಾಗಿದೆ ಎಂದು ಕೆ.ಫಣಿರಾಜ್​ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net