ಜನರ ಸಮಸ್ಯೆಗಳಿಗೆ ಕ್ಷಿಪ್ರ ಸ್ಪಂದನೆ

ಮೂಲ್ಕಿ ತಾಲೂಕು ಆಡಳಿತ ಪ್ರಜಾಸೌಧದಲ್ಲಿ ವಿವಿಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿದರು. ಮೂಲ್ಕಿ ತಹಸೀಲ್ದಾರ್ ಪೃಥ್ವೀ ಸಾನಿಕಂ, ಮೂಡುಬಿದಿರೆ ತಹಸೀಲ್ದಾರ್ ಶ್ರೀಧರ ಮುಂದಲಮನಿ ಮೊದಲಾದವರಿದ್ದರು.
ಮೂಲ್ಕಿ ತಾಲೂಕು ಆಡಳಿತ ಪ್ರಜಾಸೌಧದಲ್ಲಿ ವಿವಿಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿದರು. ಮೂಲ್ಕಿ ತಹಸೀಲ್ದಾರ್ ಪೃಥ್ವೀ ಸಾನಿಕಂ, ಮೂಡುಬಿದಿರೆ ತಹಸೀಲ್ದಾರ್ ಶ್ರೀಧರ ಮುಂದಲಮನಿ ಮೊದಲಾದವರಿದ್ದರು.
Published on
ಮೂಲ್ಕಿ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಇಲಾಖೆಯ ಹಾಗೂ ಪಂಚಾಯಿತಿ ಅಧಿಕಾರಿಗಳು ಮಳೆಗಾಲದಲ್ಲಿ ಜನರ ಸಮಸ್ಯೆಗಳಿಗೆ ಕ್ಷಿಪ್ರವಾಗಿ ಸ್ಪಂದಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಮೂಲ್ಕಿ ತಾಲೂಕು ಆಡಳಿತ ಪ್ರಜಾಸೌಧದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಮೂಲ್ಕಿ ನಗರ ಪಂಚಾಯಿತಿ, ಕಿನ್ನಿಗೋಳಿ ನಗರ ಪಂಚಾಯಿತಿ, ಮೂಡುಬಿದಿರೆ ಪುರಸಭೆ ಹಾಗೂ ವ್ಯಾಪ್ತಿಯ ವಿವಿಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಮಾತನಾಡಿದರು.
ಗ್ರಾಮದ ಸಮಸ್ಯೆಗಳನ್ನು ಆಯಾ ಗ್ರಾಮದ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಕರಣಿಕರು ಮೇಲಧಿಕಾರಿಗಳಿಗೆ ತಿಳಿಸಿ ಕಾರ್ಯ ನಿರ್ವಹಿಸಬೇಕು, ಕುಡಿಯುವ ನೀರಿನ ಸಮಸ್ಯೆ, ಶಾಲೆಯ ಬಳಿ ಅಪಾಯಕಾರಿ ಮರ ತೆರವು ಕಾರ್ಯ ತುರ್ತಾಗಿ ನಡೆಯಬೇಕು. ಮುಂದೆ ಸಮಸ್ಯೆ ಸಂಭವಿಸಿದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಭಾರಿ ಮಳೆ ಗಾಳಿಗೆ ಸಮುದ್ರ ಹಾಗೂ ನದಿ ತೀರದ ವಾಸಿಗಳಿಗೆ ಅಪಾಯಕಾರಿ ಪ್ರದೇಶದಲ್ಲಿ ಮನೆಗಳು ಇದ್ದರೆ ತುರ್ತಾಗಿ ನೆರೆಪೀಡಿತರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಕಾರ್ಯಪ್ರವೃತ್ತರಾಗಬೇಕು ಎಂದರು.
ಕಿಲ್ಪಾಡಿ ಗ್ರಾಪಂ ವ್ಯಾಪ್ತಿಯ ಕೆಂಚನಕೆರೆ ಅಂಗನವಾಡಿ ಸೋರಿಕೆ, ಪಂಚಾಯಿತಿ ಎದುರು ಭಾಗದಲ್ಲಿ ಅಪಾಯಕಾರಿ ಮರ ತೆರವು, ಕೆ ಎಸ್ ರಾವ್ ನಗರ ಶಿವಗಿರಿ ಎಸ್ಟೇಟ್ ರಸ್ತೆ ದುರಸ್ತಿ, ಅಮೃತ್ ಕುಡಿಯುವ ನೀರಿನ ಯೋಜನೆ ಕಾಮಗಾರಿಯಿಂದ ರಸ್ತೆ ಹೊಂಡ ಬಿದ್ದಿದೆ ಹಾಗೂ ಚರಂಡಿ ಹಾಳಾಗಿದೆ ಎಂದು ಪಂಚಾಯಿತಿ ಪಿಡಿಒ ಪೂರ್ಣಿಮಾ ಹೇಳಿದರು.

ಪಡುಪಣಂಬೂರು ಗ್ರಾಪಂ ವ್ಯಾಪ್ತಿಯಲ್ಲಿ ಕಂಬಳಬೆಟ್ಟು ಅಂಗನವಾಡಿ ಬಳಿ ಅಪಾಯಕಾರಿ ಮರ ತೆರವು, ಕಲ್ಲಾಪು-ಎಸ್ ಕೋಡಿ ರಸ್ತೆ ದುರಸ್ತಿ ಬಗ್ಗೆ ಪಂಚಾಯಿತಿ ಪಿಡಿಒ ಸುದೀರ್ ಹೇಳಿದರು.

ಮೂಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸಹಿತ ಸಿಬ್ಬಂದಿ ಕೊರತೆ ಬಗ್ಗೆ ಡಿಎಚ್‌ಒ ಎಚ್.ಆರ್.ತಿಮ್ಮಯ್ಯ ಪ್ರಸ್ತಾಪಿಸಿದರು.
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಫ್‌ಎಸ್ ಎಸ್‌ಟಿಪಿ ಕಾಮಗಾರಿಗಳನ್ನು ಬೇಗ ಪೂರ್ತಿರ್ಣಗೊಳಿಸಿ ಎಂದು ಶಾಸಕರು ಮುಖ್ಯಾಧಿಕಾರಿ ಜಯಶಂಕರ್‌ಗೆ ಸೂಚಿಸಿದರು.
ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅನೇಕ ದೂರುಗಳು ಬಂದಿದ್ದು ಬಗೆಹರಿಸಲು ಶಾಸಕರು ಮೂಡುಬಿದಿರೆ ಪುರಸಭಾ ಮುಖ್ಯಾಧಿಕಾರಿ ಇಂದು ಎಂ.ಗೆ ಹೇಳಿದರು.

ಮೂಲ್ಕಿ ತಹಸೀಲ್ದಾರ್ ಪೃಥ್ವೀ ಸಾನಿಕಂ, ಮೂಡುಬಿದಿರೆ ತಹಸೀಲ್ದಾರ್ ಶ್ರೀಧರ ಮುಂದಲಮನಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಗುರುದತ್, ಮಹೇಶ್ ಕುಮಾರ್ ಹೊಳ್ಳ, ಮೂಲ್ಕಿ ತಾಲೂಕು ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯರಿಗೆ ತೊಂದರೆ ಬೇಡ


ಬಪ್ಪನಾಡು ಸ್ವಾಗತ ಗೋಪುರ ಸ್ಥಳಾಂತರ ನಿಧಾನಗತಿಯ ಕಾಮಗಾರಿಯಿಂದ ಸ್ಥಳೀಯರಿಗೆ ತೊಂದರೆಯಾಗಿದೆ ಎಂಬ ದೂರುಗಳು ಬಂದಿವೆ. ಮೂಲ್ಕಿ ವಿಜಯಾ ಕಾಲೇಜು ಬಳಿಯ ಜೈನ ಬಸದಿ ಬಳಿ ಮಳೆಗೆ ಮಣ್ಣುಕುಸಿತವಾಗುವ ಎಚ್ಚರಿಕೆ ಬಂದಿದ್ದು, ಅಲ್ಲಿ ತಡೆಗೋಡೆ ನಿರ್ಮಾಣವಾಗಬೇಕು. ಪಂಚಮಹಲ್ ಸದಾಶಿವ ದೇವಸ್ಥಾನದ ಬಳಿ ರಾಜಕಾಲುವೆ ತಡೆಗೋಡೆ ಕುಸಿತ ನಡೆದ ಬಗ್ಗೆ ಮೂಲ್ಕಿ ನಗರ ಪಂಚಾಯಿತಿ ಮುಖ್ಯಾಧಿಕಾರಿ ಮಧುಕರ್ ಶಾಸಕರ ಗಮನಕ್ಕೆ ತಂದಾಗ ಶಾಸಕರು ಸ್ಥಳವನ್ನು ಪರಿಶೀಲಿಸಲು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೀವೇ ಹೊಣೆಗಾರರು

ಕ್ಷೇತ್ರ ವ್ಯಾಪ್ತಿಯಲ್ಲಿ ಅಮೃತ್ ಕುಡಿಯುವ ನೀರು. ಯೋಜನೆ ಕಾಮಗಾರಿಯಿಂದ ಆಗುತ್ತಿರುವ ತೊಂದರೆ ಗಮನಕ್ಕೆ ಬಂದಿದ್ದು, ಯಾವ ಅಧಿಕಾರಿಗಳು ಅಮೃತ್ ಯೋಜನೆ ಕಾಮಗಾರಿ ಸಂಪೂರ್ಣ ಪೂರ್ಣಗೊಳಿಸದೆ ನಿರಾಕ್ಷೇಪಣಾ ಪತ್ರ ನೀಡಬೇಡಿ, ನೀಡಿದರೆ ನೀವೇ ಹೊಣೆಗಾರರು. ಶಿಕ್ಷಣ ಇಲಾಖೆ ಅಧಿಕಾರಿಗಳು ತಾಲೂಕು ವ್ಯಾಪ್ತಿಯ ಪ್ರತಿ ಶಾಲೆಗೆ ತೆರಳಿ ಕುಡಿಯುವ ನೀರಿನ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಶಾಸಕರು ಹೇಳಿದರು.

ತುರ್ತು ಕಾಮಗಾರಿ ನಡೆಸಿ

ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಪುತ್ತಿಗೆ ಕಾಲುಸಂಕ ದುರಸ್ತಿ ಹೊಸ್ಮಾರು ಬಜಗೋಳಿ ಹೆದ್ದಾರಿ ಅಪಾಯಕಾರಿ ಮರ ತೆರವು, ಮೂಡುಬಿದಿರೆ- ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಚಿಲಿಂಬಿ ಬಳಿ ಸಮಸ್ಯೆ, ಬೆಳುವಾಯಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಕೊಳವೆ ಬಾವಿ ನಿರ್ಮಾಣಕ್ಕೆ ಬೇಡಿಕೆ, ಹೊಸಬೆಟ್ಟು ಗ್ರಾಮದ ದರೆಗುಡ್ಡೆ ಬಳಿ ಕಾಲುಸಂಕದ ದುರಸ್ತಿ, ಪುಚ್ಚಮೊಗರು ಓವರ್ ಹೆಡ್ ಟ್ಯಾಂಕ್ ದುರಸ್ತಿ ಮತ್ತಿತರ ಸಮಸ್ಯೆ ಬಗ್ಗೆ ತುರ್ತಾಗಿ ಕಾಮಗಾರಿ ನಡೆಸಲು ಸಭೆಯಲ್ಲಿ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net