ಡಿ. 29ರಿಂದ ರಂಗಭೂಮಿ ಮಕ್ಕಳ ನಾಟಕೋತ್ಸವ

ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಾ.ತಲ್ಲೂರು ಶಿವರಾಂ ಶೆಟ್ಟಿ ಮಾತನಾಡಿದರು. ಭಾಸ್ಕರ್​ ರಾವ್​ ಕಿದಿಯೂರು, ಪ್ರದೀಪ್​ ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು.
ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಾ.ತಲ್ಲೂರು ಶಿವರಾಂ ಶೆಟ್ಟಿ ಮಾತನಾಡಿದರು. ಭಾಸ್ಕರ್​ ರಾವ್​ ಕಿದಿಯೂರು, ಪ್ರದೀಪ್​ ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು.
Published on

* ಡಾ.ತಲ್ಲೂರು ಶಿವರಾಂ ಶೆಟ್ಟಿ ಮಾಹಿತಿ

* 11 ಶಾಲೆಗಳ ವಿದ್ಯಾರ್ಥಿಗಳಿಂದ ಪ್ರದರ್ಶನ 

ಉಡುಪಿ: ರಂಗಭೂಮಿ (ರಿ.) ಉಡುಪಿ ವತಿಯಿಂದ ಈ ವರ್ಷದ 'ರಂಗಭೂಮಿ ರಂಗ ಶಿಕ್ಷಣ' ಅಭಿಯಾನದಲ್ಲಿ ಉಡುಪಿ ನಗರದ ಆಯ್ದ 11 ಪ್ರೌಢಶಾಲೆಗಳ 250ಕ್ಕೂ ಅಧಿಕ ಮಕ್ಕಳ ಭಾಗವಹಿಸುವಿಕೆಯಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಡಿ.29, 30ರಂದು 'ಮಕ್ಕಳ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಂ ಶೆಟ್ಟಿ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶುಕ್ರವಾರ (ಡಿ.26) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಖ್ಯಾತ ನಿರ್ದೇಶಕರಿಂದ ಸಿದ್ಧಗೊಳಿಸಿದ 11 ಕಿರು ನಾಟಕಗಳ ಪ್ರದರ್ಶನ ಬೆಳಗ್ಗೆ 9:30ರಿಂದ ಸಂಜೆ 5:30ರ ವರೆಗೆ ನಡೆಯಲಿದೆ. ಡಿ.29ರಂದು ಬೆಳಗ್ಗೆ 9:30ಕ್ಕೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ನಾಟಕೋತ್ಸವ ಉದ್ಘಾಟಿಸಲಿದ್ದಾರೆ ಎಂದರು.
ಉದ್ಯಮಿಗಳಾದ ಭುವನೇಂದ್ರ ಕಿದಿಯೂರು, ಹರಿಪ್ರಸಾದ್​ ರೈ, ಎಂಜಿಎಂ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಎಂ.ವಿಶ್ವನಾಥ ಪೈ, ರಂಗಶಿಕ್ಷಣ ಸಂಚಾಲಕ ವಿದ್ಯಾವಂತ ಆಚಾರ್ಯ ಪಾಲ್ಗೊಳ್ಳಲಿದ್ದಾರೆ. ಡಿ.30ರಂದು ಮಧ್ಯಾಹ್ನ 12 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ.ತಲ್ಲೂರು ಶಿವರಾಂ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಅದಾನಿ ಗ್ರೂಪ್​ನ ಅಧ್ಯಕ್ಷ ಕಿಶೋರ್​ ಆಳ್ವ ಸಮಾರೋಪ ಭಾಷಣ ಮಾಡಲಿದ್ದಾರೆ. ಉದ್ಯಮಿಗಳಾದ ಜಮಾಲುದ್ದೀನ್​ ಅಬ್ಬಾಸ್​, ಅಲಯನ್ಸ್​ ಜಿಲ್ಲೆ 275ಎಸ್​ ಜಿಲ್ಲಾ ಗವರ್ನರ್​ ಅಲೈ ಸುನೀಲ್​ ಸಾಲ್ಯಾನ್​, ಉದ್ಯಮಿ ಪೆರ್ಣಂಕಿಲ ಶ್ರೀಶ ನಾಯಕ್​, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಉಪಸ್ಥಿತರಿರುವರು ಎಂದರು.

ಮಕ್ಕಳ ವ್ಯಕ್ತಿತ್ವ ವಿಕಸನ

ಪ್ರಧಾನ ಕಾರ್ಯದರ್ಶಿ ಪ್ರದೀಪ್​ ಚಂದ್ರ ಕುತ್ಪಾಡಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ, ಸ್ಮರಣ ಶಕ್ತಿ ಹೆಚ್ಚಳಕ್ಕೆ ರಂಗ ಶಿಕ್ಷಣ ನೀಡುತ್ತಿದ್ದೇವೆ. ಸಭಾಕಂಪ ನಿವಾರಣೆ, ಮುಖಕ್ಕೆ ಮುಖವಿಟ್ಟು ಮಾತನಾಡುವ ಕಲೆಯಿಂದ ಅವರ ಬದುಕಿನಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಕಳೆದ ವರ್ಷ 12 ಶಾಲೆಗಳ 350ಕ್ಕೂ ಹೆಚ್ಚು ಮಕ್ಕಳು ರಂಗ ಶಿಕ್ಷಣ ಪಡೆದಿದ್ದರು. ಪ್ರತಿ ಶಾಲೆಗಳಿಗೆ ಅಂದಾಜು 45 ಸಾವಿರ ರೂ. ವ್ಯಯವಾಗಲಿದ್ದು, ದಾನಿಗಳ ನೆರವಿನಲ್ಲಿ ರಂಗ ಶಿಕ್ಷಣ ಮುಂದುವರಿಸಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಭಾಸ್ಕರ್​ ರಾವ್​ ಕಿದಿಯೂರು ಉಪಸ್ಥಿತರಿದ್ದರು.  

ಡಿ.31ರಿಂದ ಅಂಬಲಪಾಡಿ ನಾಟಕೋತ್ಸವ 

ರಂಗಭೂಮಿ ವತಿಯಿಂದ ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ದಿ. ನಿ.ಬೀ.ಅಣ್ಣಾಜಿ ಬಲ್ಲಾಳ್​ ಸ್ಮರಣಾರ್ಥ ಡಿ.31, ಜ.1ರಂದು ಸಂಜೆ 6.30ಕ್ಕೆ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ 'ಅಂಬಲಪಾಡಿ ನಾಟಕೋತ್ಸವ' (ನೀನಾಸಂ ತಿರುಗಾಟ-2025ರ ನಾಟಕಗಳ ಪ್ರದರ್ಶನ) ನಡೆಯಲಿದೆ. ದೇವಳದ ಧರ್ಮದರ್ಶಿ ಡಾ. ಎನ್​.ಬಿ. ವಿಜಯ ಬಲ್ಲಾಳ್​ ಉದ್ಘಾಟಿಸಲಿದ್ದು, ಡಾ. ತಲ್ಲೂರು ಶಿವರಾಂ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಹಿರಿಯ ರಂಗಕರ್ಮಿ ಪ್ರೊ. ಆರ್​.ಎಲ್​. ಭಟ್​, ಸಾಫಲ್ಯ ಚಾರಿಟೇಬಲ್​ ಟ್ರಸ್ಟ್​ನ ಅಧ್ಯಕ್ಷೆ ರಂಜನಾ ಶ್ರೀಧರ್​ ಶೆಟ್ಟಿ, ಟ್ರಸ್ಟ್​ನ ಪ್ರವರ್ತಕಿ ನಿರುಪಮಾ ಪ್ರಸಾದ್​ ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ನೀನಾಸಂ ತಂಡದಿಂದ 'ಹೃದಯದ ತೀರ್ಪು' ಹಾಗೂ ಜ.1ರಂದು 'ಅವತರಣಂ ಭ್ರಾಂತಾಲಯಂ' ನಾಟಕ ಪ್ರದರ್ಶನಗೊಳ್ಳಲಿದೆ. ತುಳು ನಾಟಕಗಳ ರಚನೆಗಾಗಿ ಧರ್ಮಸ್ಥಳದ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕಕಾರ ರವಿಕುಮಾರ್​ ಕಡೆಕಾರ್​ ಅವರಿಗೆ ರಂಗಸನ್ಮಾನ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net