ಕುಂಬಳೆ ಪೇಟೆಯಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್

 ಕುಂಬಳೆ ಪೇಟೆಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಿರುವುದು.
ಕುಂಬಳೆ ಪೇಟೆಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಿರುವುದು.
Published on
ಪುರುಷೋತ್ತಮ ಕೆ. ಕುಂಬಳೆ
ದಿನೇದಿನೇ ಬೆಳೆಯುತ್ತಿರುವ ಕುಂಬಳೆ ಪೇಟೆಯಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಗ್ರಾಮ ಪಂಚಾಯಿತಿ ಅನೇಕ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದ್ದರೂ ಪಾಲಿಸಬೇಕಾದ ನಾಗರಿಕರು ನಿಯಮಗಳನ್ನು ಉಲ್ಲಂಘಿಸುತ್ತಿರುವುದರಿಂದ ಸಂಚಾರ ಸಮಸ್ಯೆ ಮತ್ತಷ್ಟು ಹದಗೆಡುತ್ತಿದೆ. ಇದರಿಂದ ಪಾದಚಾರಿಗಳು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಪಾರ್ಕಿಂಗ್ ಇಲ್ಲದ ವಲಯಗಳಲ್ಲಿಯೂ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆ ಮಾಡುವುದರಿಂದ ಬಸ್ ಸೇರಿದಂತೆ ಭಾರಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಕೆಎಸ್‌ಟಿಪಿ ರಸ್ತೆಯ ಕೊಟ್ಟೂಡಲ್ ಚೌಕದ ಬಳಿ ಅಕ್ರಮ ಪಾರ್ಕಿಂಗ್‌ನಿಂದಾಗಿ ಬಸ್‌ಗಳು ಹೊಸ ಬಸ್ ನಿಲ್ದಾಣಗಳಿಗೆ ತಿರುಗಲು ಸಾಧ್ಯವಾಗುತ್ತಿಲ್ಲ. ನೋ ಪಾರ್ಕಿಂಗ್ ಬೋರ್ಡ್ ಇದ್ದರೂ ಅಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ರಸ್ತೆ ಬದಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ಪೇಟೆಗೆ ಬರುವ ಜನರಿಗೆ ನಡೆದಾಡಲು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಅನೇಕ ಬಾರಿ ದೂರು ನೀಡಿದರೂ ಸಂಚಾರಿ ಪೊಲೀಸರಾಗಲಿ, ಗ್ರಾಮ ಪಂಚಾಯಿತಿ ಆಡಳಿತವಾಗಲಿ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ. ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದೇ ಈ ಅವ್ಯವಸ್ಥೆಗೆ ಪ್ರಮುಖ ಕಾರಣವಾಗಿದೆ.
ಸಾರಿಗೆ ಸುಧಾರಣೆ ಕೇವಲ ಕಾಗದಕ್ಕೆ ಸೀಮಿತವಾಗಬಾರದು ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೇಟೆಯಲ್ಲಿ ಸಂಚಾರಿ ಪೊಲೀಸರು ಕರ್ತವ್ಯದಲ್ಲಿದ್ದು ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹೊಸ ನಿಲ್ದಾಣಕ್ಕೆ ಹೋಗದ ಬಸ್‌ಗಳು

ಪೇರಾಲ್, ಕಣ್ಣೂರು, ಸೀತಾಂಗೋಳಿ, ಪೆರ್ಲ, ಸುಳ್ಯ, ಬದಿಯಡ್ಕ ಮತ್ತು ಮುಳ್ಳೇರಿಯ ಭಾಗಗಳಿಗೆ ಹೋಗುವ ಬಸ್‌ಗಳು ಪ್ರಯಾಣಿಕರ ಅನುಕೂಲಕ್ಕಾಗಿ ಕುಂಬಳೆ ಹಳೇ ಬಸ್ ನಿಲ್ದಾಣದ ಬಳಿಯೇ ನಿಲ್ಲುತ್ತಿವೆ. ಹೊಸ ಬಸ್ ನಿಲ್ದಾಣವಿದ್ದರೂ ಇಲ್ಲಿಗೆ ಹೋಗುತ್ತಿಲ್ಲ. ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸುವ ಹಿಂದಿನ ಪಂಚಾಯಿತಿ ಆಡಳಿತ ಸಮಿತಿ ನಿರ್ಧಾರ ಇನ್ನೂ ಜಾರಿಗೆಗೆ ಬಂದಿಲ್ಲ. ಇದರಿಂದಲೂ ಪೇಟೆಯಲ್ಲಿ ದಟ್ಟಣೆ ಹೆಚ್ಚಾಗುತ್ತಿದೆ.

ಕುಂಬಳೆ ಪೇಟೆಯಲ್ಲಿ ಸಂಚಾರ ದಟ್ಟಣೆ ಮತ್ತು ಅವ್ಯವಸ್ಥಿತ ಪಾರ್ಕಿಂಗ್ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಮಾಲೋಚಿಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು. ವಾಹನ ಸವಾರರು, ಪ್ರಯಾಣಿಕರು ಸಹಕರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net