ಉಕ್ಕೇರಿದ ನೇತ್ರಾವತಿ, ಮೃತ್ಯುಂಜಯ ನದಿ, ಕೃಷಿಭೂಮಿ ಜಲಾವೃತ

 ಧರ್ಮಸ್ಥಳ ನೇತ್ರಾವತಿ ಮಧ್ಯೆ ಮನ್ನ ಸಂಕ ಎಂಬಲ್ಲಿ ರಾಜ್ಯ ಹೆದ್ದಾರಿಯಲ್ಲಿ ನೀರು ಹರಿದು ವಾಹನಗಳು ಸಿಲುಕಿಕೊಂಡಿರುವುದು.
ಧರ್ಮಸ್ಥಳ ನೇತ್ರಾವತಿ ಮಧ್ಯೆ ಮನ್ನ ಸಂಕ ಎಂಬಲ್ಲಿ ರಾಜ್ಯ ಹೆದ್ದಾರಿಯಲ್ಲಿ ನೀರು ಹರಿದು ವಾಹನಗಳು ಸಿಲುಕಿಕೊಂಡಿರುವುದು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ತಾಲೂಕಿನಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತ, ಮನೆ, ಅಂಗಡಿಗಳಿಗೆ ನುಗ್ಗಿದ ನೀರು, ರಾಷ್ಟ್ರೀಯ ಹೆದ್ದಾರಿ ಸೇರಿ ಅಲ್ಲಲ್ಲಿ ವಾಹನ ಸಂಚಾರ ವ್ಯತ್ಯಯ, ಹಲವೆಡೆ ತೋಟಗಳು ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳು ತುಂಬಿ ಹರಿದು ಮುಂಡಾಜೆ, ಕಾಯರ್ತೋಡಿ, ಕಡಂಬಳ್ಳಿ, ಆನಂಗಳ್ಳಿ, ಮುಂಡ್ರುಪಾಡಿ, ಅರೆಕಲ್ಲು, ಕುಡೆಂಚಿ, ಮೊಗ್ರು, ಮುಗೇರಡ್ಕ, ದಂಬೆತ್ತಿಮಾರು, ಬರೆಮೇಲು ಮೊದಲಾದ ಕಡೆ ನೂರಾರು ಕೃಷಿ ತೋಟಗಳು ಜಲಾವೃತಗೊಂಡವು.

ರಸ್ತೆಗೆ ನೀರು ನುಗ್ಗಿ ಸಂಚಾರ ವ್ಯತ್ಯಯ

ಕಿಲ್ಲೂರು-ಲಾಯಿಲ ರಸ್ತೆಗೆ ಸೋಮಾವತಿ ನದಿ ನೀರು ಪುತ್ರಬೈಲು ಸಮೀಪ ರಸ್ತೆಗೆ ನುಗ್ಗಿ ಸಂಚಾರ ಸ್ಥಗಿತಗೊಂಡಿತು. ಕುತ್ರೊಟ್ಟು-ಚಂದ್ಕೂರು ಸೇತುವೆ ಜಲಾವೃತಗೊಂಡು ವಾಹನ ಸಂಚಾರ ನಿಲ್ಲಿಸಲಾಯಿತು. ಉಜಿರೆ-ಗುರಿಪಳ್ಳ ರಸ್ತೆಯ ಅಂಬಡಬೆಟ್ಟು ನೂತನ ಸೇತುವೆ ಮುಳುಗುವ ಭೀತಿಯಿಂದಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಯಿತು. ಧರ್ಮಸ್ಥಳ-ಉಜಿರೆ ರಸ್ತೆಯ ಮಣ್ಣಸಂಕ ಎಂಬಲ್ಲಿ ರಸ್ತೆಯಲ್ಲಿ ಐದು ಅಡಿಯಷ್ಟು ನೀರು ಹರಿದು ಸುಮಾರು ಒಂದು ತಾಸು ಕಾಲ ಸಂಚಾರ ವ್ಯತ್ಯಯವಾಯಿತು. ಬೆಳ್ತಂಗಡಿ ರಸ್ತೆಯ ಕೆಳಗಿನ ಪೆಟ್ರೋಲ್ ಬಂಕ್ ಬಳಿ ಚರಂಡಿ ನೀರು ರಸ್ತೆಗೆ ನುಗ್ಗಿ ಸಂಚಾರಕ್ಕೆ ತೊಂದರೆಯಾಯಿತು.
ನೆರಿಯ ಗ್ರಾಮದ ಗಂಡಿಬಾಗಿಲಿನ ಸಿಯೋನ್ ಆಶ್ರಮದ ತಡೆಗೋಡೆ ಕುಸಿದು ಬಿದ್ದು ಲಕ್ಷಾಂತರ ರೂ. ಹಾನಿಯಾಗಿದೆ. ಧರ್ಮಸ್ಥಳ-ಕಲ್ಮಂಜ ರಸ್ತೆ ಸಮೀಪ ಧರೆ ಕುಸಿದು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಗುಡ್ಡ ಭಾಗದಿಂದ ನೀರು ಹರಿದು ಬರುತ್ತಿದ್ದು ಇನ್ನಷ್ಟು ಕುಸಿಯವ ಸಾಧ್ಯತೆ ಇದೆ.

ಆವರಣ ಗೋಡೆ ಕುಸಿದು ಮಹಿಳೆಗೆ ಗಾಯ

ಲಾಯಿಲ ಗ್ರಾಮದ ಆದರ್ಶ ನಗರದಲ್ಲಿ ರತ್ನಾಕರ ಆಚಾರ್ಯ ಎಂಬುವರ ನಿರ್ಮಾಣ ಹಂತದ ಮನೆಯ ಆವರಣ ಗೋಡೆ ಕುಸಿದು ಕೆಳಭಾಗದಲ್ಲಿರುವ ಉಮೇಶ್ ಆಚಾರ್ಯ ಎಂಬುವರ ಮನೆಗೆ ಹಾನಿಯಾಗಿ, ಮನೆಯೊಳಗೆ ಇದ್ದ ಮಹಿಳೆಗೆ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಮಿತ್ತಬಾಗಿಲು ಗ್ರಾಮದ ಕೊಪ್ಪದ ಗಂಡಿ, ಚಾರ್ಮಾಡಿ ಗ್ರಾಮದ ಅರಣಪಾದೆ ಕಿರುಸೇತುವೆಗಳು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.

ಚಿಬಿದ್ರೆ ಗ್ರಾಮದ ಪೆರಿಯಡ್ಕ ಕುಡುಮಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಅಂಗಳಕ್ಕೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಮುಂಡಾಜೆಯ ಅಣ್ಣು ಕಜೆ, ಮಹೇಂದ್ರ ಪರಾಂಜಪೆ ಎಂಬವರ ಮನೆಯ ಹಿಂಭಾಗದ ಗುಡ್ಡ ಕುಸಿತ ಉಂಟಾಗಿದೆ. ಮುಂಡಾಜೆಯ ಸೋಮಂತಡ್ಕದ ಖಾಸಗಿ ಮೊಬೈಲ್ ಟವರ್‌ನ ವಿದ್ಯುತ್ ಪರಿವರ್ತಕದ ಸಮೀಪ ಗುಡ್ಡ ಕುಸಿತ ಉಂಟಾಗಿ ಅಪಾಯದ ಸ್ಥಿತಿ ಇದೆ. ಧರ್ಮಸ್ಥಳದ ಪೊಸಳಿಗೆಯಲ್ಲಿ ಕೃಷ್ಣಪ್ಪ ಎಂಬವರ ಮನೆಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ಮನೆ ಅಂಗಳಕ್ಕೆ ನುಗ್ಗಿದ ನೀರು

ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಮುಂಡಾಜೆ ಸೋಮಂತಡ್ಕ, ಬಲ್ಯಾರ್ ಕಾಪು, ಅಗರಿ ಮೊದಲಾದ ರಸ್ತೆಗಳಲ್ಲಿ ನೀರು ತುಂಬಿ ಹರಿದು ಕೆಲವು ಮನೆಗಳ ನೀರು ನುಗ್ಗಿದೆ ಇನ್ನು ಕೆಲವು ಮನೆಗಳ ಅಂಗಳಗಳು ಜಲಾವೃತಗೊಂಡವು. ಗಣೇಶ ಶೆಟ್ಟಿ, ರವಿಚಂದ್ರ, ಸೇಸಪ್ಪ ಎಂಬವರ ಮನೆಗಳ ಒಳಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net