ಕೃಷಿಕರಿಗೆ 'ಜಲ' ಜೀವನ ಕಂಟಕ!

ಹೊಸಂಗಡಿ ಗ್ರಾಮದ ಬದ್ರಾಪುರದಲ್ಲಿ ಜಲಜೀವನ ಮಿಷನ್​ ಯೋಜನೆಯ ಕಾಮಗಾರಿಯಿಂದಾಗಿ ಮಳೆನೀರು ಹರಿದು ಕೃಷಿಕ ಮಾಧವ ಭಂಡಾರಿ ಅವರ ಅಡಿಕೆ ತೋಟ ಜಲಾವೃತ ಆಗಿರುವುದು.
ಹೊಸಂಗಡಿ ಗ್ರಾಮದ ಬದ್ರಾಪುರದಲ್ಲಿ ಜಲಜೀವನ ಮಿಷನ್​ ಯೋಜನೆಯ ಕಾಮಗಾರಿಯಿಂದಾಗಿ ಮಳೆನೀರು ಹರಿದು ಕೃಷಿಕ ಮಾಧವ ಭಂಡಾರಿ ಅವರ ಅಡಿಕೆ ತೋಟ ಜಲಾವೃತ ಆಗಿರುವುದು.
Published on

* ಕಾಡಿದ ಕುಡಿಯುವ ನೀರಿನ ಯೋಜನೆ

* ಬೆಳೆಗಾರರಿಗೆ ಮುಂಗಾರು ಮಳೆ ಯಾತನೆ

ಪ್ರಶಾಂತ ಭಾಗ್ವತ ಉಡುಪಿ
ಜಲಜೀವನ ಮಿಷನ್​ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಸ್ಥಳೀಯ ಕೃಷಿಕರು ಸಂಕಷ್ಟ ಅನುಭವಿಸುವಂತಾಗಿದೆ. ಚರಂಡಿ ಮುಚ್ಚಿಹೋಗಿದ್ದರಿಂದ ಮಳೆ ನೀರು ರಸ್ತೆಯಲ್ಲೇ ಹರಿದು ಅಡಿಕೆ ತೋಟಗಳು ಜಲಾವೃತಗೊಳ್ಳುತ್ತಿದ್ದು, ಬೆಳೆಗಾರರು ನಷ್ಟದ ಭೀತಿಯಲ್ಲಿದ್ದಾರೆ.
ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬದ್ರಾಪುರದಲ್ಲಿ ಹೊಳೆ ಶಂಕರನಾರಾಯಣ ರಸ್ತೆ (ಜಿಪಂ ರಸ್ತೆ)ಯ ಎರಡೂ ಬದಿಯಲ್ಲಿ ಜಲಜೀವನ ಮಿಷನ್​ ಯೋಜನೆಯ ಪೈಪ್​ಲೈನ್​ ಹಾಗೂ ಇಲೆಕ್ಟ್ರಿಕ್​ ಲೈನ್​ ಕಾಮಗಾರಿ ನಡೆಯುತ್ತಿದೆ. ಇದರಿಂದ ಚರಂಡಿ ಮುಚ್ಚಿಹೋಗಿದ್ದು ಮಳೆ ನೀರು ರಸ್ತೆಯಲ್ಲೇ ಹರಿದು ಸಮೀಪದ ಕೃಷಿ ಭೂಮಿಯಲ್ಲಿ ಕೃತಕ ನೆರೆ ಸೃಷ್ಟಿಸುತ್ತಿದೆ.
ಬೆಳೆ ಹಾನಿ ಭೀತಿ
ಯೋಜನೆಯ ಪೈಪ್​ಲೈನ್​ಗಾಗಿ ಹೊಂಡ ತೋಡಿದ್ದರಿಂದ ಚರಂಡಿಯಲ್ಲಿ ಮಣ್ಣು ಬಿದ್ದು ಮಳೆ ನೀರು ಹರಿಯಲು ತೊಡಕಾಗಿದೆ. ಇದೀಗ ಮಳೆ ಆರಂಭಗೊಂಡಿದ್ದು, ಕೆಪಿಸಿ ಕಾಲನಿ ಭಾಗದಲ್ಲಿನ ಮಳೆ ನೀರೂ ಸಹ ಇಲ್ಲಿಗೇ ಹರಿದು ಬರುತ್ತಿದೆ. ಅದು ರಸ್ತೆಯ ಮೂಲಕ ಸಮೀಪದ ಕೃಷಿ ಭೂಮಿಗೆ ನುಗ್ಗುತ್ತಿದೆ. ಮಳೆ ಬಂದಾಗಲೆಲ್ಲ ಸ್ಥಳೀಯ ಕೃಷಿಕ ಮಾಧವ ಭಂಡಾರಿ ಅವರ ಅಡಿಕೆ ತೋಟ ಜಲಾವೃತಗೊಳ್ಳುತ್ತಿದೆ. ಮಳೆ ನಿರಂತರವಾಗಿದ್ದರೆ ಇವರ ತೋಟದ ನಂತರ ಇರುವ ಇನ್ನಿತರ ಕೃಷಿಕರ ತೋಟಗಳೂ ಜಲಾವೃತಗೊಳ್ಳುತ್ತಿದೆ. ಕೃತಕ ನೆರೆಯಿಂದ ಬೆಳೆ ನಷ್ಟದ ಭೀತಿ ಸಂತ್ರಸ್ತರನ್ನು ಕಾಡುತ್ತಿದೆ.
ಚರಂಡಿಗೆ ಅಳವಡಿಸಲು ತಂದಿರುವ ಸಿಮೆಂಟ್​ ಪೈಪ್​ಗಳು.
ಸ್ಥಳೀಯರ ವಿರೋಧ
ಸುಪ್ರದಾ ಕನ್​ಸ್ಟ್ರಕ್ಷನ್​ನವರು ಗ್ರಾಮದಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಇದೀಗ ಆಗಿರುವ ಸಮಸ್ಯೆ ಅರಿತ ಕಂಪನಿಯ ಸಿಬ್ಬಂದಿ, ಕೃಷಿಕರೇ ಸಿಮೆಂಟ್​ ಪೈಪ್​ ತಂದುಕೊಟ್ಟರೆ ಅದನ್ನು ಚರಂಡಿಗೆ ಅಳವಡಿಸಿ ಮಳೆ ನೀರು ಹರಿದುಹೋಗಲು ಅನುಕೂಲ ಮಾಡಿಕೊಡುವುದಾಗಿ ತಿಳಿಸಿದ್ದರು. ಅದರಂತೆ ಪೈಪ್​ ಖರೀದಿಸಿ ತರಲಾಗಿದೆ. ಆದರೆ, ಸ್ಥಳೀಯ ಕೆಲವರು ಚರಂಡಿಗೆ ಸಿಮೆಂಟ್​ ಪೈಪ್​ ಅಳವಡಿಸಲು ವಿರೋಧಿಸುತ್ತಿದ್ದಾರೆ. ಹೀಗಾಗಿ ಮಳೆ ಬಂದಾಗ ರಸ್ತೆಯ ಮೇಲೆಯೇ ನೀರು ಹರಿದು ನಮ್ಮ ಅಡಿಕೆ ತೋಟ ಜಲಾವೃತ ಆಗುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಕೃಷಿಕ ಮಾಧವ ಭಂಡಾರಿ.
"

ಬದ್ರಾಪುರ-ಹೊಳೆ ಶಂಕರನಾರಾಯಣ ರಸ್ತೆ ಮಾರ್ಗದಲ್ಲಿ ಚರಂಡಿ ಮುಚ್ಚಿಹೋಗಿದ್ದರಿಂದ ಕೃತಕ ನೆರೆ ಉಂಟಾಗುತ್ತಿದೆ. ಕೃಷಿಕರಿಗೆ ತೊಂದರೆ ಆಗುತ್ತಿರುವ ಕುರಿತು ಗ್ರಾಪಂ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂಗಾರು ಮಳೆ ಆರಂಭಗೊಂಡಿದ್ದು ಸಮರ್ಪಕ ಚರಂಡಿ ವ್ಯವಸ್ಥೆ ಮಾಡದಿದ್ದಲ್ಲಿ ಕೃಷಿಕರ ತೋಟಗಳಿಗೆ ನೀರು ಹರಿದು ತೇವಾಂಶ ಹೆಚ್ಚಳದಿಂದ ಬೆಳೆ ನಾಶವಾಗಲಿದೆ. ಕೂಡಲೇ ಸಂಬಂಧಿತ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.

— ಆನಂದ್​ ಕಾರೂರು. ಸಾಮಾಜಿಕ ಹೋರಾಟಗಾರ, ಹೊಸಂಗಡಿ.
"

ಜಲಜೀವನ ಮಿಷನ್​ ಯೋಜನೆಯ ಕಾಮಗಾರಿಯಿಂದಾಗಿ ವಾರದಿಂದ ಸಮಸ್ಯೆ ಅನುಭವಿಸುತ್ತಿದ್ದೇನೆ. ಮಳೆ ಜೋರಾಗಿ ಸುರಿದರೆ ನೀರು ಚರಂಡಿಯಲ್ಲಿ ಹರಿದು ಮುಂದೆ ಸಾಗದೆ ರಸ್ತೆಯಲ್ಲಿ ಹರಿದು ನಮ್ಮ ಅಡಿಕೆ ತೋಟಕ್ಕೆ ನುಗ್ಗುತ್ತಿದೆ. ಚರಂಡಿಗೆ ನಾನೇ ಪೈಪ್​ ಅಳವಡಿಸಲೂ ತೊಡಕುಂಟಾಗಿದೆ. ಗ್ರಾಪಂ ಪಿಡಿಒ ಅವರು ಭಾನುವಾರ (ಜೂ.7) ಸ್ಥಳಕ್ಕೆ ಬಂದು ಪರಿಶೀಲಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಅವರು ಬರುವ ನಿರೀಕ್ಷೆಯಲ್ಲಿ ಇದ್ದೇನೆ.

— ಮಾಧವ ಭಂಡಾರಿ. ಹೊಸಂಗಡಿಯ ಕೃಷಿಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net