ವಿಜಯವಾಣಿ ಸುದ್ದಿಜಾಲ ಕುಂದಾಪುರ
ಬಹುದಿನದ ಬಳಿಕ ಸೋಮವಾರದಿಂದ ಸುರಿಯುತ್ತಿರುವ ಮಳೆ ಮುಂಗಾರಿನ ಸೊಬಗು ನೆನಪಿಸಿದೆ. ಜೂನ್ ತಿಂಗಳಿಡೀ ಮಳೆ ಕೊರತೆಯಿಂದ ಕಂಗೆಟ್ಟಿದ್ದ ರೈತಾಪಿ ವರ್ಗ ಜೂನ್ ಅಂತ್ಯದ ವೇಳೆ ಎಡೆಬಿಡದೆ ಸುರಿದ ಮಳೆಯಿಂದಾಗಿ ಕೊಂಚ ನೆಮ್ಮದಿಗೆ ಕಂಡಿದ್ದಾರೆ. ಕೃಷಿ ಗದ್ದೆಗಳು ನೀರಿಲ್ಲದೆ ನಾಟಿಗೆ ಸಿದ್ಧಗೊಳ್ಳದೆ ಇರುವುದು, ಸೊರಗಿದ ತೋಟಗಾರಿಕೆ ಬೆಳೆಗಳಿಗೆ ಆಧಾರ ನೀಡಿದೆ.
ಒಂದು ತಿಂಗಳಿನಿಂದ ಮಳೆಗಾಗಿ ಕಾಯುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಹಲವು ರೈತರು ನೇಜಿ ತಯಾರಿಸಿ ಇಟ್ಟುಕೊಂಡಿದ್ದರೆ, ಇನ್ನೂ ಅನೇಕ ಕಡೆಗಳಲ್ಲಿ ಬೀಜ ಬಿತ್ತನೆ ವಾಡಿದ್ದಾರೆ. ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗೆ ಪೂರಕ ವಾತಾವರಣ ಕಂಡು ಬಂದಿದೆ. ಇದರಿಂದಾಗಿ ರೈತರು ಹೊಲಗದ್ದೆಗಳಿಗೆ ಇಳಿದು ಕೃಷಿ ಚಟುವಟಿಯಲ್ಲಿ ಬ್ಯುಸಿಯಾಗಿದ್ದಾರೆ. ಹೊಲಗದ್ದೆಗಳಲ್ಲಿ ಸಾಕಷ್ಟು ಪ್ರವಾಣದಲ್ಲಿ ನೀರು ನಿಂತಿದ್ದು, ರೈತರು ನಾಟಿ ಕಾರ್ಯ ಪ್ರಾರಂಭಿಸಿದ್ದಾರೆ.
ನಾಟಿ ಕಾರ್ಯ ವಾಡಲು ಕೂಲಿ ಕಾರ್ಮಿಕರ ಅಭಾವ ಇರುವುದರಿಂದ ಯಂತ್ರನಾಟಿಯನ್ನು ಬಹುತೇಕ ಕೃಷಿಕರು ನೆಚ್ಚಿಕೊಂಡಿದ್ದಾರೆ. ಹೀಗಾಗಿ ನಾಟಿಯಂತ್ರಕ್ಕೆ ಬೇಡಿಕೆ ಹೆಚ್ಚಾಗಿದ್ದು, ಎಲ್ಲೆಡೆ ನಾಟಿ ಕಾರ್ಯ ಚುರುಕು ಪಡೆದಿದೆ.
ಬಹುದಿನದ ಬಳಿಕ ಕಳೆದ 2 ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇದು ಮುಂದುವರಿಯಲಿ ಎಂಬ ಹಾರೈಕೆ ನಮ್ಮದು. ಮಳೆ ಅಬ್ಬರಿಸುವ ಅವಧಿಯಲ್ಲೇ ಕೊರತೆ ಕಾಣಿಸಿದ್ದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ದಿನಕ್ಕೆ ಒಂದು ಎರಡು ಮಳೆಯಾದಲ್ಲಿ ಕೃಷಿಗೆ ವೇಗ ನೀಡಬಹುದು.
— ವಿಜಯ ಪೂಜಾರಿ ಗಂಗೊಳ್ಳಿ ಪ್ರಗತಿಪರ ರೈತ