

ಉಡುಪಿ: ಬೆಂಗಳೂರಿನಿಂದ ಮಡಗಾಂವ್ಗೆ ಮಂಗಳೂರು-ಉಡುಪಿ ಮಾರ್ಗವಾಗಿ ಸಂಚರಿಸುವ ವಂದೇ ಭಾರತ್ ರೈಲು ಸೌಲಭ್ಯ ಮಂಜೂರಾತಿ ಮಾಡಿಸುವಲ್ಲಿ ಯಶಸ್ವಿಯಾದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಉಡುಪಿ ರೈಲು ನಿಲ್ದಾಣದಲ್ಲಿ ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಧೀರಜ್ ಶಾಂತಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಮಡಗಾಂವ್ನಿಂದ ಪ್ರಥಮ ಬಾರಿಗೆ ವಂದೇ ಭಾರತ್ ರೈಲು ನ. 15ರಿಂದ ಬೆಂಗಳೂರಿಗೆ ಸಂಚಾರ ಪ್ರಾರಂಭಿಸಿದೆ. ಉಡುಪಿ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 12 ಗಂಟೆಗೆ ಆಗಮಿಸಿದ ರೈಲನ್ನು ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಹಾಗೂ ಸದಸ್ಯರು ಸ್ವಾಗತಿಸಿ ಹೂಮಾಲೆ ಹಾಕಿ, ಚಾಲಕರಿಗೆ ಹೂಗುಚ್ಚ ಕೊಟ್ಟು ಅಭಿನಂದಿಸಿದರು. ನಿಲ್ದಾಣದಲ್ಲಿ ಉಪಸ್ಥಿತರಿದ್ದ ಪ್ರಯಾಣಿಕರಿಗೆ ಸಿಹಿ ಹಂಚಿ ಶುಭ ಪ್ರಯಾಣಕ್ಕೆ ಹಾರೈಸಿದರು.
ಕುಂದಾಪುರದಿಂದ ಅದೇ ರೈಲಿನಲ್ಲಿ ಪ್ರಯಾಣಿಸಿ ಬಂದು ಉಡುಪಿಯಲ್ಲಿ ಇಳಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಸಂಘದ ಎಲ್ಲ ಮನವಿಗೆ ಸ್ಪಂದಿಸಿ ಸಹಕರಿಸುತ್ತಿರುವ ಸಂಸದ ಕೋಟ ಅವರನ್ನು ಸನ್ಮಾನಿಸಿ ಗೌರವಿಸಿದರು.
ಉಡುಪಿ ನಗರಸಭಾ ಮಾಜಿ ಸದಸ್ಯ, ಸಂಘದ ಉಪಾಧ್ಯಕ್ಷ ಮಧುಸೂದನ ಹೇರೂರು, ಕಾರ್ಯದರ್ಶಿ ಮಂಜುನಾಥ ಮಣಿಪಾಲ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ಲಾಸಿ ಡಿಸೋಜ, ಶ್ರೀನಿವಾಸ ಶೆಟ್ಟಿ ತೋನ್ಸೆ ಹಾಗೂ ಸದಸ್ಯರು ಉಪಸ್ಥಿತರಿದ್ದರು.