ಉಡುಪಿಯಲ್ಲಿ ರಾಘವೇಂದ್ರ ರಾಯರ ಆರಾಧನೆ

ರಾಘವೇಂದ್ರ ಸ್ವಾಮಿಗಳ ಆರಾಧನೆಯ ನಿಮಿತ್ತ ಉಡುಪಿ ರಥಬೀದಿಯಲ್ಲಿರುವ ನಂಜನಗೂಡು ಮಂತ್ರಾಲಯದ ಶಾಖಾ ಮಠವನ್ನು ಪುಷ್ಪಗಳಿಂದ ಅಲಂಕರಿಸಿರುವುದು.
ರಾಘವೇಂದ್ರ ಸ್ವಾಮಿಗಳ ಆರಾಧನೆಯ ನಿಮಿತ್ತ ಉಡುಪಿ ರಥಬೀದಿಯಲ್ಲಿರುವ ನಂಜನಗೂಡು ಮಂತ್ರಾಲಯದ ಶಾಖಾ ಮಠವನ್ನು ಪುಷ್ಪಗಳಿಂದ ಅಲಂಕರಿಸಿರುವುದು.
Published on

* ರಥಬೀದಿಯ ನಂಜನಗೂಡು ಮಠದಲ್ಲಿ ಮಹಾಪೂಜೆ

* ಗುರಸಾರ್ವಭೌಮರ 355ನೇ ಮಹೋತ್ಸವ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಸಮೀಪದ ರಥಬೀದಿಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರ ಗುರು ಸಾರ್ವಭೌಮರ 355ನೇ ಆರಾಧನಾ ಮಹೋತ್ಸವ  ಶನಿವಾರ (ಆ.29) ದಿಂದ ಆರಂಭಗೊಂಡಿದೆ. ಮೂರು ದಿನಗಳ ಕಾಲ (ಆ.31ರ ವರೆಗೆ) ಉತ್ಸವ ನಡೆಯಲಿದ್ದು, ರಾಯರ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಆರಾಧನಾ ಮಹೋತ್ಸವದ ಪ್ರಥಮ ದಿನವಾದ ಶನಿವಾರ ಬೆಳಗ್ಗೆ ರಾಯರ ಮೂರ್ತಿಗೆ ಪಂಚಾಮೃತ ಅಭಿಷೇಕ, ಮಹಾಪೂಜೆ ನೆರವೇರಿತು. ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ರಾಘವೇಂದ್ರ ಸ್ವಾಮಿಗಳ ಆರಾಧನೆಯ ನಿಮಿತ್ತ ಗುರುರಾಯರ ವೃಂದಾನಕ್ಕೆ ವಿಶೇಷ ಪೂಜೆ ನಡೆಯಿತು.

ಆ. 30ರಂದು ವಿವಿಧ ಪೂಜೆ ನಡೆಯಲಿದ್ದು, ಮಧ್ಯಾಹ್ನ ಅನ್ನ ಸಂತರ್ಪಣೆ ಇರಲಿದೆ. ಸಂಜೆ ರಥಬೀದಿಯಲ್ಲಿ ಪ್ರಲ್ಹಾದ ರಾಜರ ರಥೋತ್ಸವ ನಡೆಯಲಿದೆ. ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು, ಶ್ರೀಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರ ಸಹಿತ ಅಷ್ಟಮಠಗಳ ಯತಿಗಳು ರಾಯರ ಪೂಜೆ, ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹೂಗಳಲ್ಲಿ ಕಂಗೊಳಿಸುತ್ತಿದೆ ವೃಂದಾವನ

ಮಠದ ಒಳಗೆ ವಿವಿಧ ಹಣ್ಣು-ತರಕಾರಿ, ಹೂಗಳಿಂದ ಅಲಂಕಾರ ಮಾಡಿರುವುದು.

ಗುರು ರಾಯರ ಆರಾಧನೆಯ ನಿಮಿತ್ತ ಮಠವನ್ನು ಹೂ-ಹಣ್ಣು, ತರಕಾರಿಗಳಿಂದ ಅಲಂಕರಿಸಲಾಗಿದ್ದು, ರಾಯರ ವೃಂದಾವನ ಕಂಗೊಳಿಸುತ್ತಿದೆ. ಒಳಾವರಣದಲ್ಲಿ ಹೂ, ಹಣ್ಣು , ತರಕಾರಿಯಿಂದ ವಿಶೇಷವಾಗಿ ಸಿಗರಿಸಲಾಗಿದ್ದು, ಭಕ್ತರ ಮನ ಸೆಳೆಯುತ್ತಿದೆ. ಉಡುಪಿ ಸರ್ವೀಸ್​ ಬಸ್​ ನಿಲ್ದಾಣ ಸಮೀಪದ ಗುರುಪ್ರಸಾದ್​ ಫ್ಲವರ್​ ಸ್ಟಾಲ್​ನ ರಮೇಶ್​ ಮೆಂಡನ್​ ಅವರು 10 ವರ್ಷದಿಂದ ರಾವೇಂದ್ರ ಶ್ರೀಗಳಿಗೆ ಹೂವಿನ ಅಲಂಕಾರ ಸೇವೆ ಸಲ್ಲಿಸುತ್ತಿದ್ದಾರೆ. ಜೋಳದ ತೆನೆ, ಬಣ್ಣಬಣ್ಣದ ದೊಣ್ಣೆಮೆಣಸು, ಅನಾನಸ್​, ತರಕಾರಿ, ವಿವಿಧ ಹಣ್ಣು&ಹಂಪಲು ಸಹಿತ ನಾನಾ ವಿಧದ ಹೂವುಗಳ ಅಲಂಕಾರವು ಮಠದ ಮೆರಗು ಹೆಚ್ಚಿಸಿವೆ.
"

ಮಂತ್ರಾಲಯದ ಸುಭುದೇಂದ್ರ ತೀರ್ಥ ಶ್ರೀಪಾದರ ಅನುಗ್ರಹ ಹಾಗೂ ಆಜ್ಞಾನುಸಾರ ಪರ್ಯಾಯ ಶೀರೂರು ಮಠ ಹಾಗೂ ಅಷ್ಟಮಠಾಧೀಶರ ಸಾನ್ನಿಧ್ಯದಲ್ಲಿ ಮೂರು ದಿನಗಳ ಕಾಲ ರಾವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯಲಿದೆ. ರಾಯರ ಭಕ್ತರಿಗೆ ಇದು ಅತ್ಯಂತ ಪವಿತ್ರವಾದ ಉತ್ಸವ. 'ರಾಯರಿದ್ದಾರೆ' ಎಂಬ ನಂಬಿಕೆಯೇ ಎಲ್ಲ ದುಗುಡಗಳನ್ನು ಕಳೆದು ನಮ್ಮನ್ನು ಮುನ್ನಡೆಸುತ್ತದೆ.

— ಜಯತೀರ್ಥ ಆಚಾರ್ಯ. ಉಡುಪಿ ರಾಯರ ಮಠದ ಮ್ಯಾನೇಜರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net