ಕರಾವಳಿ ಜಿಲ್ಲೆಯ ಸಿಎನ್​ಜಿ ಸಮಸ್ಯೆಗೆ ಶೀಘ್ರ ಪರಿಹಾರ

ಸುರೇಶ್​ ಗೋಪಿ. ಕೇಂದ್ರದ ರಾಜ್ಯ ಖಾತೆ ಪೆಟ್ರೋಲಿಯಂ ಸಚಿವ.
ಸುರೇಶ್​ ಗೋಪಿ. ಕೇಂದ್ರದ ರಾಜ್ಯ ಖಾತೆ ಪೆಟ್ರೋಲಿಯಂ ಸಚಿವ.
Published on

* ಸಂಸದ ಕೋಟ ಪ್ರಶ್ನೆಗೆ ಪೆಟ್ರೋಲಿಯಂ ಸಚಿವ ಉತ್ತರ
* 2034ರೊಳಗೆ ದೇಶದಲ್ಲಿ 18,336 ಘಟಕ ಸ್ಥಾಪಿಸುವ ಗುರಿ 

ಉಡುಪಿ: ರಾಜ್ಯದ ಕರಾವಳಿ ಭಾಗದಲ್ಲಿ ಸಿಎನ್​ಜಿ ಕೊರತೆ ಮತ್ತು ಸರಬರಾಜು ಸಮಸ್ಯೆಯಿಂದ ಉಡುಪಿ ಜಿಲ್ಲೆಯಲ್ಲಿ ರಿಕ್ಷಾ ಚಾಲಕರು ಮತ್ತು ಇನ್ನಿತರ ವಾಹನಗಳ ಮಾಲೀಕರು ಕಿಲೋ ಮೀಟರ್​ ಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಹೀಗಾಗಿ ರಾಜ್ಯದ ಕರಾವಳಿ ಭಾಗಕ್ಕೆ ಹೆಚ್ಚುವರಿ ಸಿಎನ್​ಜಿ ಸರಬರಾಜು ಮಾಡಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ದೆಹಲಿಯ ಸಂಸತ್​ ಅಧಿವಶೇನದಲ್ಲಿ ಮಂಗಳವಾರ (ಡಿ.9) ಲಿಖಿತ ಪ್ರಶ್ನೆ ನೀಡಿದರು.
 ಸಂಸದ ಪೂಜಾರಿ ಲಿಖಿತ ಪ್ರಶ್ನೆಗೆ ಕೇಂದ್ರದ ರಾಜ್ಯ ಖಾತೆ ಪೆಟ್ರೋಲಿಯಂ ಸಚಿವ ಸುರೇಶ್​ ಗೋಪಿ ಉತ್ತರಿಸಿ, ತಮ್ಮ ಕರಾವಳಿ ಜಿಲ್ಲೆಯೂ ಸೇರಿದಂತೆ ಎಲ್ಲೆಡೆ ಇರುವ ಸಿಎನ್​ಜಿ ಸಮಸ್ಯೆ ಶೀಘ್ರ ಪರಿಹರಿಸಲಾಗುವುದು. ಅದಕ್ಕೆ ಪೂರಕ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ಉತ್ತರಿಸಿದರು.

ಗುರಿಗಿಂತ ಹೆಚ್ಚು ಪ್ರಗತಿ

ದೇಶಾದ್ಯಂತ 2034ನೇ ಇಸವಿಯೊಳಗೆ 18,336 ಸಿಎನ್​ಜಿ ಕೇಂದ್ರ ಸ್ಥಾಪಿಸುವ ಗುರಿ ಹೊಂದಲಾಗಿದೆ. 2025ರ ಸೆ.30ರ ವರೆಗೆ ಒಟ್ಟು 5,826 ಸಿಎನ್​ಜಿ ಕೇಂದ್ರ ಸ್ಥಾಪಿಸುವ ಗುರಿ ಇತ್ತು. ಬಹು ಬೇಡಿಕೆ ಹಿನ್ನೆಲೆಯಲ್ಲಿ 8,357 ಸಿಎನ್​ಜಿ ಕೇಂದ್ರ ಸ್ಥಾಪಿಸಲಾಗಿದ್ದು, ಗುರಿಗಿಂತ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಸಿಎನ್​ಜಿ ಬೇಡಿಕೆ ಮತ್ತು ನೈಸರ್ಗಿಕ ಅನಿಲದ ಲಭ್ಯತೆಯ ಮೇರೆಗೆ ಹೆಚ್ಚಿನ ಸಿಎನ್​ಜಿ ಮಾರಾಟ ಕೇಂದ್ರ ತೆರೆಯಲಾಗುತ್ತಿದೆ ಎಂದು ಸಚಿವ ತಿಳಿಸಿದರು.

ಜಿಲ್ಲೆಗಳಲ್ಲಿ ಸಭೆ ನಡೆಸಲು ಆದೇಶ

ಈಗಿರುವ ಮಾರಾಟ ಕೇಂದ್ರಗಳನ್ನು ಆನ್​ಲೈನ್​ ಸ್ಟೇಷನ್​ಗಳಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಸಿಜಿಡಿ (ಸಿಟಿ ಗ್ಯಾಸ್​ ಡಿಸ್ಟ್ರಿಬ್ಯೂಟರ್​) ಘಟಕಗಳಿಗೆ ಸೂಚನೆ ನೀಡಲಾಗಿದೆ. ಅದರಿಂದ ವಾಹನಗಳಿಗೆ ಸಕಾಲಕ್ಕೆ ಹಾಗೂ ತ್ವರಿತವಾಗಿ ಇಂಧನ ತುಂಬಿಸಲು ಸಹಾಯವಾಗುತ್ತದೆ. ಸಿಎನ್​ಜಿ ತಾಂತ್ರಿಕತೆ ತೊಂದರೆ ಮತ್ತು ವಿತರಕರ ಗೊಂದಲವಿದ್ದರೆ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲು ಆದೇಶ ನೀಡಲಾಗುವುದು ಎಂದು ಸಚಿವ ಸುರೇಶ್​ ಗೋಪಿ ತಿಳಿಸಿದರು.

ದೇಶಾದ್ಯಂತ ನೈಸರ್ಗಿಕ ಪೈಪ್​ಲೈನ್​ ವ್ಯವಸ್ಥೆ

 ನೈಸರ್ಗಿಕ ಅನಿಲದ ಲಭ್ಯತೆ ಹೆಚ್ಚಿಸಲು ಪಿಎನ್​ಜಿಆರ್​ಬಿ (ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ) ಮೂಲಕ ಸುಮಾರು 34,223 ಕಿ.ಮೀ. ಉದ್ದದ ನೈಸರ್ಗಿಕ ಪೈಪ್​ಲೈನ್​ ವ್ಯವಸ್ಥೆ ಅಳವಡಿಕೆಗೆ 'ಒಂದು ರಾಷ್ಟ್ರ ಒಂದು ಅನಿಲ ಗ್ರಿಡ್​' ಕಲ್ಪನೆಯಡಿ ಕಾರ್ಯಗತ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದೇ ವರ್ಷ 2025ರಲ್ಲಿ 25,429 ಕಿ.ಮೀ ಉದ್ದ ಹಾಗೂ 10,459 ಕಿ.ಮೀ. ವ್ಯಾಪ್ತಿಯಲ್ಲಿ  ಪೈಪ್​ಲೈನ್​ ನಿರ್ಮಾಣದ ಕಾಮಗಾರಿ ವಿವಿಧ ಹಂತದಲ್ಲಿದೆ. ಅದರೊಂದಿಗೆ ದೇಶದಲ್ಲಿ 6,20,428 ಕಿ.ಮೀ. ಗಾತ್ರದ ಕಿರು ಇಂಚ್​ ಪೈಪ್​ಲೈನ್​ ಅಳವಡಿಕೆಯೂ ಪ್ರಗತಿಯಲ್ಲಿದೆ. ಕರ್ನಾಟಕದಲ್ಲಿ ಚಿಕ್ಕಮಗಳೂರು, ಹಾಸನ ಕೊಡಗು ಜಿಲ್ಲೆಗಳ ಸಿಎನ್​ಜಿ ನೆಟ್​ವರ್ಕ್​ ಅಭಿವೃದ್ಧ್ಧಿಗಾಗಿ ಎಜಿಪಿ ಸಿಟಿ ಗ್ಯಾಸ್​ ಪ್ರೈವೇಟ್​ ಲಿಮಿಟೆಡ್​ಗೆ ಅಧಿಕಾರ ನೀಡಲಾಗಿದೆ. ಸದರಿ ಜಿಲ್ಲೆಗಳಲ್ಲಿ ಪೈಪ್​ಲೈನ್​ ಮೂಲಕ ನೈಸರ್ಗಿಕ ಅನಿಲ ಪೂರೈಸಲು ದಾಬೋಲ್​ ಬೆಂಗಳೂರು ನೈಸರ್ಗಿಕ ಅನಿಲ ಪೈಪ್​ಲೈನ್​ ಕಾರ್ಯನಿರ್ವಹಿಸುತ್ತಿದೆ. ಎಂಡಬ್ಲ್ಯುಪಿ (ಕನಿಷ್ಠ ಕಾರ್ಯ ಯೋಜನೆ) ಪ್ರಕಾರ 2029ರ ವೇಳೆಗೆ 121 ಹೆಚ್ಚುವರಿ ಸಿಎನ್​ಜಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಉಳಿಕೆ ಕಾಮಗಾರಿಗಳನ್ನು ತ್ವರಿತವಾಗಿ ಮಾಡಲಾಗುವುದು ಎಂದು ಕೇಂದ್ರ ಸಚಿವ ಸಚಿವ ಸುರೇಶ್​ ಗೋಪಿ ಲಿಖಿತ ಉತ್ತರ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net