ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮ

ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಪುರಸಭೆಯಲ್ಲಿ ಸಂಭಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ನಮ್ಮ ಮೂಡುಬಿದಿರೆ ಫೋರಂ ಸಭೆ ನಡೆಯಿತು. ಎಸಿಪಿ ಶ್ರೀಕಾಂತ್, ತಹಸೀಲ್ದಾರ್ ಪುಟ್ಟರಾಜು ಮೊದಲಾದವರಿದ್ದರು.
ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಪುರಸಭೆಯಲ್ಲಿ ಸಂಭಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ನಮ್ಮ ಮೂಡುಬಿದಿರೆ ಫೋರಂ ಸಭೆ ನಡೆಯಿತು. ಎಸಿಪಿ ಶ್ರೀಕಾಂತ್, ತಹಸೀಲ್ದಾರ್ ಪುಟ್ಟರಾಜು ಮೊದಲಾದವರಿದ್ದರು.
Published on

ಮೂಡುಬಿದಿರೆ: ಪೇಟೆಯ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವಾರದೊಳಗೆ ತಜ್ಞ ಟ್ರಾಫಿಕ್ ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಪಣಂಬೂರು ವಿಭಾಗದ ಎಸಿಪಿ ಶ್ರೀಕಾಂತ್ ಭರವಸೆ ನೀಡಿದರು.

ಪುರಸಭಾ ಕಚೇರಿಯಲ್ಲಿ ಗುರುವಾರ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದ ಅವರು, ಬೃಹತ್ ಅದಿರು ಲಾರಿಗಳ ಸಂಚಾರದಿಂದ ರಸ್ತೆಗಳಿಗೆ ಹಾನಿಯಾಗುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಅವುಗಳನ್ನು ಪರ್ಯಾಯ ರಸ್ತೆಯಲ್ಲಿ ಸಾಗಿಸುವ ಸಾಧ್ಯತೆ ಪರಿಶೀಲಿಸಲಾಗುವುದು. ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಹಳೇ ಕಿರಿದಾದ ರಸ್ತೆಗಳಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಟ್ರಾಫಿಕ್ ಪೊಲೀಸ್ ಠಾಣೆ ಆರಂಭಿಸಿದರೆ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಯಬಹುದು ಎಂದರು.
ನಮ್ಮ ಮೂಡುಬಿದಿರೆ ಫೋರಂ ಸಂಚಾಲಕ ಅಕ್ಷಯ ಜೈನ್, ರಿಂಗ್ ರಸ್ತೆಯ ಕಿರಿದಾದ ತಿರುವುಗಳಿಂದ ಭಾರಿ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ರಿಂಗ್ ರಸ್ತೆ ಅಭಿವೃದ್ಧಿ ಹಾಗೂ ಟ್ರಾಫಿಕ್ ನಿಯಮಗಳ ಪರಿಣಾಮಕಾರಿ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಖಾಸಗಿ ಕಟ್ಟಡಗಳ ಪಾರ್ಕಿಂಗ್ ಸ್ಥಳಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದರಿಂದ ಗ್ರಾಹಕರ ವಾಹನಗಳು ರಸ್ತೆಯಲ್ಲಿ ನಿಲ್ಲುತ್ತಿದ್ದು, ಈ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಪಿಡಬ್ಲ್ಯುಡಿ ಹಾಗೂ ಎನ್‌ಎಚ್‌ಎಐ ಜಂಟಿಯಾಗಿ ರಸ್ತೆಗಳ ಗುಂಡಿಗಳು ಮತ್ತು ಪ್ರಮುಖ ರಸ್ತೆ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಿವೆ. ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಆ.31ರಂದು ನಮ್ಮ ಮೂಡುಬಿದಿರೆ ಫೋರಂ ನಡೆಸಲು ಉದ್ದೇಶಿಸಿದ್ದ ಒಂದು ಗಂಟೆಯ ಶಾಂತಿಯುತ ಪ್ರತಿಭಟನೆಯನ್ನು ರದ್ದುಪಡಿಸಿದೆ.
ತಹಸೀಲ್ದಾರ್ ಪುಟ್ಟರಾಜು, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ತೌಸಿಫ್, ಸಹಾಯಕ ಇಂಜಿನಿಯರ್ ಪ್ರೀತಂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಸಿಸ್ಟೆಂಟ್ ಇಂಜಿನಿಯರ್ ಸಾತ್ವಿಕ್, ಪುರಸಭೆ ಮಾಜಿ ಸದಸ್ಯರಾದ ಪಿ.ಕೆ.ಥೋಮಸ್, ಪ್ರಸಾದ್ ಕುಮಾರ್ ಹಾಗೂ ಪೊಲೀಸ್ ಉಪ ಠಾಣಾಧಿಕಾರಿ ಪ್ರತಿಭಾ ಭಾಗವಹಿಸಿದ್ದರು.
ಟಿಎಂಸಿ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ ಹಾಗೂ ನಮ್ಮ ಮೂಡುಬಿದಿರೆ ಫೋರಂನ ಅಕ್ಷಯ್ ಕೆ.ಜೈನ್, ಯಾಸೀರ್ ಮತ್ತು ದಿನೇಶ್ ಶೆಣೈ ಸಭೆಯಲ್ಲಿ ಭಾಗವಹಿಸಿ ಪ್ರತಿಭಟನೆ ರದ್ದುಗೊಳಿಸುವ ನಿರ್ಧಾರ ಕೈಗೊಂಡರು.

ಜಾಗೃತಿ ಮೂಡಿಸಲು ನಿರ್ಧಾರ

ಪುರಸಭಾ ಮುಖ್ಯಾಧಿಕಾರಿ ಇಂದು ಎಂ.ಟ್ರಾಫಿಕ್ ಸಮಸ್ಯೆ, ಹದಗೆಟ್ಟ ರಸ್ತೆಗಳು ಹಾಗೂ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು. ಮುಂದಿನ ಮೂರು ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಲಿದ್ದು, ಸಂಚಾರ ನಿಯಮ ಪಾಲನೆ, ನೋ-ಎಂಟ್ರಿ ವ್ಯವಸ್ಥೆ, ರಿಂಗ್ ರಸ್ತೆ ಬಳಕೆ ಹಾಗೂ ಅನಗತ್ಯ ವಾಹನಗಳ ಪಟ್ಟಣ ಪ್ರವೇಶ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು. ಒಂದು ವಾರದಿಂದ 10 ದಿನಗಳೊಳಗೆ ಕಟ್ಟುನಿಟ್ಟಿನ ಟ್ರಾಫಿಕ್ ದಂಡ ಜಾರಿಗೊಳಿಸುವುದರ ಜತೆಗೆ ಸಂಚಾರ ಉಲ್ಲಂಘನೆ ವರದಿಗೆ ವಿಶೇಷ ವಾಟ್ಸಾೃಪ್ ಡಿಜಿಟಲ್ ದೂರು ಸಂಖ್ಯೆ ಒದಗಿಸಲಾಗುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net