ಸತ್ಕಾರ್ಯ, ಗಳಿಸಿದ ಪುಣ್ಯವೇ ಶಾಶ್ವತ ಸಂಪತ್ತು

ನವಿಮುಂಬಯಿಯಲ್ಲಿರುವ ಪುತ್ತಿಗೆ ಮಠದ ನೂತನ ಶಾಖೆಯಲ್ಲಿ ಚಾತುರ್ಮಾಸ್ಯ ವೃತಾಚರಣೆಗೆ ಆಗಮಿಸಿದ ಸುಗುಣೇಂದ್ರ ಶ್ರೀಗಳು ಭಕ್ತರ ಭವ್ಯ ಸ್ವಾಗತದೊಂದಿಗೆ ಸಾರೋಟಿನಲ್ಲಿ ಪುರಪ್ರವೇಶ ಮಾಡಿದರು.
ನವಿಮುಂಬಯಿಯಲ್ಲಿರುವ ಪುತ್ತಿಗೆ ಮಠದ ನೂತನ ಶಾಖೆಯಲ್ಲಿ ಚಾತುರ್ಮಾಸ್ಯ ವೃತಾಚರಣೆಗೆ ಆಗಮಿಸಿದ ಸುಗುಣೇಂದ್ರ ಶ್ರೀಗಳು ಭಕ್ತರ ಭವ್ಯ ಸ್ವಾಗತದೊಂದಿಗೆ ಸಾರೋಟಿನಲ್ಲಿ ಪುರಪ್ರವೇಶ ಮಾಡಿದರು.
Published on

ಪುತ್ತಿಗೆ

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ 

* ಚಾತುರ್ಮಾಸ್ಯದ ನಿಮಿತ್ತ ಮುಂಬಯಿಯಲ್ಲಿ ಪುರಪ್ರವೇಶ

ಉಡುಪಿ: ಬದುಕಲು ಹಣ ಸಂಪಾದಿಸಬೇಕು. ಜೀವನ ನಿರ್ವಹಣೆಗೆ ಅದು ಅತ್ಯಗತ್ಯ. ಆದರೆ, ತಾತ್ಕಾಲಿಕವಾದ ಹಣ ಸಂಪಾದನೆಯೊಂದೇ ಜೀವನದ ಗುರಿಯಾಗಬಾರದು. ಪುಣ್ಯವನ್ನೂ ಸಂಪಾದಿಸಬೇಕು. ಏಕೆಂದರೆ, ಧನ-ಕನಕಾದಿಗಳು ನಮ್ಮನ್ನು ಈ ಲೋಕದಲ್ಲಿ ಸ್ವಲ್ಪಕಾಲ ಮಾತ್ರ ರಕ್ಷಿಸಬಲ್ಲದು. ಆದರೆ, ಮಾಡಿದ ಸತ್ಕಾರ್ಯ, ಗಳಿಸಿದ ಪುಣ್ಯ ಸದಾ ಮತ್ತು ಶಾಶ್ವತವಾಗಿ ರಕ್ಷಿಸುತ್ತವೆ ಎಂದು ಯತಿಕುಲ ಚಕ್ರವರ್ತಿ ಬಿರುದಾಂಕಿತ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ನವಿಮುಂಬಯಿಯಲ್ಲಿರುವ ಪುತ್ತಿಗೆ ಮಠದ ನೂತನ ಶಾಖೆಯಲ್ಲಿ ತಮ್ಮ 53ನೇ ವರ್ಷದ ಚಾತುರ್ಮಾಸ್ಯ ಹಮ್ಮಿಕೊಂಡಿದ್ದು ತನ್ನಿಮಿತ್ತ ಮಂಗಳವಾರ (ಆ.11) ಸಂಜೆ ಮುಂಬಯಿಯಲ್ಲಿ ಪುರಪ್ರವೇಶ ಮಾಡಿ, ಚಾತುಮಾರ್ಸ್ಯದ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಸದ್ವಿನಿಯೋಗ ಅಗತ್ಯ

ನಮಗಾಗಿ ಸಂಗ್ರಹಿಸಿಡಲೆಂದೇ ಹಣ ಗಳಿಸುತ್ತಲೇ ಇರಬಾರದು. ಗಳಿಕೆಯ ಒಂದು ಭಾಗವನ್ನು ದೇವರ ಸೇವೆಗೆ, ಧಾರ್ಮಿಕ ಕಾರ್ಯಗಳಿಗೆ, ದಾನ-ದಕ್ಷಿಣೆಗೆ, ಜ್ಞಾನ ಪ್ರಸಾರಕ್ಕೆ, ಬಡವರು ಮತ್ತು ಅಸಹಾಯಕರ ಸೇವೆಗೆ ವಿನಿಯೋಗಿಸಬೇಕು. ಅಂತಹ ಸತ್ಕಾರ್ಯಗಳೇ ಪುಣ್ಯವಾಗಿ ಪರಿವರ್ತನೆಯಾಗುತ್ತದೆ. ಗಳಿಸಿಟ್ಟ ಹಣ ನಾಳೆ ಖಾಲಿಯಾಗಬಹುದು ಅಥವಾ ಕಳ್ಳತನ ಆಗಬಹುದು. ಆದರೆ, ಸತ್ಕಾರ್ಯಗಳಿಂದ ಸಂಪಾದಿಸಿದ ಪುಣ್ಯ ಯಾರಿಂದಲೂ ಕಸಿದುಕೊಳ್ಳಲಾಗದು. ಅದರಿಂದ ಆತ್ಮತೃಪ್ತಿ, ನೆಮ್ಮದಿ ಮತ್ತು ದೈವಾನುಗ್ರಹ ದೊರೆಯುತ್ತದೆ ಎಂದರು.

ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಶಿವರಾಮ ಶೆಟ್ಟಿ, ಉಪಾಧ್ಯಕ್ಷರಾದ ಗೋಪಾಲ್​ ವೈ. ಶೆಟ್ಟಿ, ಎನ್​.ಆರ್​. ರೈ, ಕಾರ್ಯಾಧ್ಯಕ್ಷ ಧರ್ಮದರ್ಶಿ ಅಣ್ಣಿ ಶೆಟ್ಟಿ, ಗೋಕುಲದ ಮಾಜಿ ಅಧ್ಯಕ್ಷ ಡಾ. ಸುರೇಶ್​ ರಾವ್​, ಅದಮಾರು ಮಠದ ಮುಖ್ಯ ಪ್ರಬಂಧಕ ರಾಜೇಶ್​ ಭಟ್​, ನೆಹರೂ ನಗರ ಪರಿಸರ ಸೇವಕರಾದ ಸಂತೋಷ್​ ಶೆಟ್ಟಿ, ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್​ ತಂತ್ರಿ ಉಪಸ್ಥಿತರಿದ್ದರು.

ಮಠದ ಭಕ್ತ ದಿನೇಶ್​ ಕುಲಾಲ್​ ಕಾರ್ಯಕ್ರಮ ನಿರ್ವಹಿಸಿದರು. ವಿಕ್ರಮ್​ ಕುಮಾರ್​ ಕೊಂಟಾರ್​ ವಂದಿಸಿದರು.

ಸಾರೋಟಿನಲ್ಲಿ 

ಶ್ರೀಪಾದರ ಭವ್ಯ ಮೆರವಣಿಗೆ

ಚಾತುರ್ಮಾಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net