ಪುಲಿಮುಟ್ಟು ಯೋಜನೆ ನನೆಗುದಿಗೆ

 ಶಿರಿಯಾದಲ್ಲಿರುವ ಕರಾವಳಿ ತೀರ.
ಶಿರಿಯಾದಲ್ಲಿರುವ ಕರಾವಳಿ ತೀರ.
Published on
ವಿಜಯವಾಣಿ ಸುದ್ದಿಜಾಲ ಉಪ್ಪಳ
ಮಂಜೇಶ್ವರ ಕ್ಷೇತ್ರದ ಕರಾವಳಿ ಪ್ರದೇಶವಾದ ಶಿರಿಯಾದಲ್ಲಿ ಸಮುದ್ರ ಕೊರತ ತಡೆಗಟ್ಟಲು ಘೋಷಿಸಲಾದ ಸಮುದ್ರ ಗೋಡೆ (ಪುಲಿಮುಟ್ಟು) ಯೋಜನೆ ಒಂದು ದಶಕ ಕಳೆದರೂ ಇನ್ನೂ ಸಾಕಾರಗೊಂಡಿಲ್ಲ.
ವಕೀಲ ಸಿ.ಎಚ್.ಕುಂಞಂಬು ಮಂಜೇಶ್ವರ ಶಾಸಕರಾಗಿದ್ದಾಗ ಈ ಯೋಜನೆ ಘೋಷಿಸಲಾಗಿತ್ತು. ಸರ್ಕಾರದ ಬದಲಾವಣೆಗಳೊಂದಿಗೆ ಈ ಯೋಜನೆಯೂ ಕಣ್ಮರೆಯಾಯಿತು. ಹಿಂದಿನ ಸರ್ಕಾರ ಯೋಜನೆಗೆ ಹಣ ಹಂಚಿಕೆ ಮಾಡಲು ಮುಂದಾಗಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಮುದ್ರ ಸವೆತದಿಂದಾಗಿ ಅಪಾಯದಲ್ಲಿರುವ ಕರಾವಳಿ ತೀರ ಹಾಗೂ ಅನೇಕ ಕುಟುಂಬಗಳಿಗೆ ಈ ಯೋಜನೆ ಬಹುದೊಡ್ಡ ಭರವಸೆಯಾಗಿತ್ತು. ಆದರೆ ವರ್ಷಗಳು ಕಳೆದರೂ ಯೋಜನೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ನಿರಾಸೆ ಮೂಡಿಸಿದೆ.

ಸಮುದ್ರ ಗೋಡೆ ಮಹತ್ವ

ಕರಾವಳಿ ಪ್ರದೇಶವನ್ನು ಸಮುದ್ರದ ಹೆದ್ದೆರೆಗಳಿಂದ ರಕ್ಷಿಸಲು ಸಮುದ್ರ ಗೋಡೆಗಳು ಅಗತ್ಯ. ರಕ್ಷಣಾತ್ಮಕ ರೆಕ್ಕೆಗಳು ಅಥವಾ ಸಮುದ್ರ ಗೋಡೆಗಳನ್ನು ಸಮುದ್ರಕ್ಕೆ ಚಾಚಿಕೊಂಡಿರುವ ದೊಡ್ಡ ಬಂಡೆಗಳು ಅಥವಾ ಕಾಂಕ್ರೀಟ್ ಬ್ಲಾಕ್ ಬಳಸಿ ನಿರ್ಮಿಸಲಾಗುತ್ತದೆ. ಇವು ಪ್ರಬಲ ಅಲೆಗಳ ಹೊಡೆತವನ್ನು ಕಡಿಮೆ ಮಾಡಲು ಮತ್ತು ಕರಾವಳಿ ಸವೆತ ತಡೆಯಲು ಸಹಾಯಕವಾಗಿರುತ್ತದೆ. ಇದಲ್ಲದೆ, ಬಂದರುಗಳು ಮತ್ತು ನದಿ ಮುಖಗಳನ್ನು ಪ್ರವೇಶಿಸುವ ಮೀನುಗಾರಿಕೆ ದೋಣಿಗಳು ಮತ್ತು ಇತರ ಹಡಗುಗಳಿಗೆ ಸಮುದ್ರ ಗೋಡೆ ಸುರಕ್ಷಿತ ಮಾರ್ಗ ಒದಗಿಸುತ್ತವೆ. ಮೀನುಗಾರರು ಸುರಕ್ಷಿತವಾಗಿ ಸಮುದ್ರಕ್ಕೆ ಪ್ರವೇಶಿಸಲು ಮತ್ತು ಮೀನುಗಾರಿಕೆ ಮಾಡಲು ಯೋಜನೆ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ಅಂದಾಜಿಸಲಾಗಿತ್ತು.

ಶೀಘ್ರ ಜಾರಿಗೆ ಆಗ್ರಹ

ಶಿರಿಯಾ ಕರಾವಳಿಯಲ್ಲಿ ಮಳೆಗಾಲದಲ್ಲಿ ಭಾರಿ ಹಾನಿಯಾಗುತ್ತಿರುವುದರಿಂದ ಸ್ಥಳೀಯರು ಮತ್ತೊಮ್ಮೆ ಯೋಜನೆಗಾಗಿ ಧ್ವನಿ ಎತ್ತುತ್ತಿದ್ದಾರೆ. ಸ್ಥಳೀಯರು ತಮ್ಮ ಸಮಸ್ಯೆಯನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಗಮನಕ್ಕೆ ತಂದು ಮೀನುಗಾರಿಕಾ ಇಲಾಖೆಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ವರ್ಷಗಳಿಂದ ನಿರೀಕ್ಷೆಯಲ್ಲಿರುವ ಈ ಯೋಜನೆ ತಕ್ಷಣ ಅನುಷ್ಠಾನಗೊಳಿಸುವಂತೆ ಕರಾವಳಿ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ. ಕೈಬಿಟ್ಟ ಯೋಜನೆಗೆ ಮರುಜೀವ ನೀಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಈಗ ಮತ್ತೆ ಬಲಗೊಳ್ಳುತ್ತಿದೆ.

ನನೆಗುದಿಗೆ ಬಿದ್ದಿರುವ ಯೋಜನೆಯನ್ನು ಮತ್ತೆ ಮುನ್ನೆಲೆಗೆ ತಂದು ಅನುಷ್ಠಾನಗೊಳಿಸಬೇಕೆಂದು ಸ್ಥಳೀಯರು ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಜನೆಯ ಸಮಗ್ರ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ಮತ್ತೆ ಮನವಿ ಮಾಡಲು ಕ್ರಮ ಕೈಗೊಳ್ಳಲಾಗುವುದು.

— ಎಕೆಎಂ ಅಶ್ರಫ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net