ಸುಳ್ಯ ನಗರದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರಿಗೆ ನಗರ ಕಾಂಗ್ರೆಸ್ ನಿಯೋಗ ಮನವಿ ಸಲ್ಲಿಸಿತು. ಎಂ.ಜೆ.ಶಶಿಧರ್, ಕೆ.ಎಂ.ಮುಸ್ತಫ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಧರ್ಮಪಾಲ ಕೊಯಿಂಗಾಜೆ ಮತ್ತಿತರರು ಇದ್ದರು.
ಸುಳ್ಯ: ಸುಳ್ಯ ನಗರದಲ್ಲಿ ಕಾಡುತ್ತಿರುವ ತ್ಯಾಜ್ಯ, ರಸ್ತೆ, ಚರಂಡಿ ಸಮಸ್ಯೆಗಳಿಗೆ ಪರಿಹಾರ ಕ್ರಮ ಕೈಗೊಳ್ಳುವಂತೆ ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ಶಶಿಧರ್ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರಿಗೆ ಮನವಿ ಸಲ್ಲಿಸಿತು.
ನಗರ ಪಂಚಾಯಿತಿ ಆವರಣದಲ್ಲಿ ಕಸ ರಾಶಿ ಬಿದ್ದು ಡಂಪಿಂಗ್ ಯಾರ್ಡ್ ಆಗಿದೆ. ಅಮೃತ್ 2.0 ಯೋಜನೆಗಾಗಿ ಅಗೆದ ರಸ್ತೆಗಳನ್ನು ಈವರೆಗೂ ದುರಸ್ತಿ ಮಾಡಿಲ್ಲ. ಇದರಿಂದಾಗಿ ಮುಖ್ಯ ರಸ್ತೆಯಲ್ಲಿ ಜನರಿಗೆ ನಡೆದಾಡಲು ಸಮಸ್ಯೆಯಾಗಿದೆ.
8 ವರ್ಷಗಳಿಂದ ನಗರ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಒಂದೇ ಒಂದು ನಿವೇಶನ ನೀಡಿಲ್ಲ, ನಗರ ಆಶ್ರಯ ಸಮಿತಿ ಸಭೆ ಕರೆಯಲು ಮೀನಮೇಷ ಎಣಿಸುತ್ತಿದ್ದಾರೆ. ಮಳೆಗಾಲ ಮುಗಿಯುತ್ತಾ ಬಂದರೂ ನಗರ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ದುರಸ್ತಿ ಕಾರ್ಯ ಕೈಗೊಳ್ಳದೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು ಸಣ್ಣ ಮಳೆ ಬಂದರೂ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸಲು ಕೂಡಲೇ ಆದೇಶ ನೀಡಬೇಕೆಂದು ನಿಯೋಗ ಮನವಿ ಮಾಡಿತು.
ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ಮುಸ್ತಫ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆಡಿಪಿ ಸದಸ್ಯ ಧರ್ಮಪಾಲ ಕೊಯಿಂಗಾಜೆ, ಅಚ್ಚುತ ಮೆಲ್ಕಜೆ, ನಂದರಾಜ ಸಂಕೇಶ್ ಉಪಸ್ಥಿತರಿದ್ದರು.