ಸಂಚಾರ ದಟ್ಟಣೆ, ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ

ಸಂಸದ ಕ್ಯಾ.ಬ್ರಿಜೇಶ್ ಚೌಟ ಅಧ್ಯಕ್ಷತೆಯ ದಿಶಾ ಸಮಿತಿ ಸಭೆಯಲ್ಲಿ ಸಂಚಾರ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆ ಕುರಿತಂತೆ ಶಾಸಕ ರಾಜೇಶ್ ನಾಕ್ ಪ್ರಸ್ತಾಪಿಸಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ ಅಧ್ಯಕ್ಷತೆಯ ದಿಶಾ ಸಮಿತಿ ಸಭೆಯಲ್ಲಿ ಸಂಚಾರ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆ ಕುರಿತಂತೆ ಶಾಸಕ ರಾಜೇಶ್ ನಾಕ್ ಪ್ರಸ್ತಾಪಿಸಿದರು.
Published on

ಬಂಟ್ವಾಳ: ಪೊಳಲಿ ದ್ವಾರ ಕೈಕಂಬದಿಂದ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದವರೆಗೆ ನಿತ್ಯ ಉಂಟಾಗುತ್ತಿರುವ ಸಂಚಾರ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಶಾಸಕ ರಾಜೇಶ್ ನಾಕ್ ಹೇಳಿದರು.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಈ ಮಾರ್ಗದಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ಪ್ರತಿನಿತ್ಯ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಅಗಲೀಕರಣ ಸೇರಿದಂತೆ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ರಾ.ಹೆದ್ದಾರಿ ಇಲಾಖೆ ಹಾಗೂ ಸಂಬಂಧಪಟ್ಟ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಶೀಘ್ರ ಜಂಟಿ ಸರ್ವೇ ನಡೆಸಿ, ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
400 ಕೆ.ವಿ. ಪರಿಹಾರಕ್ಕೆ ಒತ್ತಾಯ: ಉಡುಪಿ, ಕಾಸರಗೋಡು ನಡುವೆ ಹಾದುಹೋಗುವ 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದಿಂದ ಬಂಟ್ವಾಳ ತಾಲೂಕಿನ ಹಲವು ಕೃಷಿಕರ ಜಮೀನುಗಳು ಬಾಧಿತವಾಗಿರುವ ವಿಚಾರವೂ ಪ್ರಸ್ತಾಪವಾಯಿತು. ವಿದ್ಯುತ್ ಮಾರ್ಗಕ್ಕಾಗಿ ಜಮೀನು ಕಳೆದುಕೊಳ್ಳುತ್ತಿರುವ ಕೃಷಿಕರಿಗೆ ಅವರ ಜಮೀನಿನ ಮೌಲ್ಯಕ್ಕೆ ಅನುಗುಣವಾಗಿ ಸೂಕ್ತ ಪರಿಹಾರ ನೀಡುವಂತೆ ಶಾಸಕ ರಾಜೇಶ್ ನಾಕ್ ಜಿಲ್ಲಾಧಿಕಾರಿಯ ಗಮನ ಸೆಳೆದರು.
ಸಂಸದ ಕ್ಯಾ.ಚೌಟ ಮಾತನಾಡಿ, ವಿದ್ಯುತ್ ಮಾರ್ಗ ಕಾಮಗಾರಿಗೆ ಸಂಬಂಧಿಸಿದಂತೆ ಕೆಲವು ಪ್ರದೇಶಗಳಲ್ಲಿ ಪೊಲೀಸ್ ಭದ್ರತೆಯೊಂದಿಗೆ ಕೃಷಿಕರ ಮೇಲೆ ಒತ್ತಡ ಹೇರುತ್ತಿರುವ ಬಗ್ಗೆ ದೂರು ಬಂದಿವೆ. ಕೃಷಿಕರನ್ನು ಹೆದರಿಸುವಂತಹ ಕ್ರಮಗಳು ಸರಿಯಲ್ಲ. ಕಾನೂನುಬದ್ಧವಾಗಿ ಅಗತ್ಯವಿದ್ದರೆ ಮಾತ್ರವೇ ಕಂದಾಯ ಅಧಿಕಾರಿಗಳು, ಪೊಲೀಸ್ ಇಲಾಖೆ ನೆರವಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಪಿಗೆ ತಿಳಿಸಿರುವುದಾಗಿ ಹೇಳಿದರು. ಕೃಷಿಕರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಹಾಗೂ ಕಾನೂನುಬದ್ಧ ಪ್ರಕ್ರಿಯೆಯಂತೆ ಕಾಮಗಾರಿ ಮುಂದುವರಿಸುವುದಾಗಿ ಸಭೆಯಲ್ಲಿ ಭರವಸೆ ವ್ಯಕ್ತವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net