

ಉಡುಪಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಲಾಗದೆ ಸಂಪೂರ್ಣವಾಗಿ ಆರ್ಥಿಕ ದಿವಾಳಿತನ ತಲುಪಿದೆ. ಅಭಿವೃದ್ಧಿ ಕುಂಠಿತಗೊಂಡಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಬರ ಪರಿಹಾರವಾಗಿ ಕೇವಲ 2500 ರೂ. ಘೋಷಿಸಿರುವುದು ರೈತರಿಗೆ ಮಾಡಿದ ಅವಮಾನ. ಉಪಮುಖ್ಯಮಂತ್ರಿಗಳು ಹಾಗೂ ಸಚಿವರು ವೈಮಾನಿಕ ಸಮೀಕ್ಷೆ, ಹೆಲಿಕಾಪ್ಟರ್ ಪ್ರವಾಸಗಳಿಗೆ ಕೋಟ್ಯಂತರ ರೂ. ಪೋಲು ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಶುಕ್ರವಾರ ಕಡಿಯಾಳಿ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳು, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಣ ನೀಡಲು ಸರ್ಕಾರದ ಬಳಿ ಅನುದಾನವಿಲ್ಲ. ಹಣಕಾಸು ಇಲಾಖೆ ನಿರ್ವಹಣೆಯಲ್ಲೂ ಸರ್ಕಾರ ವಿಫಲವಾಗಿದೆ. ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲದಿದ್ದರೂ ಕರಾವಳಿ ಜಿಲ್ಲೆಗಳಿಗೆ 32 ಸಾವಿರ ಕೋಟಿ ರೂ. ಹಾಗೂ ಹೈದರಾಬಾದ್ ಕರ್ನಾಟಕ ಭಾಗಕ್ಕೆ 1 ಲಕ್ಷ ಕೋಟಿ ರೂ. ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸುತ್ತಿದ್ದಾರೆ. ಹಣವಿಲ್ಲದ ಮೇಲೆ ಅನುದಾನ ಎಲ್ಲಿಂದ ತಂದು ನೀಡುತ್ತಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನ ಕೆಲ ವಿಧಾನ ಪರಿಷತ್ ಸದಸ್ಯರೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಸಲಹೆ ನೀಡುತ್ತಿರುವುದು ಸರ್ಕಾರದ ಮೇಲಿನ ವಿಶ್ವಾಸದ ಕೊರತೆಯನ್ನು ತೋರಿಸುತ್ತದೆ ಎಂದರು.
ತುಳು ಭಾಷೆೆಯ ನಿರ್ಲಕ್ಷ್ಯ
ತುಳು ಭಾಷೆಯನ್ನು ರಾಜ್ಯದ ಎರಡನೇ ಆಡಳಿತ ಭಾಷೆಯನ್ನಾಗಿ ಘೋಷಿಸುವ ವಿಚಾರದಲ್ಲಿ ಸರ್ಕಾರ ಪ್ರಜಾತಾಂತ್ರಿಕ ಮತ್ತು ಸರಿಯಾದ ಕ್ರಮ ಕೈಗೊಂಡಿಲ್ಲ. ತುಳು ಕೇವಲ ಕರಾವಳಿ ಎರಡು ಜಿಲ್ಲೆಗಳಿಗೆ ಸೀಮಿತವಾದ ಭಾಷೆಯಲ್ಲ; ರಾಜ್ಯಾದ್ಯಂತ ಹಾಗೂ ಹೊರರಾಜ್ಯಗಳಲ್ಲೂ ತುಳು ಮಾತನಾಡುವ ಜನರಿದ್ದಾರೆ. ಈ ಭಾಷೆೆಗೆ ಸಂವಿಧಾನದ 8ನೇ ಅನುಸೂಚಿಯಲ್ಲಿ ಸ್ಥಾನ ಸಿಗಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಕೆ. ಉದಯಕುಮಾರ್ ಶೆಟ್ಟಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರಾವಳಿ ಜಿಲ್ಲೆಗಳಲ್ಲಿ ಘೋಷಿಸಿರುವ ಯೋಜನೆಗಳು ಮತ್ತು ಅನುದಾನ ಠುಸ್ ಪಟಾಕಿ ರೀತಿ ಇದೆ. ಸುಮಾರು 2 ಲಕ್ಷ ಕೋಟಿ ಕಾಮಗಾರಿಗಳ ಬಿಲ್ ಬಾಕಿ ಇದೆ ಎಂಬ ಆರೋಪಗಳ ನಡುವೆ ಸರ್ಕಾರಿ ನೌಕರರ ವೇತನ ನೀಡಲೂ ಹಣವಿಲ್ಲದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಕರಾವಳಿ ಜಿಲ್ಲೆಗಳಿಗೆ 32 ಸಾವಿರ ಕೋಟಿ ರೂ. ಅನುದಾನ ಘೋಷಿಸಿರುವುದನ್ನು ನಂಬಲು ಸಾಧ್ಯವಿಲ್ಲ. ಇದು ಕೇವಲ ಪ್ರಚಾರಕ್ಕಾಗಿ ಮಾಡಿರುವ ಘೋಷಣೆ ಎಂದು ಟೀಕಿಸಿದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮುಖಂಡರಾದ ಸಂಧ್ಯಾ ರಮೇಶ್, ದಿನಕರ ಶೆಟ್ಟಿ ಹೆರ್ಗ, ಶಿಲ್ಪಾ ಸುವರ್ಣ, ಪ್ರಭಾಕರ ಪೂಜಾರಿ, ವಿಜಯ ಕೊಡವೂರು, ಶ್ರೀಕಾಂತ್ ನಾಯಕ್, ದಿನಕರ ಬಾಬು, ಮಧುಕರ ಮುದ್ರಾಡಿ, ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ರಶ್ಮಿತಾ ಬಾಲಕೃಷ್ಣ, ಗಿರೀಶ್ ಅಂಚನ್, ದಿನೇಶ್ ಅಮೀನ್, ಪ್ರಜ್ಞಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.