ರಸ್ತೆ ದುರಸ್ತಿ ಆಗ್ರಹಿಸಿ ಪ್ರತಿಭಟನೆ

 ರಸ್ತೆ ದುರಸ್ತಿಗೆ ಆಗ್ರಹಿಸಿ ಮೊಗವೀರ ನಾಗರಿಕ ಹೋರಾಟ ಸಮಿತಿಯಿಂದ ಶನಿವಾರ ಮೊಗವೀರ ಪಟ್ಣ ಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಯಿತು.
ರಸ್ತೆ ದುರಸ್ತಿಗೆ ಆಗ್ರಹಿಸಿ ಮೊಗವೀರ ನಾಗರಿಕ ಹೋರಾಟ ಸಮಿತಿಯಿಂದ ಶನಿವಾರ ಮೊಗವೀರ ಪಟ್ಣ ಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಯಿತು.
Published on
ಉಳ್ಳಾಲ: ಮೊಗವೀರಪಟ್ಣ-ಕೋಟೆಪುರ ರಸ್ತೆ ದುರಸ್ತಿಗೆ ಆಗ್ರಹಿಸಿ ಮೊಗವೀರ ನಾಗರಿಕ ಹೋರಾಟ ಸಮಿತಿಯಿಂದ ಶನಿವಾರ ಮೊಗವೀರ ಪಟ್ಣ ಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭ ನವೀನ್ ನಾಯಕ್ ಮಾತನಾಡಿ, ಒಂದು ರಸ್ತೆ ರಿಪೇರಿಗಾಗಿ ಕೆಲಸ ಕಾರ್ಯಗಳನ್ನು ಬಿಟ್ಟು ಪ್ರತಿಭಟನೆಯಲ್ಲಿ ಕೂರಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೊಗವೀರ ಸಂಘದ ಅಧ್ಯಕ್ಷ ಯಶವಂತ ಅಮೀನ್ ಮಾತನಾಡಿ, ರಸ್ತೆಗೆ 50 ವರ್ಷವಾದರೂ ದುರಸ್ತಿ ಆಗಿಲ್ಲ. ಈ ಪ್ರತಿಭಟನೆ ರಾಜಕೀಯ ಪ್ರೇರಿತವಲ್ಲ. ಈ ರಸ್ತೆಗೆ ತೇಪೆ ಹಚ್ಚುವ ಕೆಲಸ ಆಗಿದೆಯೇ ಹೊರತು ಡಾಂಬರು ಆಗಿಲ್ಲ. 6 ಕೋಟಿ ರೂ.ಮೀಸಲು ಅನುದಾನ ಕಡತಕ್ಕೆ ಮಾತ್ರ ಸೀಮಿತವೆ ಅಥವಾ ಯಾರಾದಾದರೂ ಜೇಬು ಸೇರುತ್ತಿದೆಯೆ ಎಂದು ಪ್ರಶ್ನಿಸಿದರು.
ಉಳ್ಳಾಲದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಫಿಶ್ ಮೀಲ್‌ಗಳಿಂದ ಪರಿಸರದ ಜನರಿಗೆ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ ಕಾಯಿಲೆಗಳನ್ನು ಉಡುಗೊರೆಯಾಗಿ ಹರಡಲಾಗುತ್ತಿದೆ. ಇಡೀ ಉಳ್ಳಾಲಕ್ಕೆ ಕರೆಂಟ್ ಇಲ್ಲದಿದ್ದರೂ ಇಂತಹ ಫ್ಯಾಕ್ಟರಿಗಳಿಗೆ ಮಾತ್ರ ಮೆಸ್ಕಾಂ ಪ್ರತ್ಯೇಕ ಟ್ರಾನ್ಸ್ ಫಾರ್ಮರ್ ಅಳವಡಿಸಿ 24 ಗಂಟೆ ವಿದ್ಯುತ್ ಪೂರೈಸುತ್ತಿದೆ. ಫಿಶ್ ಮೀಲ್ ಮಾಫಿಯಾಗಳಿಗೆ ಹೆದರಿ ಈಗಾಗಲೇ ಅನೇಕ ಸ್ಥಳೀಯ ನಿವಾಸಿಗಳು ಜಾಗ ಮಾರಿ ಊರೇ ಬಿಟ್ಟು ಹೋಗಿದ್ದಾರೆ. ಇಲ್ಲಿನ ಮಾಲಿನ್ಯದಿಂದಾಗಿ ಯುವತಿಯರಿಗೆ ನೆಂಟಸ್ಥಿಕೆ ಕೂಡಿ ಬರದ ಸ್ಥಿತಿ ಎದುರಾಗಿದೆ ಎಂದು ಗಣೇಶ್ ಉಳ್ಳಾಲ್ ಖೇದ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ನಗರಸಭೆಗೆ ಮನವಿ ಸಲ್ಲಿಸಿದ್ದು ಕಂದಾಯ ಅಧಿಕಾರಿ ನವೀನ್ ಹೆಗ್ಡೆ ಸ್ವೀಕರಿಸಿದರು. ಶಾರದಾ ಉತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ, ನಿಝಾಮ್ ಮೇಲಂಗಡಿ, ಗಣೇಶ್, ಫೈರೋಜ್ ಕೋಟೆಪುರ, ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಬಾಬು ಬಂಗೇರ, ರಂಜಿತಾ ಉಳ್ಳಾಲ, ರಿಯಾಝ್ ಮಂಗಳೂರು, ಇರ್ಫಾನ್ ಕೋಟೆಪುರ, ಟ್ರಯಲ್ ಬೋಟ್ ಅಧ್ಯಕ್ಷ ರಾಜೇಶ್ ಪುತ್ರನ್, ಶರ್ಮಿಳಾ ಬಂಗೇರ, ಮೀನಾಕ್ಷಿ ಎಚ್. ಸಾಲ್ಯಾನ್, ಮಾಜಿ ಕೌನ್ಸಿಲರ್ ಬಶೀರ್, ದಯಾನಂದ, ರವೀಂದ್ರ ರಾವ್ ಇನ್ನಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net