

ಉಡುಪಿ: ಕಕ್ಷಿದಾರರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುವ ವಕೀಲರ ಮೇಲೆಯೇ ಹಲ್ಲೆ ಹಾಗೂ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ ಸಮಾಜದಲ್ಲಿ ನ್ಯಾಯ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ವಕೀಲರ ಸಂದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಬೆಂಗಳೂರಿನ ವೈಟ್ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಕೀಲರ ಮೇಲೆ ನಡೆದ ಹಲ್ಲೆ ಖಂಡಿಸಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರ ಸಾಂಕೇತಿಕ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ವಕೀಲ ಅಖಿಲ್ ಹೆಗ್ಡೆ ಮಾತನಾಡಿದರು.
ಹಿರಿಯ ವಕೀಲ ಪ್ರದಿಪ್ ಕುಮಾರ್, ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಸಂಚಾಲಕ ಪ್ರೇಮ್ ಪ್ರಸಾದ್ ಶೆಟ್ಟಿ, ವಕೀಲರ ಸಂಘ ಉಡುಪಿ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಉಪಾಧ್ಯಕ್ಷ ದೇವದಾಸ ಶೆಟ್ಟಿಗಾರ್, ಆನಂದ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು.
ಕೋರ್ಟ್ ಕಲಾಪ ಬಹಿಷ್ಕಾರ
ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿದ ವಕೀಲರು, ವಕೀಲರ ಮೇಲಿನ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ ವಕೀಲರ ನಿಯೋಗ ರಾಜ್ಯದಲ್ಲಿ ಹೆಚ್ಚುತ್ತಿರುವ ವಕೀಲರ ಮೇಲಿನ ಹಲ್ಲೆ ಪ್ರಕರಣಗಳ ಹಿನ್ನಲೆಯಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ಆಗ್ರಹಿಸಿದೆ.