ಚಳವಳಿ ನೆಪದಲ್ಲಿ ಅರಾಜಕತೆ ಸೃಷ್ಟಿಗೆ ಯತ್ನ: ಸುನೀಲ್​ ಕುಮಾರ್​

ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬೃಹತ್​ ಪ್ರತಿಭಟನೆ ಉದ್ದೇಶಿಸಿ ಮಾಜಿ ಸಚಿವ ಹಾಗೂ ಶಾಸಕ ವಿ. ಸುನಿಲ್​ ಕುಮಾರ್​ ಮಾತನಾಡಿದರು.
ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬೃಹತ್​ ಪ್ರತಿಭಟನೆ ಉದ್ದೇಶಿಸಿ ಮಾಜಿ ಸಚಿವ ಹಾಗೂ ಶಾಸಕ ವಿ. ಸುನಿಲ್​ ಕುಮಾರ್​ ಮಾತನಾಡಿದರು.
Published on
ಉಡುಪಿ: ದೇಶದಲ್ಲಿ ಚಳವಳಿಯ ನೆಪದಲ್ಲಿ ಅರಾಜಕತೆ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದು, ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ವಿ. ಸುನಿಲ್​ ಕುಮಾರ್​ ಆರೋಪಿಸಿದರು. 
ನಗರದ ಜಟ್ಕಾ ಸ್ಟ್ಯಾಂಡ್​ನಲ್ಲಿ ಮಂಗಳವಾರ ಕಾಂಗ್ರೆಸ್​ ಹಾಗೂ ದೇಶವಿರೋಧಿ ಶಕ್ತಿಗಳ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬೃಹತ್​ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
ಚಳವಳಿಯ ಹೆಸರಿನಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ ಹಾಗೂ ಪೊಲೀಸರ ಮೇಲೆ ದಾಳಿ ನಡೆಸುವುದನ್ನು ಭಾರತೀಯ ಸಮಾಜ ಒಪ್ಪುವುದಿಲ್ಲ. ಜಂತರ್​ ಮಂತರ್​ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ ಹಾಗೂ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಭಾಷೆ ಬಳಸಲಾಗಿದೆ. ಇಂತಹ ಪ್ರತಿಭಟನೆಗಳ ಉದ್ದೇಶವೇ ದೇಶದಲ್ಲಿ ಅಶಾಂತಿ ಸೃಷ್ಟಿಸುವುದಾಗಿದೆ ಎಂದು ಹೇಳಿದರು.
ನಗರದ ಜಟ್ಕಾ ಸ್ಟ್ಯಾಂಡ್​ನಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಬೃಹತ್​ ಪ್ರತಿಭಟನೆ 

ಪ್ರಧಾನಿ ಮೋದಿ ಅಧಿಕಾರ ಅವಧಿಯಲ್ಲಿ ಭಾರತ ದೇಶದ ಪ್ರತಿಷ್ಠೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಿದೆ. ಆದರೆ, ದೇಶವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಕೆಲವು ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ. ಕಾಂಗ್ರೆಸ್​ಗೆ ಚುನಾವಣಾ ವ್ಯವಸ್ಥೆ, ಸಂಸತ್ತು ಹಾಗೂ ಕಾನೂನಿನ ಮೇಲೆ ನಂಬಿಕೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದೂ ಧರ್ಮದ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದಾರೆ. ಸದುದ್ದೇಶದಿಂದ ಪ್ರತಿಭಟನೆ ನಡೆಸುವವರ ಭಾಷೆ ಚೆನ್ನಾಗಿರುತ್ತದೆ. ಆದರೆ ಕೆಟ್ಟ ಉದ್ದೇಶ ಹೊಂದಿರುವವರ ಭಾಷೆ ಮತ್ತು ಶಬ್ದಗಳು ಅವಾಚ್ಯ ಹಾಗೂ ಭಾರತೀಯತೆಗೆ ಅಪಮಾನ ತರುವಂತಿರುತ್ತವೆ ಎಂದು ಹೇಳಿದರು. 
ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ಸರ್ಕಾರ ಸಮರ್ಥಿಸಿಲ್ಲ. ಪ್ರಕರಣ ಬೆಳಕಿಗೆ ಬಂದ ತಕ್ಷಣ ಮರುಪರೀಕ್ಷೆ ನಡೆಸಲಾಗಿತ್ತು. ಆದರೆ, ಇಂತಹ ಘಟನೆಗಳನ್ನು ನೆಪವಾಗಿಸಿಕೊಂಡು ವಿದ್ಯಾರ್ಥಿಗಳಿಗೆ ಸಂಬಂಧವೇ ಇಲ್ಲದ ಗುಂಪು ಹೋರಾಟ ನಡೆಸುತ್ತಿದೆ ಎಂದು ಕಿಡಿಕಾರಿದರು.
ಎಲ್ಲವನ್ನು ಮೋದಿಯೊಬ್ಬರೇ ಮಾಡುತ್ತಾರೆ ಎಂದು ಕುಳಿತುಕೊಂಡರೆ ಸಾಧ್ಯವಿಲ್ಲ. ಸಮಾಜವಿರೋಧಿ ಹಾಗೂ ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸುವ ದೇಶವಿರೋಧಿ ಚಟುವಟಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಶಾಸಕರಾದ  ಗುರ್ಮೆ ಸುರೇಶ್​ ಶೆಟ್ಟಿ, ಯಶ್ಪಾಲ್‌ ಸುವರ್ಣ, ಎ. ಕಿರಣ್​ ಕುಮಾರ್​ ಕೊಡ್ಗಿ, ಗುರುರಾಜ ಗಂಟಿಹೊಳೆ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಮಾತನಾಡಿದರು. ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್​ ಹೆಗ್ಡೆ, ಮುಖಂಡರಾದ ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಉದಯ ಶೆಟ್ಟಿ, ಶ್ರೀಕಾಂತ್​ ನಾಯಕ್​ ಅಲೆವೂರು, ದಿನಕರ್​ ಬಾಬು, ಸುರೇಶ್​ ನಾಯಕ್​ ಕುಯಿಲಾಡಿ, ಲಾಲಾಜಿ ಆರ್​. ಮೆಂಡನ್​, ಪ್ರಥ್ವಿರಾಜ್​ ಶೆಟ್ಟಿ ಬಿಲ್ಲಾಡಿ, ಶ್ಯಾಮಲ್​ ಎಸ್​. ಕುಂದರ್​, ಉದಯ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net