ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಆಕ್ರೋಶ

ಮೂಳೂರು ಎಸ್​ಟಿಪಿ ಘಟಕ ವಿರೋಧಿಸಿ ಗ್ರಾಮಸ್ಥರು ತಹಸೀಲ್ದಾರ್​ ಅನಂತ ಶಂಕರ ಬಿ. ಹಾಗೂ ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಪ್ರಭಾತ್​ ಮೂಳೂರು, ಪುರುಷೋತ್ತಮ ಸಾಲ್ಯಾನ್​, ಸತೀಶ್ಚಂದ್ರ ಮೊದಲಾದವರಿದ್ದರು.
ಮೂಳೂರು ಎಸ್​ಟಿಪಿ ಘಟಕ ವಿರೋಧಿಸಿ ಗ್ರಾಮಸ್ಥರು ತಹಸೀಲ್ದಾರ್​ ಅನಂತ ಶಂಕರ ಬಿ. ಹಾಗೂ ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಪ್ರಭಾತ್​ ಮೂಳೂರು, ಪುರುಷೋತ್ತಮ ಸಾಲ್ಯಾನ್​, ಸತೀಶ್ಚಂದ್ರ ಮೊದಲಾದವರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೂಳೂರು ಎಸ್​.ಟಿ.ಪಿ. ನಿಮಾರ್ಣ ವಿರೋಧ ಸಮಿತಿಯಿಂದ ಶಾಸಕರಿಗೆ ಮನವಿ
  • ಸ್ಥಾಪಿತ ಶಕ್ತಿಗಳ ಕೈವಾಡ ಶಂಕೆ
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಾಪು ಪುರಸಭೆ ವತಿಯಿಂದ ಮೂಳೂರು ಗ್ರಾಮದಲ್ಲಿ ನಿರ್ಮಿಸಲು ಹೊರಟಿರುವ ಕೊಳಚೆ ನೀರು ಶುದ್ಧೀಕರಣ ಘಟಕ ನಿಮಾರ್ಣ ವಿರೋಧಿಸಿ ಮೂಳೂರು ಎಸ್​.ಟಿ.ಪಿ. ನಿರ್ಮಾಣ ವಿರೋಧ ಸಮಿತಿ ವತಿಯಿಂದ ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ತಹಸೀಲ್ದಾರ್​ ಅನಂತಶಂಕರ ಬಿ., ಕಾಪು ಪುರಸಭಾಧ್ಯಕ್ಷೆ ಮೋಹಿನಿ ಶೆಟ್ಟಿ ಹಾಗೂ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರಿಗೆ ಮನವಿ ನೀಡಲಾಯಿತು.

ಏಕಾಏಕಿ ಜಮೀನು ಗುರುತು

ಮೂಳೂರು ಬಬ್ಬರ್ಯ ದೈವಸ್ಥಾನದ ಬಳಿ ಪ್ರಾರ್ಥನೆ ಸಲ್ಲಿಸಿ, ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿದ ಗ್ರಾಮಸ್ಥರು, ಮೂಳೂರು ಗ್ರಾಮದ ಸರ್ವೇ ನಂಬ್ರ 115ರಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಜಮೀನನ್ನು ಗೊತ್ತುಪಡಿಸಲಾಗಿದೆ. ಜನವಸತಿ ಪ್ರದೇಶವಾಗಿರುವ ಇಲ್ಲಿ ಎಸ್​ಟಿಪಿ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಾಪಿತ ಶಕ್ತಿಗಳ ಕೈವಾಡ ಶಂಕೆ

ಕೇವಲ ಕಾಪು ಪೇಟೆಯ ಕೊಳಚೆಯನ್ನು ಪೇಟೆಯಿಂದ ದೂರದಲ್ಲಿರುವ ವಸತಿ ಪ್ರದೇಶಕ್ಕೆ ತಂದು ಸುರಿದು, ಶುದ್ಧೀಕರಣಗೊಳಿಸುವುದರಿಂದ ಪರಿಸರ ಹಾನಿ ಜತೆಗೆ ಸುತ್ತಮುತ್ತಲಿನ ಜನರಿಗೆ ಆರೋಗ್ಯ ಸಂಬಂಧಿ ತೊಂದರೆಗಳು ಬರುವ ಅಪಾಯವಿದೆ. ಈ ಪ್ರದೇಶ ಸಮುದ್ರಕ್ಕೂ ಹತ್ತಿರವಿದ್ದು, ಸಮುದ್ರದ ಮೀನು ಸಹಿತ ಜಲಚರಗಳಿಗೂ ಅಪಾಯವುಂಟಾಗುವ ಭೀತಿಯಿದೆ. ಸುತ್ತಲಿನ ಕೆರೆ, ಬಾವಿಗಳ ನೀರು ಮಲಿನಗೊಂಡು ಪರಿಸರ ಕಲುಷಿತಗೊಂಡು ಜನಜೀವನಕ್ಕೆ ತೊಂದರೆಯಾಗಲಿದೆ. ಈ ಹಿಂದೆ ನಮ್ಮ ವಿರೋಧದ ಕಾರಣದಿಂದಾಗಿ ಪ್ರಸ್ತಾವಿತ ಜಾಗವನ್ನು ಕೈಬಿಡಲಾಗಿತ್ತು. ಈಗ ಮತ್ತೆ ಅದೇ ಪರಿಸರದ ಜಾಗವನ್ನು ಮಂಜೂರುಗೊಳಿಸಿರುವುದರ ಹಿಂದೆ ಸ್ಥಾಪಿತ ಶಕ್ತಿಗಳ ಕೈವಾಡವಿದೆ. ತಕ್ಷಣ ಇದನ್ನು ರದ್ಧುಪಡಿಸಬೇಕು. ಇಲ್ಲದಿದ್ದಲ್ಲಿ ಮುಂದೆ ಚುನಾವಣಾ ಬಹಿಷ್ಕಾರದ ಬಗ್ಗೆ ಯೋಚಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಸದಸ್ಯರಾದ ಸತೀಶ್ಚಂದ್ರ ಮೂಳೂರು, ಮಹಮ್ಮದ್​ ಆಸೀಫ್​, ಮನೋಹರ ಅಡ್ಯಂತಾಯ ಬಿಕ್ರಿಗುತ್ತು, ಪ್ರಭಾತ್​ ಶೆಟ್ಟಿ ಮೂಳೂರು, ಪ್ರಕಾಶ್​ ಅಂಚನ್​, ಅಶೋಕ್​ ಪುತ್ರನ್​, ದೀಪಾ ಶೆಟ್ಟಿ, ಚಿತ್ತನ್​ ಮೂಳೂರು, ಪುರುಷೋತ್ತಮ ಸಾಲಿಯಾನ್​, ಶಾಂಭವಿ ಕುಲಾಲ್​ ಮತ್ತಿತರರಿದ್ದರು.

ಪುರಸಭೆಗೆ ಕೊಳಚೆ ನೀರು ಶುದ್ಧೀಕರಣ ಘಟಕ ಅತ್ಯಗತ್ಯ. ಆದರೆ ಇದರಿಂದ ಸ್ಥಳೀಯರಿಗೆ ತೊಂದರೆಯಾಗುವ ಭೀತಿಯಿದೆ ಎಂಬ ದೂರುಗಳು ಕೇಳಿಬರುತ್ತಿರುವ ಪ್ರದೇಶದಲ್ಲಿ ಅದನ್ನು ನಿರ್ಮಿಸುವುದು ಸರಿಯಲ್ಲ. ಸ್ಥಳೀಯರ ವಿರೋಧವಿರುವುದರಿಂದ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ, ಪರ್ಯಾಯ ಸ್ಥಳವನ್ನು ಆಯ್ಕೆ ಮಾಡಿ ಅಲ್ಲಿ ಎಸ್​.ಟಿ.ಪಿ. ನಿರ್ಮಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.

| ಗುರ್ಮೆ ಸುರೇಶ್​ ಶೆಟ್ಟಿ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net