ಉಡುಪಿ ಸಂಪೂರ್ಣ ಸಾಕ್ಷರ ಜಿಲ್ಲೆ ಘೋಷಣೆಗೆ ಪ್ರಸ್ತಾವನೆ

AI ಚಿತ್ರ
AI ಚಿತ್ರ
Published on
ಉಡುಪಿ: ಶೈಕ್ಷಣಿಕ ಕ್ಷೇತ್ರದಲ್ಲಿ ಈಗಾಗಲೇ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯು ಇದೀಗ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳು ಹಾಗೂ ನಗರ ಸ್ಥಳಿಯ ಸಂಸ್ಥೆಗಳು 'ಸಂಪೂರ್ಣ ಸಾಕ್ಷರ' ಎಂದುಇಜ್ಜಿ ದೃಢೀಕರಿಸಲ್ಪಟ್ಟಿದ್ದು, ಸಂಪೂರ್ಣ ಸಾಕ್ಷರ ಜಿಲ್ಲೆ ಎಂಬುದಾಗಿ ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸಾಕ್ಷರತಾ ಆಂದೋಲನ ಹಾಗೂ ನಿರಂತರ ಸರ್ವೇಕ್ಷಣೆಯ ಫಲವಾಗಿ ಜಿಲ್ಲೆಯು ಶೇ. 95ಕ್ಕೂ ಹೆಚ್ಚು ಸಾಕ್ಷರತೆ ಸಾಧಿಸಿದೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ಶೇ. 95 ರಷ್ಟು ಸಾಕ್ಷರತೆ ಸಾಧಿಸಿದರೆ ಸಂಪೂರ್ಣ ಸಾಕ್ಷರತೆ ಎಂದು ದೃಢೀಕರಿಸಬಹುದಾಗಿದೆ.

ಜಿಲ್ಲೆಯ ಒಟ್ಟು 155 ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣ ಸಾಕ್ಷರತಾ ಗ್ರಾಮ ಪಂಚಾಯಿತಿಗಳೆಂದು ದೃಢೀಕರಿಸಲಾಗಿದೆ. ಕುಂದಾಪುರ ತಾಲೂಕಿನಲ್ಲಿ 45 ಗ್ರಾಮ ಪಂಚಾಯಿತಿ, ಬ್ರಹ್ಮಾವರ ತಾಲೂಕಿನಲ್ಲಿ 27 ಗ್ರಾಮ ಪಂಚಾಯಿತಿ, ಕಾರ್ಕಳ ತಾಲೂಕಿನಲ್ಲಿ 27 ಗ್ರಾಮ ಪಂಚಾಯಿತಿ, ಕಾಪು ತಾಲೂಕಿನಲ್ಲಿ 16 ಗ್ರಾಮ ಪಂಚಾಯಿತಿ, ಉಡುಪಿ ತಾಲೂಕಿನಲ್ಲಿ 16 ಗ್ರಾಮ ಪಂಚಾಯಿತಿ, ಬೈಂದೂರು ತಾಲೂಕಿನಲ್ಲಿ 15 ಗ್ರಾಮ ಪಂಚಾಯಿತಿ, ಹೆಬ್ರಿ ತಾಲೂಕಿನಲ್ಲಿ 9 ಗ್ರಾಮ ಪಂಚಾಯಿತಿ, ಉಡುಪಿ ನಗರಸಭೆ , ಕಾರ್ಕಳ, ಕುಂದಾಪುರ ಮತ್ತು ಕಾಪು ಪುರಸಭೆ, ಬೈಂದೂರು ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತಿಗಳಲ್ಲಿ ಅಧಿಕಾರಿಗಳಿಂದ ದೃಢೀಕರಣ ಹಾಗೂ ಅಗತ್ಯ ದತ್ತಾಂಶಗಳನ್ನು ಪಡೆದುಕೊಂಡು ಈ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ.

5,885 ಅನಕ್ಷರಸ್ಥರಿಗೆ ತರಬೇತಿ
2022-23 ನೇ ಸಾಲಿನಿಂದ ಸತತವಾಗಿ ಅನುಷ್ಠಾನಗೊಳಿಸಲಾದ ವಿವಿಧ ಯೋಜನೆಗಳ ಮೂಲಕ ಜಿಲ್ಲೆಯಲ್ಲಿ ಒಟ್ಟು 5,885 ಅನಕ್ಷರಸ್ಥರನ್ನು ಗುರುತಿಸಿ, ಅವರಿಗೆ ಅಕ್ಷರಾಭ್ಯಾಸ ಮಾಡಿಸಲಾಗಿದೆ.
ಬೋಧನೆಗಾಗಿ ವಿಶೇಷವಾಗಿ ಸಿದ್ಧಪಡಿಸಲಾದ ಸಂಪನ್ಮೂಲ ಪುಸ್ತಕ ನೀಡಲಾಗಿದೆ. ಸುಮಾರು 200 ಗಂಟೆ ಬೋಧಕರಿಂದ ತರಬೇತಿ ನೀಡಲಾಗಿದೆ.

ಎಫ್​ಎಲ್​ಎನ್​ಎಟಿ ಪರೀಕ್ಷೆ ಯಶಸ್ವಿ
ತರಬೇತಿಯ ಬಳಿಕ ಕಲಿಕಾರ್ಥಿಗಳಿಗಾಗಿ ಎಫ್​ಎಲ್​ಎನ್​ಎಟಿ ಎಂಬ ಸರಳ ಸಾಕ್ಷರತಾ ಮೌಲ್ಯಮಾಪನ ಪರೀಕ್ಷೆಯನ್ನು ನಡೆಸಲಾಗಿದೆ. ಸಾಕ್ಷರತಾ ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲಾ ನವಸಾಕ್ಷರರು ಯಶಸ್ವಿಯಾಗಿ ಉತ್ತೀರ್ಣರಾಗಿದ್ದು, ಸರಳವಾಗಿ ಓದುವ, ಬರೆಯುವ ಹಾಗೂ ಸಹಿ ಮಾಡುವ ಸಾಮರ್ಥ್ಯವನ್ನು ಸಾಧಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net