ಸಮಸ್ಯೆಗಳಿಗೆಲ್ಲ ಪರಿಹಾರದ ಭರವಸೆ

ಮೂಲ್ಕಿ ನಗರ ಪಂಚಾಯಿತಿ
ಮೂಲ್ಕಿ ನಗರ ಪಂಚಾಯಿತಿ
Published on
ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಮುಂಬರುವ 2026-27ನೇ ಸಾಲಿನ ಆಯವ್ಯಯದ ಹಿನ್ನೆಲೆಯಲ್ಲಿ ಶನಿವಾರ ಮೂಲ್ಕಿ ನಗರ ಪಂಚಾಯಿತಿಯ ಸಮುದಾಯ ಭವನದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು. ಸಾರ್ವಜನಿಕರು ಮತ್ತು ಮಾಜಿ ಸದಸ್ಯರಿಂದ ಕೇಳಿಬಂದ ಸಾಲು ಸಾಲು ದೂರುಗಳಿಗೆ ಉತ್ತರಿಸಿದ ಮುಖ್ಯಾಧಿಕಾರಿ ಮಧುಕರ್ ಕೆ., ಲಭ್ಯವಿರುವ ಅನುದಾನಗಳನ್ನು ಕ್ರೋಡೀಕರಿಸಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ನಪಂ ಲೆಕ್ಕಾಧಿಕಾರಿ ಸ್ವಾತಿ ಪೈ ಆಯವ್ಯಯದ ಲೆಕ್ಕಾಚಾರ ಮಂಡಿಸಿ ಸಮಾಲೋಚನೆಗೆ ಮನವಿ ಮಾಡಿದಾಗ ನಗರ ಪಂ ಮಾಜಿ ಸದಸ್ಯರು ಮತ್ತು ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.

ಮನೆ ರಿಪೇರಿ ಅನುದಾನ

ನಗರೋತ್ಥಾನ ಇಲಾಖೆಯಿಂದ ಮನೆ ರಿಪೇರಿಗಾಗಿ ಕಳೆದ 4 ವರ್ಷಗಳಿಂದ ಅನುದಾನ ಸಿಕ್ಕಿಲ್ಲ ಎಂದು ಮಾಜಿ ಸದಸ್ಯ ಪುತ್ತುಬಾವ ದೂರಿದರು. ಈ ಬಗ್ಗೆ ತನಿಖೆ ನಡೆಸಿ ಶೀಘ್ರವೇ ಅನುದಾನ ಬಿಡುಗಡೆಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದರು. ಒದಗಿಸಲು ತೀರ್ಮಾನಿಸಲಾಯಿತು.

ಮಳೆಗಾಲದ ಮುನ್ನೆಚ್ಚರಿಕೆ

ಮಳೆಗಾಲಕ್ಕೆ ಮುನ್ನ ನಗರದ ಚರಂಡಿ ಹಾಗೂ ತೋಡುಗಳ ಹೂಳೆತ್ತುವಂತೆ ಸುಭಾಷ್ ಶೆಟ್ಟಿ ಮತ್ತು ಬಾಲಚಂದ್ರ ಕಾಮತ್ ಮನವಿ ಮಾಡಿದರು.

ಚರಂಡಿ ದುರಸ್ತಿ

ಲಿಂಗಪ್ಪಯ್ಯಕಾಡು ಚರಂಡಿ ದುರಸ್ತಿಗೆ ಬಗ್ಗೆ ಭೀಮಾಶಂಕರ್ ಪ್ರಶ್ನೆಗೆ, ಈ ಪ್ರದೇಶವನ್ನು ಸ್ಲಂ ಬೋರ್ಡ್ ವ್ಯಾಪ್ತಿಗೆ ಸೇರಿಸಿ ಸಮಗ್ರ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಪಡೆಯಲು ಪ್ರಯತ್ನಿಸಲಾಗುವುದು ಎಂದು ಮುಖ್ಯಾಧಿಕಾರಿ ು ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷ ಸತೀಶ್ ಅಂಚನ್, ವಿಎ ಯಸೀನಾ, ಇಂಜಿನಿಯರ್ ತುಳಸೀದಾಸ್, ಸಾರ್ವಜನಿಕರು ಪಾಲ್ಗೊಂಡಿದ್ದರು. ಭರತಾಂಜಲಿ ವಂದಿಸಿದರು.

ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಸಜ್ಜು

ಮಾರ್ಚ್ 15ರ ನಂತರ ನಗರ ವ್ಯಾಪ್ತಿಯಲ್ಲಿ ಏಕ ಬಳಕೆಯ ಪ್ಲಾಸ್ಟಿಕನ್ನು ಸಂಪೂರ್ಣ ನಿಷೇಧಿಸಲಾಗುವುದು. ವ್ಯಾಪಾರಿಗಳು ಅಷ್ಟರೊಳಗೆ ತಮ್ಮಲ್ಲಿರುವ ಪ್ಲಾಸ್ಟಿಕ್ ದಾಸ್ತಾನು ವಿಲೇವಾರಿ ಮಾಡಲು ಸೂಚಿಸಲಾಗಿದೆ ಎಂದು ಬಾಲಚಂದ್ರ ಕಾಮತ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಕುಡಿಯುವ ನೀರಿನ ಸಮಸ್ಯೆ

ಲಿಂಗಪ್ಪಯ್ಯಕಾಡು ಪ್ರದೇಶದಲ್ಲಿ ನೀರಿನ ತಾರತಮ್ಯವಾಗುತ್ತಿದೆ ಎಂಬ ಭೀಮಾಶಂಕರ್ ಆರ್.ಕೆ. ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಪ್ರಸ್ತುತ ನೀರಿನ ಅಭಾವ ಇರುವುದರಿಂದ ದಿನಬಿಟ್ಟು ದಿನ ನೀರು ಪೂರೈಕೆ ಮಾಡಲಾಗುವುದು ಮತ್ತು ಟ್ಯಾಂಕರ್ ಮೂಲಕ ನೀರು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬೀದಿ ನಾಯಿಗಳ ಹಾವಳಿಗೆ ಬ್ರೇಕ್

ನಗರದಲ್ಲಿ 100ಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮುಂದಿನ ತಿಂಗಳಿಂದ ಸಂತಾನಶಕ್ತಿ ಹರಣ ಚಿಕಿತ್ಸೆ ಮತ್ತು ರೇಬೀಸ್ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಂದು ಮಧುಕರ್ ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net