ಆರ್ಥಿಕ, ಸಾಮಾಜಿಕವಾಗಿ ಸದೃಢವಾಗಲಿ ಮಹಿಳೆ

ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ನ್ಯಾಯಾಧೀಶ ನಿತಿನ್​ ವೈ. ರಾವ್​, ಸುಧಾಕರ್​ ನಾಯಕ್​, ಪ್ರೇಮಮೂರ್ತಿ ಕೆ. ಹಾಗೂ ವಿವಿಧ ಅಧಿಕಾರಿಗಳಿದ್ದರು.
ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ನ್ಯಾಯಾಧೀಶ ನಿತಿನ್​ ವೈ. ರಾವ್​, ಸುಧಾಕರ್​ ನಾಯಕ್​, ಪ್ರೇಮಮೂರ್ತಿ ಕೆ. ಹಾಗೂ ವಿವಿಧ ಅಧಿಕಾರಿಗಳಿದ್ದರು.
Published on

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆಶಯ

* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಉಡುಪಿ: ದುರ್ಬಲ, ಶೋಷಿತ ಹಾಗೂ ಅಸಹಾಯಕ ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢಗೊಳಿಸಲು ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸಬೇಕು. ಮಹಿಳೆಯರು ಸ್ವಯಂ ಉದ್ಯೋಗದಿಂದ ಸ್ವಾವಲಂಬಿಗಳಾಗುವಂತೆ ನೋಡಿಕೊಳ್ಳಬೇಕು. ಅವರ ಸುರಕ್ಷತೆಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಇಲಾಖಾ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಆ.4) ಆಯೋಜಿಸಿದ್ದ ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಆಂತರಿಕ ದೂರು ಸಮಿತಿ

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳಾದ ಚೇತನಾ, ಧನಶ್ರೀ, ಉದ್ಯೋಗಿನಿ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸುರಕ್ಷತೆಯ ಖಾತ್ರಿಗಾಗಿ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ರಚಿಸಬೇಕು. ಯಾವುದೇ ದೂರು ಬಂದಾಗ ವಿಚಾರಣೆ ನಡೆಸಿ ನೊಂದ ಮಹಿಳೆಯರಿಗೆ ನ್ಯಾಯ, ಪರಿಹಾರ ನೀಡಲು ಸಮಿತಿ ಮುಂದಾಗಬೇಕು. ಜಿಲ್ಲೆಯಲ್ಲಿ 3,149 ಸಂಸ್ಥೆಗಳಿದ್ದು, ಕೇವಲ 789 ಸಂಸ್ಥೆಗಳಲ್ಲಿ ಮಾತ್ರ ಆಂತರಿಕ ಸಮಿತಿ ರಚಿಸಲಾಗಿದೆ. ಉಳಿದ ಸಂಸ್ಥೆಗಳಲ್ಲಿಯೂ ಸಹ ಕೂಡಲೇ ಸಮಿತಿ ರಚನೆಗೆ ಕ್ರಮ ಕೈಗೊಳ್ಳಬೇಕು ಎಂದರು.

ಕಾನೂನು ನೆರವು ನೀಡಿ

ಕೌಟುಂಬಿಕ ದೌರ್ಜನ್ಯ, ವಿಚ್ಛೇದನ, ಬಹು ಪತ್ನಿತ್ವ ಸೇರಿದಂತೆ ವಿವಿಧ ಸಮಸ್ಯೆಯಿಂದ ನೊಂದು ಬರುವ ಮಹಿಳೆಯರಿಗೆ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಗಳಲ್ಲಿ ಸಹಕರಿಸಬೇಕು. ಆಪ್ತ ಸಮಾಲೋಚನೆ ನಡೆಸಿ ಅಗತ್ಯ ಕಾನೂನು ನೆರವು ಒದಗಿಸಬೇಕು. ಹಿಂಸೆ ಹಾಗೂ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ವೈದ್ಯಕೀಯ ನೆರವು, ಪೊಲೀಸ್​ ಸಹಾಯ ಮತ್ತು ಕಾನೂನು ಸಲಹೆಗಳನ್ನು ಒಂದೇ ಸೂರಿನಡಿ 'ಸಖಿ ಒನ್​ ಸ್ಟಾಪ್​ ಸೆಂಟರ್​' ನೀಡುತ್ತಿದೆ. ಇದರ ಸಹಾಯವಾಣಿ ಸಂಖ್ಯೆ ನಿರಂತರ ಚಾಲ್ತಿಯಲ್ಲಿರಬೇಕು.

ಹೆರಿಗೆಗೆ ಧನ ಸಹಾಯ

ಕಳೆದ ಏಪ್ರಿಲ್​ನಿಂದ ಜೂನ್​ವರೆಗೆ ಕೌಟುಂಬಿಕ ದೌರ್ಜನ್ಯ, ದೈಹಿಕ ಹಲ್ಲೆ, ಅಸುರಕ್ಷಿತ ಪಾಲನೆ, ಮಾನಸಿಕ ಕಿರುಕುಳ, ಜಾಗದ ತಕರಾರು, ಅಸಹಾಯಕತೆಗೆ ಸಂಬಂಧಿಸಿ 73 ಪ್ರಕರಣ ದಾಖಲಾಗಿದ್ದು, 46 ಪ್ರಕರಣ ಇತ್ಯರ್ಥಗೊಂಡಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ 1, ಕಾನೂನು ಸಮಾಲೋಚನೆಯಲ್ಲಿ 9 ಹಾಗೂ 17 ಆಪ್ತ ಸಮಾಲೋಚನೆಯ ಹಂತದಲ್ಲಿದೆ. ಮೊದಲ ಹೆರಿಗೆಯಲ್ಲಿ ಹೆಣ್ಣು ಮಗುವಾದರೆ 5 ಸಾವಿರ ರೂ., 2ನೇ ಹೆರಿಗೆಯಲ್ಲಿ ಹೆಣ್ಣು ಮಗುವಾದರೆ 6 ಸಾವಿರ ರೂ. ಧನಸಹಾಯವನ್ನು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ನೀಡಲಾಗುತ್ತಿದೆ. ಅರ್ಹರು ಈ ಯೋಜನೆಯ ಸೌಲಭ್ಯ ಪಡೆಯಬಹುದು ಎಂದು ಡಿಸಿ ಸ್ವರೂಪಾ ತಿಳಿಸಿದರು.
ಸಭೆಯಲ್ಲಿ ಹಿರಿಯ ಸಿವಿಲ್​ ನ್ಯಾಯಾಧೀಶ ನಿತಿನ್​ ವೈ. ರಾವ್​, ಎಎಸ್ಪಿ ಸುಧಾಕರ್​ ನಾಯಕ್​, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮಮೂರ್ತಿ ಕೆ., ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಾಂತ್ವನ ಕೇಂದ್ರದ ಮುಖ್ಯಸ್ಥರು ಉಪಸ್ಥಿತರಿದ್ದರು.

ಮಕ್ಕಳಿಗೆ ನೀಡಿ ಪೌಷ್ಟಿಕ ಆಹಾರ

ಜಿಲ್ಲೆಯಲ್ಲಿ 34,149 ಮಕ್ಕಳು ಅಂನಗವಾಡಿಗೆ ದಾಖಲಾಗಿದ್ದು, 34,006 ಮಕ್ಕಳು ಸಾಮಾನ್ಯ ತೂಕ ಹೊಂದಿದ್ದಾರೆ. 123 ಮಕ್ಕಳು ಸಾಧಾರಣ ತೂಕ ಹಾಗೂ 20 ಮಕ್ಕಳು ತೀವ್ರ ಅಪೌಷ್ಟಿಕತೆ ಹೊಂದಿದ ಮಕ್ಕಳಿದ್ದಾರೆ. ಸಕಾಲಕ್ಕೆ ಎಲ್ಲರ ಆರೋಗ್ಯ ತಪಾಸಣೆ ನಡೆಸಿ, ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು. ಹೊರ ಜಿಲ್ಲೆಯ ಮಕ್ಕಳಲ್ಲಿ ಪೌಷ್ಟಿಕತೆಯ ಕೊರತೆ ಕಂಡುಬಂದಿದ್ದು ಅವರ ನಿಗಾ ವಹಿಸಬೇಕು. ಜಿಲ್ಲೆಯಲ್ಲಿ 1,222 ಅಂಗನವಾಡಿ ಕೇಂದ್ರವಿದ್ದು, ಅವುಗಳಲ್ಲಿ 1,061 ಸ್ವಂತ ಕಟ್ಟಡ, 42 ಬಾಡಿಗೆ ಕಟ್ಟಡ ಹಾಗೂ ಇನ್ನುಳಿದವು ವಿವಿಧ ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 9 ಹೊಸ ಕಟ್ಟಡಗಳಿಗೆ ಮಂಜೂರಾತಿ ದೊರಕಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲ ಅಂಗನವಾಡಿಗಳಿಗೆ ಆವರಣ ಗೋಡೆ, ಮೂಲ ಸೌಕರ್ಯ ಕಲ್ಪಿಸಬೇಕು. ಆಧಾರ್​ ಕಾರ್ಡ್​ ಇಲ್ಲದ 5 ವರ್ಷದೊಳಗಿನ ಮಕ್ಕಳಿಗೆ ಬಾಲ ಆಧಾರ್​ ನೋಂದಣಿಗೆ ಕೂಡಲೇ ಶಿಬಿರ ಆಯೋಜಿಸಿಬೇಕು ಎಂದು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
"

ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಒಟ್ಟು 47 ನಿವಾಸಿನಿಯರಿದ್ದಾರೆ. ಅವರ ಆರೋಗ್ಯ ತಪಾಸಣೆ, ಔಷದೋಪಚಾರಕ್ಕಾಗಿ 'ನಮ್ಮ ಕ್ಲಿನಿಕ್​'ನ ಸಿಬ್ಬಂದಿಯನ್ನು ಶುಶ್ರೂಷಕರಾಗಿ ವಾರದಲ್ಲಿ 2 ದಿನ ನಿಯೋಜಿಸಬೇಕು. ಅಲ್ಲಿ ಪದವಿ ಶಿಕ್ಷಣ ಪೂರೈಸಿದ ಹೆಣ್ಣು ಮಕ್ಕಳಿದ್ದರೆ ಕೌಶಲ ತರಬೇತಿ ನೀಡಿ ಅವರೂ ಅರ್ಹ ಉದ್ಯೋಗ ಹೊಂದುವಂತಾಗಬೇಕು. ಲಿಂಗ ತಾರತಮ್ಯ ಹೋಗಲಾಡಿಸಲು 'ಬೇಟಿ ಬಚಾವೋ ಬೇಟಿ ಪಢಾವೋ' ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು.

— ಸ್ವರೂಪಾ ಟಿ.ಕೆ. ಜಿಲ್ಲಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net