ಅಂಗನವಾಡಿ ಕೇಂದ್ರಗಳಲ್ಲಿ ಅಲ್ಪಸಂಖ್ಯಾತರ ನೇಮಕಕ್ಕೆ ಆದ್ಯತೆ ನೀಡಿ

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್​ ಅಹ್ಮದ್​.
minority commission
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್​ ಅಹ್ಮದ್​ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Published on: 

ಉಡುಪಿ: ಜಿಲ್ಲೆಯಲ್ಲಿ 1522 ಅಂಗನವಾಡಿಗಳಿದ್ದು, ಇವುಗಳಲ್ಲಿ 155 ಕೇಂದ್ರ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಇಂಥ ಕೇಂದ್ರಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದವರೇ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ನೇಮಿಸಿಕೊಳ್ಳಬೇಕು. ಸ್ಥಳಿಯ ಅರ್ಹರನ್ನು ಮನವೊಲಿಸಿ ಹುದ್ದೆಗಳ ಭರ್ತಿಗೆ ಕ್ರಮವಹಿಸಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್​ ಅಹ್ಮದ್​ ಸೂಚನೆ ನೀಡಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಣ ಇಲ್ಲದಿದ್ದಲ್ಲಿ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅಲ್ಪಸಂಖ್ಯಾತ ಸಮುದಾಯದಲ್ಲಿ ಮುಸ್ಲಿಂ, ಕ್ರಿಶ್ಚಿಯನ್​, ಸಿಖ್​, ಜೈನ, ಬುದ್ಧ ಹಾಗೂ ಪಾರ್ಸಿ ಸಮುದಾಯಗಳ ಮಕ್ಕಳು ಶಿಕ್ಷಣದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಗುಣಮಟ್ಟದ ಶಿಕ್ಷಣವನ್ನು ನೀಡಿದಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತದೆ. ಇದಕ್ಕೆ ಒತ್ತು ನೀಡಬೇಕು. ಇದರ ಜೊತೆಯಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದರು.

ಓವರ್​ಸೀಸ್​- ಎಂಪ್ಲಾಯ್​ಮೆಂಟ್​ ಸೆಲ್​ ಮಾಹಿತಿ ನೀಡಿ

ಜಿಲ್ಲೆಯಲ್ಲಿ 7 ಸರ್ಕಾರಿ, 4 ಅನುದಾನಿತ ಹಾಗೂ 1 ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿದ್ದು, ಸಂಸ್ಥೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲ್ಯಾಭಿವೃದ್ಧಿ ತರಬೇತಿ ನೀಡಬೇಕು. ಹೊರ ದೇಶಗಳಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಓವರ್​ಸೀಸ್​- ಎಂಪ್ಲಾಯ್​ಮೆಂಟ್​ ಸೆಲ್​ ಮಾಹಿತಿ ಪಡೆದು ಸ್ಥಳಿಯವಾಗಿ ಪ್ರಚಾರ ನೀಡಬೇಕು. ಇದರಿಂದ ಸ್ಥಳಿಯರು ವಿದೇಶದಲ್ಲಿ ಹೆಚ್ಚಿನ ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ ಎಂದರು.

ಜಿಲ್ಲೆಯಲ್ಲಿ 15 ವಿಶೇಷ ಚೇತನರ ಶಾಲೆಗಳು ಕಾರ್ಯ ನಿರ್ವಹಿಸುತ್ತಿದೆ. ಈ ಶಾಲೆಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವಂತಗಬೇಕು. ವಿಶೇಷ ಚೇತನರಲ್ಲಿ ಅದ್ಭುತ ಕೌಶಲ್ಯಗಳಿದ್ದು, ಸೂಕ್ತ ವೇದಿಕೆ ಸಿಗುವಂತಾಗಬೇಕು ಎಂದರು. ಬೀದಿ ಬದಿ ವ್ಯಾಪಾರಿಗಳ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕು. ಈಗಾಗಲೇ 5,500 ಬೀದಿ ಬದಿ ವ್ಯಾಪಾರಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಿಗೆ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಅನುವು ಮಾಡಿಕೊಡಲಾಗುತ್ತಿದೆ. ಮೊದಲ ಹಂತದಲ್ಲಿ 10,000, ಎರಡನೇ 25,000 ಮತ್ತು ಮೂರನೇ ಹಂತದಲ್ಲಿ 50,000 ರೂ. ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು.

ಕೃಷಿ ಇಲಾಖೆಯ ವತಿಯಿಂದ ಅಲ್ಪಸಂಖ್ಯಾತ ಸಮುದಾಯದವರಿಗೆ 9 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿವೆ. 5804 ಅಲ್ಪಸಂಖ್ಯಾತ ಸಮುದಾಯದವರು ಕೃಷಿ ಚಟುವಟಿಕೆಯಲ್ಲಿ ಕೈಗೊಂಡಿದ್ದು, ಇದರಲ್ಲಿ 3,339 ಕೃಷಿ ಭೂಮಿ ಹೊಂದಿದ್ದಾರೆ. 409 ಅಲ್ಪಸಂಖ್ಯಾತ ಸಮುದಾಯದವರು ಕೃಷಿ ಯೋಜನೆಗಳ ಸೌಲಭ್ಯ ಪಡೆದಿದ್ದು, ತೋಟಗಾರಿಕೆ ಇಲಾಖೆಯಡಿ ಅಲ್ಪಸಂಖ್ಯಾತ ಸಮುದಾಯಕ್ಕೆ 9 ಯೋಜನೆಗಳನ್ನು ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ 151 ಗುರಿಗೆ 142 ಮಂದಿ ಪ್ರಯೋಜನ ಪಡೆದಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಜನರು ಇಲಾಖೆಯ ಯೋಜನೆಯ ಲಾಭ ಪಡೆಯುವಂತೆ ಆಗಬೇಕು ಎಂದರು.

ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತ ಸಮುದಾಯದ 8563 ಫಲನುಭವಿಗಳು ಬ್ಯಾಂಕ್​ಗಳಲ್ಲಿ ವಿವಿಧ ಚಟುವಟಿಕೆಗಾಗಿ ಸಾಲ ಸೌಲಭ್ಯ ಪಡೆದಿದ್ದಾರೆ. ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಬ್ಯಾಂಕ್​ಗಳಿಂದ ಶೈಕ್ಷಣಿಕ ಸಹಾಯಧನ ಸೌಲಭ್ಯಗಳು ಲಭ್ಯವಿದೆ ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿದರು. ಸಭೆಯಲ್ಲಿ ಆಯೋಗದ ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಸಮಿತಿ ಸದಸ್ಯ ನಖ್ವಾ ಯಹ್ಯಾ, ಎ.ಎಸ್​.ಪಿ ಸುಧಾಕರ ನಾಯಕ್​, ಅಲ್ಪಸಂಖ್ಯಾತ ಇಲಾಖೆ ಜಿಲ್ಲಾ ಅಧಿಕಾರಿ ಜಿನೇಂದ್ರ ಎಂ., ವಕ್ಫ ಅಧಿಕಾರಿ ಅಬ್ದುಲ್​ ಲತ್​ೀ, ಯಶೋಧರ್​ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net