ಪ್ರೊ. ಬರಗೂರು ರಾಮಚಂದ್ರಪ್ಪಗೆ ಡಾ. ಕಾರಂತ ಪ್ರಶಸ್ತಿ

ಕಾರಂತ ಪ್ರಶಸ್ತಿಗೆ ಭಾಜನರಾದ ಹಿರಿಯ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ. ಕಾರಂತ ವಿಶೇಷ ಪುರಸ್ಕಾರಕ್ಕೆ ಭಾಜನರಾದ ಡಾ. ಪಿ.ವಿ. ಭಂಡಾರಿ, ಗಣೇಶ ಕೊರಗ ಕುಂಭಾಶಿ, ಯು.ಮಹೇಶ್ವರಿ ಕಾಸರಗೋಡು, ಜಾನ್​ ಡಿಸೋಜ ಕುಂದಾಪುರ ಹಾಗೂ ಡಾ.ಶ್ರೀಪಾದ ಭಟ್​.
ಕಾರಂತ ಪ್ರಶಸ್ತಿಗೆ ಭಾಜನರಾದ ಹಿರಿಯ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ. ಕಾರಂತ ವಿಶೇಷ ಪುರಸ್ಕಾರಕ್ಕೆ ಭಾಜನರಾದ ಡಾ. ಪಿ.ವಿ. ಭಂಡಾರಿ, ಗಣೇಶ ಕೊರಗ ಕುಂಭಾಶಿ, ಯು.ಮಹೇಶ್ವರಿ ಕಾಸರಗೋಡು, ಜಾನ್​ ಡಿಸೋಜ ಕುಂದಾಪುರ ಹಾಗೂ ಡಾ.ಶ್ರೀಪಾದ ಭಟ್​.
Published on: 

* ಅ.24ರಂದು ಕುಂದಾಪುರದಲ್ಲಿ ಪುರಸ್ಕಾರ ಪ್ರದಾನ

* ಐವರು ಸಾಧಕರಿಗೆ 'ಕಾರಂತ ವಿಶೇಷ ಪುರಸ್ಕಾರ'

ಉಡುಪಿ: ಕರ್ನಾಟಕ ಕರಾವಳಿಯ 'ಕಡಲ ಭಾರ್ಗವ' ಖ್ಯಾತಿಯ ಹಿರಿಯ ಸಾಹಿತಿ ಡಾ. ಕೆ.ಶಿವರಾಮ ಕಾರಂತ ಅವರ ಸ್ಮರಣಾರ್ಥ ಹಾಗೂ ಜನ್ಮದಿನದ ಸಂದರ್ಭದಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್​ ನೀಡುವ 'ಡಾ. ಕಾರಂತ' ಪ್ರಶಸ್ತಿಗೆ ಹಿರಿಯ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಆಯ್ಕೆಯಾಗಿದ್ದಾರೆ.

'ಕಾರಂತ ವಿಶೇಷ ಪುರಸ್ಕಾರ'ಕ್ಕೆ ಖ್ಯಾತ ಮನೋವೈದ್ಯ, ಲೇಖಕ ಮತ್ತು ಸಾಮಾಜಿಕ ಹೋರಾಟಗಾರ ಡಾ. ಪಿ.ವಿ. ಭಂಡಾರಿ, ಸಮಾಜ ಸೇವಕ ಗಣೇಶ ಕೊರಗ ಕುಂಭಾಶಿ, ನಿವೃತ್ತ ಪ್ರಾಧ್ಯಾಪಕಿ ಮತ್ತು ಲೇಖಕಿ ಯು.ಮಹೇಶ್ವರಿ ಕಾಸರಗೋಡು, ಪತ್ರಕರ್ತ ಜಾನ್​ ಡಿಸೋಜ ಕುಂದಾಪುರ ಹಾಗೂ ಖ್ಯಾತ ರಂಗತಜ್ಞ ಡಾ.ಶ್ರೀಪಾದ ಭಟ್​ ಭಾಜನರಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಅ.24ರಂದು ಸಂಜೆ 4 ಗಂಟೆಗೆ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜ್​ನಲ್ಲಿ ನಡೆಯಲಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಶಾಸಕ ಎ.ಕಿರಣಕುಮಾರ್​ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ. ಕೆ.ಎಂ. ವಸುಂಧರಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿದೆ.

ಮಾಜಿ ಸಚಿವ ಕೆ .ಜಯಪ್ರಕಾಶ ಹೆಗ್ಡೆ ಅವರು ಟ್ರಸ್ಟ್​ನ ತೆಮಾಸಿಕ ಬುಲೆಟಿನ್​ ಬಿಡುಗಡೆ ಮಾಡಲಿದ್ದಾರೆ. ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ತಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಎಚ್​. ಹರಿಪ್ರಸಾದ ಶೆಟ್ಟಿ, ಕಾರ್ಕಳ ಕರಾವಳಿ ರಂಗಾಯಣದ ನಿರ್ದೇಶಕ ಡಾ. ಬಿ.ಆರ್​. ವೆಂಕಟರಮಣ ಐತಾಳ ಪಾಳ್ಗೊಳ್ಳಲಿದ್ದಾರೆ.

ಸಂಜೆ 3 ಗಂಟೆಗೆ ಕರಾವಳಿ ರಂಗಾಯಣ ಕಾರ್ಕಳದ ರೆಪರ್ಟರಿ ತಂಡದಿಂದ ಬಿ.ಆರ್​. ವೆಂಕಟರಮಣ ಐತಾಳ ನಿರ್ದೇಶನದ 'ಕಾರಂತ ಕಥನ' ನಾಟಕ ಪ್ರದರ್ಶನಗೊಳ್ಳಲಿದೆ. ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಟ್ರಸ್ಟ್​ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ತಿಳಿಸಿದ್ದಾರೆ.

ರಾಷ್ಟ್ರೀಯ ವಿಚಾರ ಸಂಕಿರಣ

ಕಾಲೇಜ್​ನಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ 'ಕಾರಂತರ ಕಥನಗಳ ವರ್ತಮಾನದ ಮರು ಓದು' ವಿಷಯ ಕುರಿತಾಗಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ಸಾಂಸ್ಕೃತಿಕ ಚಿಂತಕ ಮತ್ತು ಹಿರಿಯ ವಕೀಲ ಎಎಸ್​ಎನ್​ ಹೆಬ್ಬಾರ ಉದ್ಘಾಟಿಸಲಿದ್ದಾರೆ. ಕುಂದಾಪುರ ಎಜುಕೇಷನ್​ ಸೊಸೈಟಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪಾಳ್ಗೊಳ್ಳಲಿದ್ದಾರೆ. ಮಂಗಳೂರು ವಿವಿಯ ಎಸ್​ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಕಾಸರಗೋಡು ಕೇರಳ ಕೇಂದ್ರಿಯ ವಿವಿ ಸಹಾಯಕ ಪ್ರಾಧ್ಯಾಪಕ ಪ್ರೊ.ಚೇತನ ಮುಂಡಾಜೆ, ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಮತ್ತು ಲೇಖಕಿ ಡಾ.ರೇಖಾ ಬನ್ನಾಡಿ, ಧಾರವಾಡ ಕರ್ನಾಟಕ ವಿವಿಯ ಡಾ. ಆರ್​.ಸಿ. ಹಿರೇಮಠ, ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ಡಾ.ಮಲ್ಲಪ್ಪ ಎಸ್​. ಬಂಡಿ ಆಗಮಿಸಲಿದ್ದಾರೆ. ಮಂಗಳೂರು ವಿವಿಯ ಎಸ್​ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಉಪನ್ಯಾಸಕ ಡಾ. ಯಶು ಡಿ., ಕೋಟೇಶ್ವರ, ಸರ್ಕಾರಿ ಪ.ಪೂ. ಕಾಲೇಜ್​ನ ಕನ್ನಡ ಉಪನ್ಯಾಸಕ ಡಾ. ಸುಧಾಕರ ದೇವಾಡಿಗ, ನಿವೃತ್ತ ಇಂಗ್ಲಿಷ್​ ಪ್ರಾಧ್ಯಾಪಕಿ ಮತ್ತು ಲೇಖಕಿ ಡಾ. ಪಾರ್ವತಿ ಜಿ. ಐತಾಳ, ಪ್ರಾಂಶುಪಾಲೆ ಮತ್ತು ಚಿಂತಕಿ ಡಾ.ನಿಕೇತನಾ, ರಂಗತಜ್ಞ ಡಾ.ಶ್ರೀಪಾದ್​ ಭಟ್​, ಡಾ.ಶಿವರಾಮ ಕಾರಂತ ಟ್ರಸ್ಟ್​ನ ಸದಸ್ಯ ಹಾಗೂ ಪ್ರಾಧ್ಯಾಪಕ ಡಾ.ಪ್ರಸಾದ ರಾವ್​ ಪ್ರತಿಕ್ರಿಯೆ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net