ಮಂಜೇಶ್ವರ: ಕೇರಳ ರಾಜ್ಯ ಸರ್ಕಾರ ಕೆೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಘೋಷಿಸಿದ ನಂತರ ಖಾಸಗಿ ಬಸ್ ಉದ್ಯಮ ತೀವ್ರ ಬಿಕ್ಕಟ್ಟಿನಲ್ಲಿದೆ. ಪ್ರಯಾಣಿಕರಿಲ್ಲದೆ ಮತ್ತು ಭಾರಿ ನಷ್ಟದಲ್ಲಿ ಓಡುತ್ತಿರುವ ಖಾಸಗಿ ಬಸ್‌ಗಳು ಜುಲೈ 1ರಿಂದ ಸೇವೆ ಸ್ಥಗಿತಗೊಳಿಸಲು ಸಿದ್ಧತೆ ನಡೆಸುತ್ತಿವೆ.
ಇದರ ಭಾಗವಾಗಿ, ಕಾಸರಗೋಡು ಜಿಲ್ಲೆಯ ಖಾಸಗಿ ಬಸ್‌ಗಳ ಮಾಲೀಕರು ಮೋಟಾರು ವಾಹನ ಇಲಾಖೆಗೆ ಜಿ ಫಾರ್ಮ್ ಸಲ್ಲಿಸಲು ಪ್ರಾರಂಭಿಸಿದ್ದಾರೆ. ಬಸ್ ಉದ್ಯಮ ಸ್ಥಗಿತಗೊಳ್ಳುವುದರೊಂದಿಗೆ, ಇದನ್ನೇ ನಂಬಿಕೊಂಡಿರುವ ಚಾಲಕರು ಮತ್ತು ಕಂಡಕ್ಟರ್‌ಗಳು ಸೇರಿದಂತೆ ಸಾವಿರಾರು ಕಾರ್ಮಿಕರ ಜೀವನೋಪಾಯವೂ ಅಸ್ತವ್ಯಸ್ತವಾಗಲಿದೆ.
ಸರ್ಕಾರ ಘೋಷಿಸಿರುವ ತೆರಿಗೆ ವಿನಾಯಿತಿಯಿಂದಲೂ ಯಾವುದೇ ಪ್ರಯೋಜನ ಇಲ್ಲವೆಂಬ ಮೌಲ್ಯಮಾಪನದ ಆಧಾರದ ಮೇಲೆ ಖಾಸಗಿ ಬಸ್ ಮಾಲೀಕರು ಸೇವೆ ನಿಲ್ಲಿಸಲು ನಿರ್ಧರಿಸಿದ್ದಾರೆ. ಮೋಟಾರು ವಾಹನ ಇಲಾಖೆ ಕಾಯ್ದೆಯಡಿ ರಸ್ತೆ ತೆರಿಗೆಯಿಂದ ವಿನಾಯಿತಿ ಪಡೆಯಲು ಖಾಸಗಿ ಬಸ್‌ಗಳು ಜಿ ಫಾರ್ಮ್ ಸಲ್ಲಿಸುತ್ತವೆ. ಸೇವೆ ನಡೆಯದ ಅವಧಿಯಲ್ಲಿ ಬಸ್ ಮಾಲೀಕರು ಭಾರಿ ತೆರಿಗೆ ಹೊಣೆಗಾರಿಕೆ ತಪ್ಪಿಸಲು ಇದು ಏಕೈಕ ಕಾನೂನು ಮಾರ್ಗವಾಗಿದೆ. ಖಾಸಗಿ ಬಸ್ ಉದ್ಯಮ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಸರ್ಕಾರ ಉಚಿತ ಪ್ರಯಾಣ ಪ್ರಾರಂಭಿಸಿತು ಮತ್ತು ಇದರ ಜತೆಗೆ, ಡೀಸೆಲ್ ಬೆಲೆಯಲ್ಲಿನ ಭಾರಿ ಏರಿಕೆ ಮತ್ತಷ್ಟು ನಷ್ಟಕ್ಕೆ ಕಾರಣವಾಗಿದೆ ಎಂದು ಕೇರಳ ರಾಜ್ಯ ಖಾಸಗಿ ಬಸ್ ನಿರ್ವಾಹಕರ ಒಕ್ಕೂಟದ ಪದಾಧಿಕಾರಿಗಳು ಆರೋಪಿಸುತ್ತಾರೆ.
ಮುಷ್ಕರ ತಪ್ಪಿಸಲು ಮಧ್ಯಪ್ರವೇಶ ಅಗತ್ಯ
ಮುಂದಿನ ತ್ರೈಮಾಸಿಕ ತೆರಿಗೆ ಪಾವತಿಸಲು ಕೊನೆ ದಿನವಾದ ಜೂನ್ 30ರವರೆಗೆ ಮಾಲೀಕರಿಗೆ ಜಿ ಫಾರ್ಮ್ ಸಲ್ಲಿಸಲು ಸಮಯವಿದೆ. ಮುಷ್ಕರಕ್ಕೆ ಮುಂಚಿತವಾಗಿ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ ಪರಿಸ್ಥಿತಿ ಮನವರಿಕೆ ಮಾಡುವುದಾಗಿ ಬಸ್ ಮಾಲೀಕರು ಹೇಳುತ್ತಾರೆ. ಜನರಿಗಾಗುವ ತೊಂದರೆ ಪರಿಗಣಿಸಿ ಮುಷ್ಕರ ತಪ್ಪಿಸಲು ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಯುಡಿಎಫ್ ನಾಯಕರು ಮತ್ತು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಳ್ಳದಂತೆ ತಡೆಯಲು ಸರ್ಕಾರ ಬಸ್ ಮಾಲೀಕರೊಂದಿಗೆ ತುರ್ತು ಚರ್ಚೆ ನಡೆಸಬೇಕಿದೆ.
ಸಾರ್ವಜನಿಕರಿಗೆ ತೊಂದರೆ
ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ಪ್ರಸ್ತುತ 500ಕ್ಕೂ ಹೆಚ್ಚು ಖಾಸಗಿ ಬಸ್‌ಗಳಿವೆ. ನಷ್ಟದಿಂದಾಗಿ ಈಗಾಗಲೇ ಕೆಲವು ಬಸ್ಗಳು ಸಂಚಾರ ನಿಲ್ಲಿಸಿವೆ. ಇನ್ನು ಸಂಪೂರ್ಣ ನಿಲ್ಲಿಸಿದರೆ ಗುಡ್ಡಗಾಡು ಪ್ರದೇಶ ಮತ್ತು ಒಳನಾಡಿನ ಪ್ರದೇಶಗಳಲ್ಲಿನ ಜನರಿಗೆ ತೀವ್ರ ಸಮಸ್ಯೆಯಾಗಲಿದೆ. ಅಲ್ಲದೆ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಮೇಲೆಯೂ ಪರಿಣಾಮ ಬೀರುತ್ತದೆ.
ಕಾಸರಗೋಡು ಜಿಲ್ಲೆಯಲ್ಲಿ 425ರಷ್ಟು ಖಾಸಗಿ ಬಸ್ ಸೇವೆ ನಡೆಸುತ್ತಿವೆ. ಉಚಿತ ಟಿಕೆಟ್ ಯೋಜನೆಯಿಂದಾಗಿ ಕಾಸರಗೋಡು- ತಲಪಾಡಿ ಮತ್ತು ಕಾಸರಗೋಡು-ಕಾಞಂಗಾಡ್ ಗ್ರಾಮೀಣ ಮಾರ್ಗದ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಕೊರತೆ ಹೆಚ್ಚಿದೆ. ರಾಜ್ಯ ಸರ್ಕಾರ ತೆರಿಗೆಯನ್ನು ಮೂರು ತಿಂಗಳುಗಳಿಗೆ 35 ಸಾವಿರ ರೂ.ಗೆ ಇಳಿಸುವುದಾಗಿ ತಿಳಿಸಿದೆ. ಇದನ್ನು ಲೆಕ್ಕ ಹಾಕಿದರೆ ದಿನಕ್ಕೆ 100 ರೂ. ಮಾತ್ರ ಲಾಭವಾದಂತಾಯಿತು. ಈ ಹಿನ್ನೆಲೆ ಬಸ್ ರಸ್ತೆಗಿಳಿಸಲು ಸಾಧ್ಯವಿಲ್ಲ. ಈ ಕಾರಣದಿಂದ ಈಗಾಗಲೇ ಅನೇಕ ಬಸ್‌ಗಳು ಜು.1 ರಿಂದ ಜಿ ಪಾರ್ಮ್ ಸಲ್ಲಿಸಿ ಸಂಚಾರ ನಿಲುಗಡೆಗೊಳಿಸುವ ಸೂಚನೆ ನೀಡಿವೆ.
— ಸುಬ್ಬಣ್ಣ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಖಾಸಗಿ ಬಸ್ ಮಾಲೀಕರ ಸಂಘ, ಕಾಸರಗೋಡು